Advertisement

ನೀರಿನ ಸೋರಿಕೆ ನಿಲ್ಲುತ್ತಲೇ ಇಲ್ಲ

11:30 AM Jan 05, 2018 | Team Udayavani |

ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಿದ್ದರೂ ಪೂರ್ಣ ಪ್ರಮಾಣದಲ್ಲಿ ನೀರಿನ ಸೋರಿಕೆ ತಡೆಗಟ್ಟಲು ಜಲಮಂಡಳಿಯಿಂದ ಸಾಧ್ಯವಾಗಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಬೇಸರ ವ್ಯಕ್ತಪಡಿಸಿದರು.

Advertisement

ಜಲಮಂಡಳಿ ಅಭಿಯಂತರರ ಸಂಘದಿಂದ ಕಾವೇರಿ ಭವನದಲ್ಲಿ ಗುರುವಾರ “ತಾಂತ್ರಿಕ ದಿನಚರಿ 2018′ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ಬೆಂಗಳೂರಿಗೆ ನೀರು ಪೂರೈಸುವಂತಹ ಕಷ್ಟಕರ ಕೆಲಸವನ್ನು ಜಲಮಂಡಳಿ ಎಂಜಿನಿಯರ್‌ಗಳು ಮಾಡುತ್ತಿದ್ದಾರೆ.

ಆದರೆ, ನೀರು ಸೋರಿಕೆ ಬಗ್ಗೆ ಮಾಹಿತಿ ನೀಡುವ ಅತ್ಯಾಧುನಿಕ ತಂತ್ರಜ್ಞಾನವಿದ್ದರೂ ನಗರದ ಒಂದು ಹಂತಕ್ಕೆ ಬೇಕಾಗುಷ್ಟು ನೀರು ನಿತ್ಯ ಸೋರಿಕೆಯಾಗುತ್ತಿದೆ. ನೀರಿನ ಕಳ್ಳತನ, ಮೀಟರ್‌ ಅಳವಡಿಸದಿರುವುದು ಮತ್ತು ಕೆಲವೆಡೆ ಅಧಿಕಾರಿಗಳು ಶಾಮೀಲಾಗಿರುವುದು ಇದಕ್ಕೆ ಕಾರಣ ಎಂದರು.

ಕಾಲ ಬದಲಾದರೂ, ಎಷ್ಟೇ ತಂತ್ರಜ್ಞಾನ ಬಂದರೂ, ನೀರು ಹರಿಸಲು ಇಂದಿಗೂ ವಾಲ್‌ಮೆನ್‌ಗಳನ್ನೇ ಅವಲಂಬಿಸಿದ್ದೇವೆ. ಸ್ಥಳೀಯ ಮಟ್ಟದ ಎಂಜಿನಿಯರ್‌ಗಳು ಅವರ ಮೇಲೆ ನಿಗಾ ಇರಿಸದಿದ್ದರೆ, ವಾಲ್‌ಮೆನ್‌ಗಳು ತಮಗೆ ಬೇಕಾದ ಕಡೆಗಳಲ್ಲಿ ನೀರು ಹರಿಸುತ್ತಾರೆ. ಹೀಗಾಗಿ ವಾಲ್‌ಮೆನ್‌ಗಳನ್ನು ನಿಯಂತ್ರಿಸುವಂತಹ ಕೆಲಸವನ್ನು ಕಿರಿಯ ಮತ್ತು ಸಹಾಯಕ ಎಂಜಿನಿಯರ್‌ಗಳು ಮಾಡಬೇಕು ಎಂದು ಸೂಚಿಸಿದರು. 

ನೀರು ನಿಲ್ಲಿಸಿದರೆ ಪರಿಸ್ಥಿತಿಯೇನು?: ಜಲಮಂಡಳಿಯ ಅಧಿಕಾರಿಗಳು ನಗರದ ಜನರಿಗೆ ನೀರು ಪೂರೈಸುವ ಉತ್ತಮ ಕೆಲಸ ಮಾಡುತ್ತಿದ್ದು, ಒಂದೊಮ್ಮೆ ಜಲಮಂಡಳಿಯ ಅಧಿಕಾರಿಗಳು ಒಂದು ವಾರದ ನೀರು ಪೂರೈಕೆ ಹಾಗೂ ಒಳಚರಂಡಿಗಳ ನಿರ್ವಹಣೆ ಕೈಬಿಟ್ಟರೆ ಪರಿಸ್ಥಿತಿ ಹೇಗಿರುತ್ತದೆ. ಅದೇ ರೀತಿ ಸಣ್ಣಪುಟ್ಟದಕ್ಕೆಲ್ಲ ಪೊಲೀಸರನ್ನು ದೂರಲಾಗುತ್ತದೆ.

Advertisement

ಒಂದೇ ಒಂದು ದಿನ ಪೊಲೀಸರು ಕಾರ್ಯನಿರ್ವಹಿಸಲಿಲ್ಲವೆಂದರೆ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯೇನು? ಹೀಗಾಗಿ ಅವರನ್ನು ಸದಾ ದೂರುವ ಬದಲಿಗೆ, ಅವರೊಂದಿಗೆ ಸೇರಿ ಕೆಲಸ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಜಾರ್ಜ್‌ ನುಡಿದರು. 

ಎಂಜಿನಿಯರ್‌ಗಳ ಸಂಘದ ಕಾರ್ಯದರ್ಶಿ ಎಂ.ದೇವರಾಜು ಮಾತನಾಡಿ, ಜಲಮಂಡಳಿಯಲ್ಲಿ ಎಂಜಿನಿಯರ್‌ಗಳ ಹುದ್ದೆಗಳು ಖಾಲಿಯಿದ್ದು, ಭರ್ತಿ ಮಾಡಲು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಬೇಕು. ಜತೆಗೆ ಸಿಬ್ಬಂದಿಗಳಿಗೆ ಹಳೆ ಪಿಂಚಣಿಯನ್ನೇ ಮುಂದುವರಿಸಬೇಕು ಎಂದು ಮನವಿ ಮಾಡಿದರು. 

ಅದಕ್ಕೆ ಸ್ಪಂದಿಸಿದ ಜಾರ್ಜ್‌ ಅವರು, ಸಿಬ್ಬಂದಿಗೆ ಹಳೆ ಪಿಂಚಣಿಯನ್ನು ನೀಡುವ ಕುರಿತಂತೆ ಕ್ರಮಕೈಗೊಳ್ಳುವಂತೆ ಜಲಮಂಡಳಿ ಅಧ್ಯಕ್ಷರಿಗೆ ಸೂಚಿಸಿದ್ದು, ಅವರು ಶಿಫಾರಸ್ಸು ಮಾಡಿದರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. 

ಕಾರ್ಯಕ್ರಮದಲ್ಲಿ ಇಂಡಿಯನ್‌ ವರ್ಚುಯಲ್‌ ಯೂನಿವರ್ಸಿಟಿ ಫಾರ್‌ ಪೀಸ್‌ ಅಂಡ್‌ ಎಜುಕೇಷನ್‌ನಿಂದ ಜಲಮಂಡಳಿಯ ಪ್ರಧಾನ ಎಂಜಿನಿಯರ್‌ ಕೆಂಪರಾಮಯ್ಯ ಅವರಿಗೆ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಲಾಯಿತು. ಈ ವೇಳೆ ಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್‌, ನೌಕರರ ಸಂಘದ ಅಧ್ಯಕ್ಷ ರಾಜಣ್ಣ ಸೇರಿ ಪ್ರಮುಖರು ಹಾಜರಿದ್ದರು. 

ರಸ್ತೆ ಅಗೆದರೆ ಜನರ ಹಣ ಪೋಲು: ಬಿಬಿಎಂಪಿಯಿಂದ ಒಂದು ಕಡೆಯಿಂದ ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ, ಮತ್ತೂಂದು ಕಡೆಯಿಂದ ಜಲಮಂಡಳಿಯವರು ರಸ್ತೆಯನ್ನು ಅಗೆಯುತ್ತಾರೆ. ಇದರಿಂದಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ನೀರು ಸೋರಿಕೆಯಾಗುತ್ತಿದ್ದರೆ ರಸ್ತೆ ಅಗೆಯುವುದು ತಪ್ಪಲ್ಲ.

ಆದರೆ, ಸೋರಿಕೆ ತಡೆಗಟ್ಟಿದ ನಂತರ ರಸ್ತೆಯನ್ನು ದುರಸ್ತಿ ಮಾಡುತ್ತಿಲ್ಲ. ಹೀಗಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗುತ್ತಿವೆ. ಈಗಾಗಲೇ ಸ್ಥಳೀಯ ಸಂಸ್ಥೆಗಳ ನಡುವೆ ಸಮನ್ವಯ ಸಮಿತಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next