Advertisement

Belthangady: ರಸ್ತೆ ಮಧ್ಯೆಯೇ ಬಸ್‌ ನಿಲ್ಲಿಸಿದರೆ ಶಿಸ್ತು ಕ್ರಮ

01:02 PM Sep 17, 2024 | Team Udayavani |

ಬೆಳ್ತಂಗಡಿ: ಸರಕಾರಿ ಸಾರಿಗೆ ಸಹಿತ ಖಾಸಗಿ ಬಸ್‌ ಚಾಲಕರು ರಸ್ತೆ ಮಧ್ಯೆಯೇ ಪ್ರಯಾಣಿಕರನ್ನು ಇಳಿಸುವ ಅಥವಾ ಬಸ್‌ ಹತ್ತಿಸುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿರುವ ವಿಚಾರವಾಗಿ ಪುತ್ತೂರು ವಿಭಾಗೀಯ ಸಂಚಾರ ಅಧಿಕಾರಿಗಳು ಚಾಲಕರಿಗೆ ತಿಳುವಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

Advertisement

ಬೆಳ್ತಂಗಡಿಯಿಂದ ಧರ್ಮಸ್ಥಳ ಮಾರ್ಗವಾಗಿ ಸಂಚರಿಸುತ್ತಿದ್ದ ಸಾರಿಗೆ ಬಸ್‌ ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ನಡುರಸ್ತೆಯಲ್ಲೇ ನಿಲ್ಲಿಸಿ ಪಿಕಪ್‌ ಮಾಡಿರುವ ಫೋಟೋ ಸಹಿತ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ಸಂಬಂಧ ಸಂಬಂಧಪಟ್ಟ ಚಾಲಕರಿಗೆ ಮೊದಲನೆಯದಾಗಿ ತಿಳುವಳಿಕೆ ನೋಟೀಸ್‌ ನೀಡುವ ಕ್ರಮಕ್ಕೆ ಮುಂದಾಗಿದ್ದು, ಮಾತ್ರವಲ್ಲದೆ ಎಲ್ಲ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರಕ್ಕೊಳಪಟ್ಟಂತೆ ಚಾಲಕರಿಗೆ ಅರಿವು ಮೂಡಿಸಲು ಪ್ರತ್ಯೇಕ ತಂಡ ನಿಯೋಜಿಸಲು ಕ್ರಮ ವಹಿಸಿದೆ.

ರಸ್ತೆ ಮಧ್ಯೆ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಪಿಕಪ್‌, ಡ್ರಾಪ್‌ ಮಾಡುವ ವಿಚಾರ ಈಗಾಗಲೆ ಗಮನಕ್ಕೆ ಬಂದಿದ್ದು, ಪ್ರಾಥಮಿಕವಾಗಿ ಎಲ್ಲ ಚಾಲಕರಿಗೆ ತಿಳಿವಳಿಕೆ ನೀಡಲಾಗುವುದು. ಈಗಾಗಲೆ ನಿಯಮ ಉಲ್ಲಂಘಿಸಿದ ಚಾಲಕರ ಮೇಲೆ ಶಿಸ್ತು ಕ್ರಮ ವಹಿಸಲಾಗುವುದು. ಜತೆಗೆ ಮುಂದೆ ಹೀಗಾಗದಂತೆ ಇಲಾಖೆ ಎಚ್ಚರಿಕೆ ವಹಿಸಲಿದೆ.
-ಜೈಶಾಂತ್‌, ಪುತ್ತೂರು ವಿಭಾಗೀಯ ಸಂಚಾರ ಅಧಿಕಾರಿ

ಈ ಕುರಿತು ಸಾರಿಗೆ ಇಲಾಖೆಗೆ ಸಾರ್ವಜನಿಕರು ದೂರು ನೀಡಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದು, ಚಾಲಕರಿಗೆ ಸೂಚನೆ ನೀಡಲಾಗಿದೆ. ಜತೆಗೆ ಸಾರಿಗೆ ಸಂಚಾರ ನಿಯಂತ್ರಣ ಅಧಿಕಾರಿಗಳಿಗೆ ಈ ಕುರಿತು ಚಾಲಕರಿಗೆ ನಿಯಮ ಉಲ್ಲಂಘಿಸದಂತೆ ಕ್ರಮವಹಿಸಲು ಮೇಲಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.