Advertisement

Belthangady: ರಸ್ತೆ ಮಧ್ಯೆ ಪ್ರಯಾಣಿಕರಿಗೆ ಬಸ್‌ ನಿಲುಗಡೆ; ಸಂಚಾರ ನಿಯಮ ಉಲ್ಲಂಘನೆ

01:04 PM Sep 13, 2024 | Team Udayavani |

ಬೆಳ್ತಂಗಡಿ: ಅನೇಕ ಅಪಘಾತಗಳಲ್ಲಿ ತನ್ನದಲ್ಲದ ತಪ್ಪಿಗೆ ದ್ವಿಚಕ್ರ ವಾಹನ ಸವಾರರು, ಕಾರು ಸವಾರರು, ಪಾದಚಾರಿಗಳು ಬಲಿಪಶುಗಳಾಗುವುದುಂಟು. ಈ ರೀತಿ ಆಗಲು ಕೆಲವು ಸಂಚಾರಿ ನಿಯಮಗಳ ಉಲ್ಲಂಘನೆಯೂ ನೇರ ಕಾರಣ ಎಂಬುದಕ್ಕೆ ಸಾರಿಗೆ ಸಹಿತ ಖಾಸಗಿ ಬಸ್‌ ಚಾಲಕರ ಬೇಜವಾಬ್ದಾರಿ ನಡೆಗಳು ಸಾಕ್ಷಿಯಾಗಿದೆ.

Advertisement

ಬೆಳ್ತಂಗಡಿಯಲ್ಲಿ ಚಾರ್ಮಾಡಿಯಿಂದ ಪುಂಜಾಲಕಟ್ಟೆವರೆಗೆ, ಇತ್ತ ಕೊಕ್ಕಡದಿಂದ ಉಜಿರೆವರೆಗೆ, ಗುರುವಾಯನಕೆರೆಯಿಂದ ಮೂಡುಬಿದಿರೆ, ಕಾರ್ಕಳ, ಉಪ್ಪಿನಂಗಡಿ ಸಹಿತ ರಾಜ್ಯ, ರಾಷ್ಟ್ರೀಯ, ಗ್ರಾಮೀಣ ರಸ್ತೆಗಳ ಅಕ್ಕಪಕ್ಕ ಇರುವ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಿಲುಗಡೆಗೊಳಿಸುವ ಸರಕಾರಿ ಸಹಿತ ಖಾಸಗಿ ಬಸ್‌ಗಳು ರಸ್ತೆ ಮಧ್ಯೆಯೇ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವ ಮೂಲಕ ನಿರ್ಲಕ್ಷ್ಯದ ಚಾಲನೆಗೆ ಕಾರಣರಾಗಿದ್ದಾರೆ.

ವಿದೇಶಗಳಲ್ಲಿ ಪ್ರಯಾಣಿಕರನ್ನು ಪಿಕ್‌ಅಪ್‌ ಮತ್ತು ಡ್ರಾಪ್‌ ಮಾಡಲು ವ್ಯವಸ್ಥಿತ ಕ್ರಮ ಇದ್ದರೆ ನಮ್ಮ ದೇಶದ ಪಟ್ಟಣಗಳಲ್ಲಿ ಈ ಸೌಲಭ್ಯ ಮಾಡಿದರೂ ಅರೆ ಪಟ್ಟಣ ಭಾಗದಲ್ಲಿ ಇನ್ನೂ ಸುಧಾರಣೆ ಕಂಡಿಲ್ಲ. ಬೆಳ್ತಂಗಡಿ ಸಂತೆಕಟ್ಟೆ, ಉಜಿರೆ ಸಹಿತ ಕೆಲ ಭಾಗಗಳಲ್ಲಿ ಬಸ್‌ ಬೇ ನಿರ್ಮಿಸಲಾಗಿದೆ. ಆದರೆ ಸಾರಿಗೆ ಬಸ್‌ಗಳು ರಸ್ತೆಯಲ್ಲೇ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಏರಿಸುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಆ್ಯಂಬುಲೆನ್ಸ್‌ ಸಹಿತ, ತುರ್ತು ಸೇವೆಗೆ ತೆರಳುವ ವಾಹನಗಳು, ಮುಂಜಾನೆ ಶಾಲಾ ಕಾಲೇಜಿಗೆ ತೆರಳುವ ಶಿಕ್ಷಕರು, ಇನ್ನಿತರ ರಸ್ತೆ ಸವಾರರು ಬಸ್‌ನ ಹಿಂದೆ ಸಾಲುಗಟ್ಟಿ ನಿಲ್ಲಬೇಕಾಗಿ ಬರುವುದಲ್ಲದೆ ಟ್ರಾಫಿಕ್‌ ಸಮಸ್ಯೆಯೂ ಉಂಟಾಗುತ್ತಿದೆ.

ಇದರಿಂದ ಅಪಘಾತಗಳಿಗೂ ಕಾರಣವಾಗುತ್ತಿದೆ. ಈ ಕುರಿತು ಸಾರಿಗೆ ಇಲಾಖೆಗೆ ಸಾರ್ವಜನಿಕರು ದೂರು ನೀಡಿದರೂ ಕ್ಯಾರೇ ಎನ್ನದ ಸ್ಥಿತಿ ಇದೆ. ಬೆಳ್ತಂಗಡಿ ಸಂಚಾರ ಠಾಣೆ ಪೊಲೀಸರಲ್ಲಿ ಸಾರ್ವಜನಿಕರು ಪ್ರಶ್ನಿಸಿದರೆ ಈ ಕುರಿತು ಕೆಎಸ್‌ಆರ್‌ಟಿಸಿ ಡಿಪೋಗೆ ದೂರು ನೀಡಲಾಗಿದೆ ಎನ್ನುತ್ತಿದ್ದಾರೆ. ಆದರೆ ಸಾಮಾನ್ಯ ಜ್ಞಾನ ಇಲ್ಲದ ಚಾಲಕರು ತಮ್ಮಿಂದ ಇತರರಿಗೆ ತೊಂದರೆ ಆಗುತ್ತಿರುವ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ.

ಪರವಾನಿಗೆ ರದ್ದುಗೊಳಿಸಲು ಆಗ್ರಹ
ರಸ್ತೆ ಮಧ್ಯೆ ಬಸ್‌ ಅನ್ನು ಪ್ರಯಾಣಿಕರಿಗೆ ನಿಲುಗಡೆಗೊಳಿಸಿ ಇತರ ವಾಹನ ಸವಾರರಿಗೆ ತೊಂದರೆ ನೀಡುವ ಚಾಲಕರ ಪರವಾನಿಗೆ ರದ್ದುಗೊಳಿಸಬೇಕು ಇಲ್ಲವೇ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮತ್ತೂಂದೆಡೆ ಪರವಾನಿಗೆ ನೀಡುವ ಆರ್‌.ಟಿ.ಒ. ಚಾಲಕರಿಗೆ ಸಾರಿಗೆ ನಿಯಮಗಳನ್ನು ಸಮರ್ಪಕವಾಗಿ ಹೇಳದೆ ಪರವಾನಿಗೆ ನೀಡುವುದರಿಂದಲೂ ಈ ನಡೆಗೆ ಕಾರಣವಾಗಿದೆ ಎಂದು ದೂರಲಾಗುತ್ತಿದೆ.

Advertisement

ಉಜಿರೆಯಲ್ಲಿ ರಸ್ತೆಯಲ್ಲೇ ಪಾರ್ಕಿಂಗ್‌
ಉಜಿರೆ ದ್ವಾರದಿಂದ ಕಾಲೇಜು ರಸ್ತೆಗೆ ಸಾಗುವ ವಿರುದ್ಧ ದಿಕ್ಕಿನಲ್ಲಿ ಹಾಗೂ ಉಜಿರೆಯಿಂದ ಅನುಗ್ರಹ ಶಾಲೆ ವಠಾರದವರೆಗೆ ರಸ್ತೆಯಲ್ಲೇ ಪಾರ್ಕಿಂಗ್‌ ಮಾಡುತ್ತಿರುವುದರಿಂದ ಏಕಮುಖ ಸಂಚಾರದ ರಸ್ತೆಯಂತಾಗಿದೆ. ವಾಹನಗಳನ್ನು ರಸ್ತೆಯಲ್ಲೇ ಪಾರ್ಕಿಂಗ್‌ ಮಾಡಿ ಹೋಗುತ್ತಿರುವುದು ಕಂಡುಬಂದಿದೆ. ಆದರೆ ಸಂಚಾರ ಪೊಲೀಸರು ಕೇವಲ ಹೆಲ್ಮೆಟ್‌, ಸೀಟು ಬೆಲ್ಟ್ ಹಾಕದವರಿಗಷ್ಟೆ ದಂಡ ವಿಧಿಸಿದೆ. ಮಾರ್ಗ ಮಧ್ಯ ವಾಹನ ನಿಲ್ಲಿಸಿ ದುರ್ವರ್ತನೆ ತೋರುವ ಚಾಲಕ ಹಾಗೂ ನಿರ್ವಾಹಕರ ಮೇಲೂ ದಂಡ ವಿಧಿಸಿ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next