Advertisement

ಜಲ ಬಜೆಟ್‌ ಮಂಡನೆ ಅನಿವಾರ್ಯ

12:51 PM Mar 25, 2017 | Team Udayavani |

ದಾವಣಗೆರೆ: ಮುಂದಿನ ದಿನಗಳಲ್ಲಿ ಪ್ರತೀ ಹಂಗಾಮಿಗೆ ಜಲ ಆಯ-ವ್ಯಯ ಮಂಡಿಸಿ, ಕೃಷಿ ಚಟುವಟಿಕೆ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೇದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. 

Advertisement

ಶುಕ್ರವಾರ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆಯ ವಿಸ್ತರಣಾಧಿಧಿಕಾರಿಗಳಿಗೆ ಬೇಸಿಗೆಯ  ತಿಂಗಳಲ್ಲಿ ತೋಟಗಾರಿಕೆ ಬೆಳೆಗಳ ನಿರ್ವಹಣೆ ಕುರಿತ ತರಬೇತಿ ಉದ್ಘಾಟಿಸಿ, ಮಾತನಾಡಿದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ನೀರಿನ ಹಾಹಾಕಾರವಿದ್ದು, ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ.

ಕೊಳವೆಬಾವಿಗಳಲ್ಲಿ ನೀರು ಬತ್ತಿದ್ದು, ಟ್ಯಾಂಕರ್‌ಗಳಲ್ಲಿ ತೋಟಗಳಿಗೆ ನೀರುಣಿಸುವ ದೃಶ್ಯವನ್ನು ಜಿಲ್ಲೆಯಾದ್ಯಂತ ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ  ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಾಯದಿಂದ ಪ್ರತಿ ಬೆಳೆಗೆ ತಿಂಗಳುವಾರು ಬೇಕಾಗುವ ನೀರಿನ ಅವಶ್ಯಕತೆ ಬಗ್ಗೆ ಜಲ ಆಯವ್ಯಯ ಮಂಡಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. 

ಅಡಿಕೆಯಲ್ಲಿ ಹಿಡಿಮುಂಡಿಗೆ ನ್ಯೂನತೆಯ ನಿರ್ವಹಣೆ ಎಂಬ ವಿಸ್ತರಣಾ ಪ್ರತಿ ಬಿಡುಗಡೆಮಾಡಿ ಮಾತನಾಡಿದ ಸುಜಲಾ ಯೋಜನೆಯ ಯೋಜನಾಧಿಕಾರಿ ಡಾ| ಜಿ.ಆರ್‌. ರಾಘವೇಂದ್ರ ಪ್ರಸಾದ್‌, ಬೇಸಿಗೆ ತಿಂಗಳುಗಳಲ್ಲಿ ನೀರಿನ ಸಂರಕ್ಷಣೆ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜೊತೆಗೆ ಮುಂಬರುವ ಮುಂಗಾರಿಗೆ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಎಲ್ಲಾ ವಿಸ್ತರಣಾ ಕಾರ್ಯಕರ್ತರದ್ದಾಗಿದೆ ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಕೃಷಿ ಕೇಂದ್ರದ ಮುಖ್ಯಸ್ಥ ಡಾ| ಟಿ.ಎನ್‌. ದೇವರಾಜ್‌ ಮಾತನಾಡಿ, ಇಲಾಖೆ ಮತ್ತು  ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಸಮಯಕ್ಕನುಗುಣವಾಗಿ ಅಗತ್ಯ ತಂತ್ರಜ್ಞಾನ ಮಾಹಿತಿ ನೀಡುತ್ತಿದ್ದು, ಪ್ರಸ್ತುತ ಬರಗಾಲದ ಪರಿಸ್ಥಿತಿಯಲ್ಲಿ ನೀರು ನಿರ್ವಹಣೆ ಹಾಗೂ ರೋಗ ಮತ್ತು ಕೀಟಗಳ ಹತೋಟಿಯ ಬಗ್ಗೆ  ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಮಂಜಸವಾಗಿದೆಂದರು. 

Advertisement

ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳ ನಿರ್ವಹಣೆ ಬಗ್ಗೆ ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ. ಬಸವನಗೌಡ, ನೀರಿನ ನಿರ್ವಹಣೆ ಬಗ್ಗೆ ಮಣ್ಣು ವಿಜ್ಞಾನ ತಜ್ಞ ಎಚ್‌.ಎಂ. ಸಣ್ಣಗೌಡ್ರ, ರೋಗ ಮತ್ತು ಕೀಟ ನಿರ್ವಹಣೆ ಬಗ್ಗೆ ಸಸ್ಯ ಸಂರಕ್ಷಣಾ ತಜ್ಞರಾದ ಎನ್‌. ಪ್ರಸನ್ನಕುಮಾರ ಉಪನ್ಯಾಸ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next