ಶಿವಮೊಗ್ಗ: ನಾವೆಲ್ಲ ಇಂದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದರೆ ಅದಕ್ಕೆ ವೀರ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುತ್ತಿರುವುದೇ ಕಾರಣ ಎಂದು ಸಹ್ಯಾದ್ರಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಟಿ. ಪರಮೇಶ್ವರ್ ನಾಯ್ಕ ಹೇಳಿದರು.
ನಗರದ ಬೊಮ್ಮನಕಟ್ಟೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಏರ್ಪಡಿಸಿದ್ದ “ದೇಶಸೇವೆಯಲ್ಲಿ ಯುವಕರ ಪಾತ್ರ’ ಎಂಬ ವಿಷಯ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಸಿಲು, ಚಳಿ ,ಮಳೆ ಯಾವುದನ್ನು ಲೆಕ್ಕಿಸದೆ ಹಗಲಿರುಳು ದೇಶಸೇವೆ ಮಾಡುತ್ತಿರುವ ಯೋಧರು ನಿಜವಾದ
ತ್ಯಾಗಿಗಳು. ಹಾಗಾಗಿ ನಾವೆಲ್ಲರು ದೇಶಸೇವೆಯೆ ಈಶ ಸೇವೆಯೆಂದು ತಿಳಿಯಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಾಗರಾಜ್ ನಾಯ್ಕ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕೇವಲ ಇಂಜಿನಿಯರ್, ಡಾಕ್ಟರ್ ಆಗಬೇಕೆಂಬ ಕನಸು ಕಾಣುತ್ತಾರೆ. ಯುವಜನತೆ ಭಾರತೀಯ ಸೈನ್ಯ ಸೇರ್ಪಡೆಗೊಂಡು ದೇಶ ರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ದೇಶ ಎಂದರೆ ನಾವು ಕೃಷಿ ಮಾಡುತ್ತಿರುವ ಭೂಮಿ, ನೀರು, ಗಾಳಿ, ಪರಿಸರ ಇದೆಲ್ಲವು ಸೇರುತ್ತದೆ. ನಾವು ಇವೆಲ್ಲವನ್ನು ಕಾಪಾಡಿದರೆ ಅದುವೇ ದೇಶಸೇವೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಮಂಜುನಾಥ್, ಸೈನಿಕ ವೃತ್ತಿ ಅತ್ಯಂತ ಪವಿತ್ರ ವೃತ್ತಿ . ಇಂದು ದೇಶದ ಸುರಕ್ಷತೆ ಹಾಗೂ ಭದ್ರತೆಗೆ ಸೈನಿಕರೇ ಕಾರಣ. ಸರ್ಕಾರವು ಸೈನಿಕರಿಗೆ ಮತ್ತಷ್ಟು ನೆರವನ್ನು ನೀಡಬೇಕು, ದೇಶದ ಯುವಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರಬೇಕು ಎಂದರು.
ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಸ್ಟಲ್ ವಾರ್ಡನ್ ಕೊಟ್ರೇಶ್, ಮೋಹನ್, ಪ್ರಶಾಂತ್ ನಾಯ್ R, ಹರೀಶ್ ನಾಯ್ಕ , ಕಿರಣ್ ನಾಯ್ಕ, ಮಂಜು ನಾಯ್ಕ, ಅಭಿರಾಮ್ ಮತ್ತಿತರರು ಇದ್ದರು.