3 ದಶಕದ ಬಳಿಕವಾದರೂ ವಿವಾದವನ್ನು ಶಾಂತಿ ಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಚಿಂತನಮಂಥನ ನಡೆಯುತ್ತಿದೆ ಎನ್ನುವುದೇ ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ.
ರಾಮ ಜನ್ಮಭೂಮಿಯಿಂದ ಸಾಕಷ್ಟು ದೂರದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಬಾಬರಿ ಮಸೀದಿ ನಿರ್ಮಿಸಲು ನಮ್ಮ ಅಡ್ಡಿಯಿಲ್ಲ ಎಂದು ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಹೇಳಿರುವುದು ದೇಶ ಕಂಡ ಅತ್ಯಂತ ಸೂಕ್ಷ್ಮ ಪ್ರಕರಣವೆಂದೇ ಅರಿಯಲ್ಪಡುವ ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸುಪ್ರೀಂ ಕೋರ್ಟಿಗೆ ಮಂಗಳವಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಕ್ಫ್ ಮಂಡಳಿ ಈ ಅಭಿಪ್ರಾಯ ತಿಳಿಸಿದೆ. ಬಾಬರಿ ಮಸೀದಿ ನಮ್ಮ ಆಸ್ತಿ ಎಂದು ಪ್ರತಿಪಾದಿಸುತ್ತಿದೆ ವಕ್ಫ್ ಮಂಡಳಿ. ಹೀಗಾಗಿ ಈ ವಿವಾದವನ್ನು ಸೌಹಾರ್ದಯುತವಾಗಿ ಕೊನೆಗೊಳಿಸುವ ನಿಟ್ಟಿನಲ್ಲಿ ವಕ್ಫ್ ಮಂಡಳಿಯ ಈ ತೀರ್ಮಾನ ಮುಖ್ಯವಾಗುತ್ತದೆ. ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಅಯೋಧ್ಯೆ ವಿವಾದದ ಕಕ್ಷಿದಾರರಲ್ಲಿ ವಕ್ಫ್ ಮಂಡಳಿಯೂ ಒಂದು. ಕಕ್ಷಿದಾರರೇ ವಿವಾದ ಬಗೆಹರಿಸಲು ಮುಂದಾಗಿರುವುದರಿಂದ ಆಶಾಕಿರಣ ಕಾಣಿಸಿದೆ. ಕೇಸನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಲು ಆಗ್ರಹಿಸಿ ಅರ್ಜಿ ಸಲ್ಲಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಹಲವು ನಾಯಕರು ವಕ್ಫ್ ಮಂಡಳಿಯ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಆದರೆ ಮುಸ್ಲಿಂ ಸಮುದಾಯದಿಂದ ಮಾತ್ರ ಇನ್ನೂ ಯಾವುದೇ ಪ್ರತಿಕ್ರಿಯೆ ಬರದಿರುವುದು ಗಮನಾರ್ಹ. ಏನೇ ಆದರೂ ಸರಿಸುಮಾರು ಮೂರು ದಶಕಗಳ ಬಳಿಕವಾದರೂ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಚಿಂತನಮಂಥನ ನಡೆಯುತ್ತಿದೆ ಎನ್ನುವುದೇ ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ.
90ರ ದಶಕದ ಬಳಿಕ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದ ಘಟನೆಯಿದು. 1992, ಡಿ.6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮಗೊಳ್ಳುವುದರೊಂದಿಗೆ ದೇಶದ ರಾಜಕೀಯ ಚರಿತ್ರೆ ಮಾತ್ರ ಬದಲಾದದ್ದಲ್ಲ, ಜತೆಗೆ ಸಾಮಾಜಿಕ ಮತ್ತು ಧಾರ್ಮಿಕ ಅಂತರವೂ ಹೆಚ್ಚುತ್ತಾ ಹೋಯಿತು. ಈ ವಿವಾದವನ್ನು ಕೆದಕುವ ಮೂಲಕ ರಾಜಕೀಯ ಬಲವರ್ಧಿಸಿಕೊಳ್ಳುವ ಬಿಜೆಪಿಯ ಉದ್ದೇಶ ಈಗ ಈಡೇರಿದೆ. ವಿಶೇಷವೆಂದರೆ ಕೇಸರಿ ಪಕ್ಷವೂ ಅಧಿಕಾರಕ್ಕೇರಿದ ಬಳಿಕ ಮಾತುಕತೆಯೇ ಅಯೋಧ್ಯೆ ವಿವಾದಕ್ಕೆ ಪರಿಹಾರ ಎಂದು ಹೇಳುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಪದೇ ಪದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸುವ ಮಾತನ್ನು ಹೇಳುತ್ತಿದ್ದಾರೆ. ಅರ್ಥಾತ್ ರಾಮನ ಹೆಸರಲ್ಲಿ ಇನ್ನೊಂದು ರಕ್ತಪಾತ ಬೇಡ ಎನ್ನುವುದು ಎಲ್ಲರ ನಿಲುವೂ ಆಗಿದೆ.
ಕಾನೂನಿನ ಮೂಲಕ ಅಯೋಧ್ಯೆ ವಿವಾದ ಬಗೆಹರಿಯುವುದಿಲ್ಲ ಎನ್ನುವುದು ಅಲಹಬಾದ್ ಹೈಕೋರ್ಟ್ ತೀರ್ಪಿನಿಂದಲೇ ಸ್ಪಷ್ಟವಾಗಿದೆ. 2.17 ಎಕ್ಕರೆ ವಿವಾದಗ್ರಸ್ತ ಭೂಮಿಯನ್ನು ರಾಮ ಲಲ್ಲಾ, ನಿರ್ಮೋಹಿ ಆಖಾಡ ಮತ್ತು ವಕ್ಫ್ ಮಂಡಳಿಗೆ ಸಮಾನವಾಗಿ ಹಂಚಿಕೊಟ್ಟ ತೀರ್ಪು ಯಾರಿಗೂ ಸಮ್ಮತವಾಗಿಲ್ಲ. ಎಲ್ಲ ಮೂರು ಕಕ್ಷಿಗಳು ತೀರ್ಪು ವಿರೋಧಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೇಗೆ ತೀರ್ಪು ನೀಡಿದರೂ ಯಾರಿಗಾದರೊಬ್ಬರಿಗೆ ನಷ್ಟವಾಗಲೇಬೇಕು. ಹೀಗಾಗಿ ಪ್ರಕರಣ ನ್ಯಾಯಾಲ ಯದ ಹೊರಗೆ ಬಗೆಹರಿಸಿಕೊಳ್ಳುವ ಕುರಿತು ಶ್ರೇಷ್ಠ ನ್ಯಾಯಾಧೀಶ ಖೇಹರ್ ಚಿಂತಿಸಿದ್ದಾರೆ. ಇದೀಗ ವಕ್ಫ್ ಮಂಡಳಿ ವಿವಾದಗ್ರಸ್ತ ಸ್ಥಳದಿಂದ ದೂರ ಹೋಗುವ ಇರಾದೆ ವ್ಯಕ್ತಪಡಿಸಿರುವುದು ಇದಕ್ಕೆ ಪೂರಕವಾಗಿದೆ. ಕೆಲ ದಿನಗಳ ಹಿಂದೆ ಆರ್‌ಎಸ್‌ಎಸ್ ಕೂಡ ಅಯೋಧ್ಯೆ ವಿಚಾರದಲ್ಲಿ ಪಟ್ಟು ಹಿಡಿಯುವುದಿಲ್ಲ ಎಂದಿದೆ. ಅಯೋಧ್ಯೆ ಚಳವಳಿ ಪ್ರಾರಂಭಿಸಿದ ಧರ್ಮ ಸಂಹತ್ ಕೈಗೊಳ್ಳುವ ನಿರ್ಧಾರಕ್ಕೆ ಆರ್‌ಎಸ್‌ಎಸ್ ಬದ್ಧವಾಗಿರುತ್ತದೆ ಎಂದು ಸಂಘದ ಮುಖಂಡರೊಬ್ಬರು ಹೇಳಿದ್ದಾರೆ. ಅಯೋಧ್ಯೆ ವಿವಾದಕ್ಕೆ ಹಲವು ಆಯಾಮಗಳಿವೆ. ಜನರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಚಿಕ್ಕದೊಂದು ತಪ್ಪು ನಡೆಯೂ ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು. ಇನ್ನೂ ಈ ವಿವಾದವನ್ನು ಎಳೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಹೀಗಾಗಿ ವಕ್ಫ್ ಮಂಡಳಿಯ ಅಭಿಪ್ರಾಯವನ್ನು ಅನುಮೋದಿಸುವುದು ಅತ್ಯಂತ ವಿವೇಚನಾಯುಕ್ತ ನಡೆಯಾಗುತ್ತದೆ. ದೇಶದಲ್ಲಿ ಬಗೆಹರಿಯಲು ಕಾದಿರುವ ಸಾವಿರಾರು ಗಂಭೀರ ಸಮಸ್ಯೆಗಳಿವೆ. ನವಭಾರತ ಕಟ್ಟಲು ಮುಂದಾಗಿರುವ ನಾವು ಮಂದಿರ -ಮಸೀದಿಯಂತಹ ವಿವಾದಗಳನ್ನು ಮೀರಿ ಚಿಂತಿಸುವ ಅಗತ್ಯವಿದೆ.