Advertisement

ಶಪಥ ಮುರಿದು ಒಂದಾದರು

10:34 AM Sep 02, 2017 | Team Udayavani |

ಕನ್ನಡ ಚಿತ್ರರಂಗದ ಗೀತರಚನೆಕಾರರಲ್ಲಿ ಬಿಝಿ ಇರುವವರಲ್ಲಿ ಕವಿರಾಜ್‌ ಕೂಡಾ ಒಬ್ಬರು. ಇಲ್ಲೀವರೆಗೆ ಅವರು ಬೇರೆ ಬೇರೆ ಚಿತ್ರಗಳಿಗೆ ಸಾಕಷ್ಟು ಹಾಡು ಬರೆದಿದ್ದಾರೆ. ಆದರೆ, ದಿನಕರ್‌ ತೂಗುದೀಪ ನಿರ್ದೇಶನದ ಯಾವ ಚಿತ್ರಕ್ಕೂ ಹಾಡು ಬರೆದಿಲ್ಲ. ದಿನಕರ್‌ ಅವರ ಈ ಹಿಂದಿನ ಮೂರು ಚಿತ್ರಗಳಲ್ಲಿ ಸಿಗದ ಅವಕಾಶ ಕವಿರಾಜ್‌ ಅವರಿಗೆ ನಾಲ್ಕನೇ ಚಿತ್ರದಲ್ಲಿ ಸಿಕ್ಕಿದೆ. 

Advertisement

ಹೌದು, ದಿನಕರ್‌ “ಲೈಫ್ ಜೊತೆ ಒಂದು ಸೆಲ್ಫಿ’ ಎಂಬ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದು, ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತವಾಗಿದೆ. ಈ ಚಿತ್ರಕ್ಕೆ ಕವಿರಾಜ್‌ ಕೂಡಾ ಹಾಡು ಬರೆಯುತ್ತಿದ್ದಾರೆ. ದಿನಕರ್‌ ಹಾಗೂ ಕವಿರಾಜ್‌ ಒಳ್ಳೆಯ ಸ್ನೇಹಿತರು. ಆದರೂ ದಿನಕರ್‌ ಚಿತ್ರದಲ್ಲಿ ಕವಿರಾಜ್‌ಗೆ ಹಾಡು ಬರೆಯುವ ಅವಕಾಶ ಸಿಗದಿರಲು ಕಾರಣವೇನು ಎಂದರೆ ಅದರ ಹಿಂದಿನ ಕಥೆ ಹೇಳುತ್ತಾರೆ ಕವಿರಾಜ್‌ ಹಾಗೂ ದಿನಕರ್‌. 

“ದಿನಕರ್‌ ಅವರ ಮೊದಲ ಚಿತ್ರ “ಜೊತೆ ಜೊತೆಯಲಿ’ಗೆ ಒಂದು ಹಾಡು ಬರೆದುಕೊಡುವಂತೆ ದಿನಕರ್‌ ಆಗ ಕೇಳಿದ್ದರು. ಆದರೆ, ನಾನು ಯಾವುದೋ ಬೇರೆ ಕೆಲಸಗಳಲ್ಲಿ ಬಿಝಿ ಇದ್ದಿದ್ದರಿಂದ ಹಾಡು ಬರೆಯಲು ಆಗಲ್ಲ ಎಂದೆ. ಅದಕ್ಕೆ ದಿನಕರ್‌ ಬೇಸರ ಮಾಡಿಕೊಂಡು ಮುಂದೆ ನನ್ನ ಯಾವ ಸಿನಿಮಾಕ್ಕೂ ಹಾಡು ಬರೆಸಲ್ಲ ಎಂದು ಶಪಥ ಮಾಡಿದ್ದರು. ಅದರಂತೆ ಈ ಹಿಂದಿನ “ನವಗ್ರಹ’, “ಸಾರಥಿ’ಯಲ್ಲೂ ಹಾಡು ಬರೆಸಲಿಲ್ಲ.

ಈಗ ಅವರ ಶಪಥವನ್ನು ಅವರೇ ಮುರಿದು “ಲೈಫ್ ಜೊತೆಗೆ ಒಂದು ಸೆಲ್ಫಿ’ಯಲ್ಲಿ ಅವಕಾಶ ಕೊಟ್ಟಿದ್ದಾರೆ’ ಎಂದರು ಕವಿರಾಜ್‌. ಪಕ್ಕದಲ್ಲೇ ಕುಳಿತಿದ್ದ ದಿನಕರ್‌ ನಗುತ್ತಾ, “ಅಂದು ಕವಿಗಳು ನನ್ನನ್ನು ಇವ ಜೂನಿಯರ್‌, ಹೊಸ ನಿರ್ದೇಶಕ ಏನ್‌ ಸಿನಿಮಾ ಮಾಡ್ತನೆ ಎಂದು ನನ್ನ ಸಿನಿಮಾಕ್ಕೆ ಹಾಡು ಬರೆಯಲಿಲ್ಲ. ಈಗ ಈ ಸಿನಿಮಾಕ್ಕೆ ಬರೆಯುತ್ತಿದ್ದಾರೆ’ ಎಂದರು. ಆಗ ಕವಿರಾಜ್‌, “ದಿನಕರ್‌ ಹೇಳಿದ್ದು ತಮಾಷೆ’ಗೆ ಎಂದರೆ, ದಿನಕರ್‌, “ಇಲ್ಲ ಸೀರಿಯಸ್‌’ ಎನ್ನುವ ಮೂಲಕ ಆರಂಭದ ದಿನಗಳನ್ನು ನೆನಪಿಸಿಕೊಂಡರು. 

ಅಂದಹಾಗೆ, “ಸಾರಥಿ’ ನಂತರ ದಿನಕರ್‌ ನಿರ್ದೇಶಿಸುತ್ತಿರುವ ಚಿತ್ರ “ಲೈಫ್ ಜೊತೆಗೆ ಒಂದು ಸೆಲ್ಫಿ’. ಈ ಚಿತ್ರಕ್ಕೆ ದಿನಕರ್‌ ಪತ್ನಿ ಮಾನಸ ಅವರು ಕಥೆ ಬರೆದಿದ್ದಾರೆ. ಇಂದಿನ ಯುವ ಜನತೆ ತಮ್ಮ ಜೀವನದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತಿದ್ದಾರೆಂಬ ಅಂಶಗಳ ಸುತ್ತ ಈ ಸಿನಿಮಾ ಸುತ್ತಲಿದೆಯಂತೆ. ಚಿತ್ರದಲ್ಲಿ ಪ್ರೇಮ್‌ ಸಾಫ್ಟ್ವೇರ್‌ ಕ್ಷೇತ್ರವರಾಗಿ ಕಾಣಿಸಿಕೊಂಡರೆ ಪ್ರಜ್ವಲ್‌ ಕೋಟ್ಯಾಧಿಪತಿಯ ಮಗನಾಗಿ ನಟಿಸುತ್ತಿದ್ದಾರೆ. ನಾಯಕಿ ಹರಿಪ್ರಿಯಾಗೆ ಇಲ್ಲಿ ರಶ್ಮಿ ಎಂಬ ಪಾತ್ರ ಮಾಡುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next