Advertisement

ಲಾಲ್‌ಬಾಗ್‌ ಇತಿಹಾಸ ಹೇಳಲಿದೆ ಅಶರೀರವಾಣಿ

01:10 AM Sep 16, 2019 | Team Udayavani |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) “ಬೆಂಗಳೂರು ದರ್ಶನ’ ಬಸ್‌ ಮಾದರಿಯಲ್ಲೇ “ಲಾಲ್‌ಬಾಗ್‌ ದರ್ಶನ’ಕ್ಕೆ ಪರಿಸರ ಸ್ನೇಹಿ “ಬಗ್ಗೀಸ್‌’ ಸಜ್ಜಾಗಿದೆ. ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನ ಪ್ರೇಕ್ಷಣಿಯ ಸ್ಥಳಗಳ ಇತಿಹಾಸ ಹೇಳುವ ಆಡಿಯೋ ತಂತ್ರಜ್ಞಾನವನ್ನು ಈ ಪರಿಸರ ಸ್ನೇಹಿ ವಾಹನದಲ್ಲಿ ಅಳವಡಿಸಲು ಮುಂದಾಗಿದೆ.

Advertisement

ಬಗ್ಗೀಸ್‌ನಲ್ಲಿ ಕುಳಿತು ಲಾಲ್‌ಬಾಗ್‌ನ ರಸ್ತೆಗಳಲ್ಲಿ ಸಂಚರಿಸುವಾಗ ಆ ರಸ್ತೆಯ ಇತಿಹಾಸ ಮಾತ್ರವಲ್ಲದೇ, ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಆಡಿಯೋ ಮಾಹಿತಿ ಪ್ರವಾಸಿಗರಿಗೆ ಸಿಗಲಿದೆ. ಮೆಟ್ರೋ ರೈಲಿನಲ್ಲಿ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡಲು ಇರುವ ಆಡಿಯೋ ವ್ಯವಸ್ಥೆ ಮಾದರಿಯನ್ನೇ ಬಗ್ಗೀಸ್‌ ವಾಹನದಲ್ಲಿ ಬಳಸಲಾಗಿದೆ. ಸೇವೆ ಆರಂಭವಾದರೆ, ಆಡಿಯೋ ಮೂಲಕ ಇತಿಹಾಸ ತಿಳಿಸುವ ರಾಜ್ಯದ ಮೊದಲ ಪ್ರಯತ್ನ ಇದಾಗಲಿದೆ.

ಎರಡು ವಾರದಲ್ಲಿ ಆಡಿಯೋ ಅಳವಡಿಕೆ: ಈಗಾಗಲೇ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ವಾಹನಗಳಿಗೆ ಆಡಿಯೋ ಅಳವಡಿಕೆಯಾಗಲಿದೆ. ಲಾಲ್‌ಬಾಗ್‌ನ ಇತಿಹಾಸ, ಸಸ್ಯಗಳ ತಳಿ, ಲಾಲ್‌ಬಾಗ್‌ ತೆರೆ ಹಿಂದಿರುವ ಸಾಧಕರ ಬಗ್ಗೆ ತಿಳಿಸುವ ಮಹತ್ವದ ಉದ್ದೇಶಕ್ಕೆ ತೋಟಗಾರಿಕೆ ಇಲಾಖೆ ಕೈ ಹಾಕಿದೆ. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಗೋಪುರ, ಫ‌ಲಪುಷ್ಪ ಪ್ರದರ್ಶನ ನಡೆಯುವ ಗಾಜಿನಮನೆ, ಲಾಲ್‌ಬಾಗ್‌ ಕೆರೆ, 4 ದ್ವಾರ, ಹೂದೋಟ, ಸಭಾಂಗಣ ಸೇರಿ ಸುಮಾರು 20ಕ್ಕೂ ಅಧಿಕ ಪ್ರೇಕ್ಷಣಿಕ ಸ್ಥಳಗಳಲ್ಲಿ ವಾಹನ ಸಂಚರಿಸಿ ಮಾಹಿತಿ ನೀಡಲಿದೆ.

ಲಾಲ್‌ಬಾಗ್‌ನಲ್ಲಿ ಈಗಾಗಲೇ ಇರುವ 5 ಪರಿಸರ ಸ್ನೇಹಿ ವಾಹನಗಳಲ್ಲಿ ಆಡಿಯೋ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಒಂದು ವಾಹನದಲ್ಲಿ 16 ಜನ ಕುಳಿತುಕೊಳ್ಳಲು ಸ್ಥಳವಿದ್ದು, ಒಬ್ಬರಿಗೆ 100 ರೂ. ಶುಲ್ಕವಿದೆ. 240 ಎಕರೆ, 4 ಕಿ.ಮೀ. ವ್ಯಾಪ್ತಿಯ ಲಾಲ್‌ಬಾಗ್‌ ಸುತ್ತಲು 45 ನಿಮಿಷಗಳಿಂದ 1 ಗಂಟೆ ಸಮಯ ಬೇಕಾಗುತ್ತದೆ. ಈ ಪರಿಸರ ಸ್ನೇಹಿ ವಾಹನವೊಂದಕ್ಕೆ 5 ಲಕ್ಷ ರೂ. ವೆಚ್ಚವಾಗಿದ್ದು, 8 ಗಂಟೆ ಬ್ಯಾಟರಿ ಚಾರ್ಜ್‌ ಮಾಡಿದರೆ 20 ಕಿ.ಮೀ. ಸಂಚರಿಸುತ್ತದೆ. ಪ್ರಸ್ತುತ ಈ ವಾಹನಗಳು ದಿನಕ್ಕೆ 3-4 ಟ್ರಿಪ್‌ ಮಾಡಲಿದ್ದು, ನಿತ್ಯ 250ರಿಂದ 300 ಜನ ಪ್ರಯಾಣಿಸುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 500ರ ಗಡಿ ದಾಟುತ್ತದೆ.

ವಾರ್ಷಿಕ 24 ಲಕ್ಷ ರೂ. ಆದಾಯ: ಲಾಲ್‌ಬಾಗ್‌ನಲ್ಲಿ 4 ದೊಡ್ಡ 1 ಸಣ್ಣ ಬಗ್ಗೀಸ್‌ ವಾಹನವನ್ನು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ತೋಟಗಾರಿಕೆ ಇಲಾಖೆಗೆ ಒಂದು ವಾಹನಕ್ಕೆ ಒಂದು ತಿಂಗಳಿಗೆ 50 ಸಾವಿರ ರೂ. ನೀಡಲಿದ್ದು, ವರ್ಷಕ್ಕೆ ಇಲಾಖೆಗೆ 24 ಲಕ್ಷ ರೂ. ಆದಾಯ ಬರಲಿದೆ.

Advertisement

ಕನ್ನಡ- ಇಂಗ್ಲಿಷ್‌ನಲ್ಲಿ ಮಾಹಿತಿ: ಸಸ್ಯಕಾಶಿಗೆ ಭೇಟಿ ನೀಡುವ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯ, ವಿದೇಶಿ ಪ್ರವಾಸಿಗರಿಗೆ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಲಾಲ್‌ಬಾಗ್‌ನ ಇತಿಹಾಸ ತಿಳಿಸುವ ಚಿಂತನೆಯಿದೆ. ಪ್ರಸ್ತುತ ವಾಹನ ಚಾಲಕರೇ ಎಲ್ಲಾ ಸ್ಥಳಗಳ ಮಾಹಿತಿ ನೀಡುತ್ತಿದ್ದು, ಆಡಿಯೋ ಅಳವಡಿಸಿದರೆ ಸಸ್ಯಕಾಶಿಯ ಇತಿಹಾಸ ಆಡಿಯೋ ಮೂಲಕವೇ ಕೇಳಬಹುದು. ಈ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಲಾಲ್‌ಬಾಗ್‌ನಲ್ಲಿರುವ ಗೋಪುರ, ಗಾಜಿನಮನೆ ಇತಿಹಾಸ ಬಹುತೇಕರಿಗೆ ತಿಳಿದಿಲ್ಲ. ಪರಿಸರ ಸ್ನೇಹಿ ಬಗ್ಗೀಸ್‌ ವಾಹನಗಳಿಗೆ ಆಡಿಯೋ ವ್ಯವಸ್ಥೆ ಅಳವಡಿಸಿದರೆ ಪ್ರವಾಸಿಗರಿಗೆ ಲಾಲ್‌ಬಾಗ್‌ನ ಇತಿಹಾಸ ತಿಳಿಸಲು ಸುಲಭವಾಗುತ್ತದೆ.
-ಸುನೀಲ್‌, ಬಗ್ಗೀಸ್‌ ವಾಹನ ಚಾಲಕ

* ಮಂಜುನಾಥ್‌ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next