ಕುದೂರು: ಚೆನ್ನೈನಿಂದ ಬಂದಿದ್ದ ದಂಪತಿಯ ಎರಡೂವರೆ ವರ್ಷದ ಮಗುವಿಗೆ ಸೋಂಕು ಧೃಢ ಪಟ್ಟಿದ್ದು, ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಟುಂಬ ಮೇ. 9ರಂದು ತಮಿಳುನಾಡಿನ ಚೆನ್ನೈ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಮಾರಸಂದ್ರಕ್ಕೆ ಕುಟುಂಬ ಬಂದಿತ್ತು. ಕುಟುಂಬವನ್ನು ಕ್ವಾರಂಟೈನ್‌ನಲ್ಲಿರಿಸದೇ ಹೋಂ ಕ್ವಾರಂಟೈನ್ ಮಾಡಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಗ್ರಾಮದಲ್ಲಿ ಕೋವಿಡ್ 19 ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯಧಿಕಾರಿಗಳ ತಂಡ ಪಿಎಸ್‌ಐ ಮಂಜುನಾಥ್ ನೇತೃತ್ವದಲ್ಲಿ ಭಾನುವಾರ ತಡರಾತ್ರಿ ಮಾರಸಂದ್ರ ಮನೆಯಲ್ಲಿ ಕ್ವಾರಂಟರ್‌ನಲ್ಲಿದ್ದ ಮಗು ಮತ್ತು ತಂದೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಗುವಿನ ತಂದೆ ಕಳೆದ 13 ವರ್ಷಗಳಿಂದ ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಚೆನ್ನೈನಲ್ಲಿ ಕೋವಿಡ್ 19 ಹೆಚ್ಚಾಗುತ್ತಿದ್ದಂತೆ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಆನ್‌ಲೈನ್‌ನಲ್ಲಿ ಪಾಸ್ ಅನುಮತಿ ಪಡೆದು ಕುಟುಂಬಸ್ಥರು ಮೇ 9ರಂದು ಕುದೂರು ಹೋಬಳಿಯ ಮಾರಸಂದ್ರ ಗ್ರಾಮದ ತಂದೆ ಮನೆಗೆ ಮರಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸುಗ್ಗನಹಳ್ಳಿ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ, ಕುಟುಂಬಸ್ಥರನ್ನು ತಪಾಸಣೆ ನೆಡೆಸಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು.
ಮಗುವಿನ ಚಿಕ್ಕಪ್ಪನ ಓಡಾಟ: ಸೋಂಕಿರುವ ಮಗುವಿನ ಚಿಕ್ಕಪ್ಪ, ಅಗತ್ಯ ವಸ್ತುಗಳ ಖರೀದಿಗೆ ಕುದೂರು ಮತ್ತು ಹುಲಿಕಲ್ ಗ್ರಾಮದೆಲ್ಲೆಡೆ ಓಡಾಡಿದ್ದಾನೆ. ಭಾನುವಾರ ತಡರಾತ್ರಿ ಆರೋಗ್ಯಧಿಕಾರಿಗಳು ಮಗುವನ್ನು ವಶಕ್ಕೆ ಪಡೆದ ನಂತರ ಸೋಂಕಿತ ಮಗುವಿನ ಚಿಕ್ಕಮ್ಮ ಹುಲಿಕಲ್ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದಾರೆ.
ಶಾಸಕ ಎ.ಮಂಜುಗೆ ಕೋವಿಡ್ 19 ಆತಂಕ: ಗ್ರಾಮದ ಹಿರಿಯ ರಂಗನಾಥ್‌ರಾವ್, ಮೇ .20ರಂದು ನಿಧನರಾಗಿದ್ದ ಹಿನ್ನಲೆ ಅಂತಿಮ ದರ್ಶನಕ್ಕೆ ತೆರಳಿದ್ದ ಶಾಸಕ ಎ.ಮಂಜುನಾಥ್, ಅರ್ಧ ಗಂಟೆ ಇದ್ದರು. 25ರಂದು ಮಾರಸಂದ್ರ ಗ್ರಾಮದ ಮಗುವಿಗೆ ಕೋವಿಡ್ 19 ಸೋಂಕು ಧೃಢಪಟ್ಟ ಹಿನ್ನಲೆಯಲ್ಲಿ ಶಾಸಕ ಎ.ಮಂಜುರವರಿಗೂ ಕೋವಿಡ್ 19 ಭೀತಿ ಎದುರಾಗಿದೆ. ಜಿಲ್ಲೆಯ ಉನ್ನತಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮದ ಸುತ್ತ 1 ಕಿ.ಮೀ. ಪ್ರದೇಶ ಸೀಲ್‌ಡೌನ್ ಮಾಡಿ, ಗ್ರಾಮಕ್ಕೆ ನಿರ್ಬಂಧ ಹೇರಲಾಗಿದೆ.