Advertisement
ದೊಡ್ಡ ಬಸವಣ್ಣ ದೇವಸ್ಥಾನದ ಬಳಿ ಸೋಮವಾರದಿಂದ ಆರಂಭವಾಗಿರುವ ಎರಡು ದಿನಗಳ ಐತಿಹಾಸಿಕ ಕಡಲೆ ಪರಿಷೆಯಲ್ಲಿ ಹೆಗಲ ಮೇಲೆ ಹಸಿರು ಟವಲ್ ಹಾಕಿದ ರೈತರ ಕಡಲೆ ಮಾರಾಟ, ತಾಜಾ ಮಾಲ್, ಇಲ್ಲಿ ಸೇರ್ ಲೆಕ್ಕಾ.. ಎಂದು ಕೂಗಿ ಜನರನ್ನು ತನ್ನತ್ತ ಸೆಳೆಯುತ್ತಿದ್ದ ಮಹಿಳೆಯರ ಕಡಲೆ ವ್ಯಾಪಾರ ಕಾಂಕ್ರೀಟ್ ಕಾಡಿನೊಳಗೆ ಗ್ರಾಮೀಣ ಸೊಗಡನ್ನು ಕಣ್ಮುಂದೇ ತೆರೆದಿಟ್ಟಿತ್ತು.
Related Articles
Advertisement
ಪ್ರವಾಸಿ ತಾಣ ಮಾಡುವ ಚಿಂತನೆ: ಬಸವಣ್ಣನ ಕಂಚಿನ ವಿಗ್ರಹಕ್ಕೆ ಕಡಲೆಕಾಯಿಂದ ತುಲಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ನೀಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಇತಿಹಾಸ ಪ್ರಸಿದ್ಧ ದೊಡ್ಡ ಬಸವಣ್ಣ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಚಿಂತನೆ ಪಾಲಿಕೆ ಮುಂದಿದೆ ಎಂದರು.
ಈ ಹಿಂದೆ ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಅವರು, ಐತಿಹಾಸಿ ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡುತ್ತಿದ್ದರು. ಆದರೆ ಅವರು ಈಗ ನಮ್ಮೊಂದಿಗೆ ಇಲ್ಲದಿರುವುದು ಬೇಸರ ಸಂಗತಿ. ಬೆಂಗಳೂರನ್ನು ಸ್ವತ್ಛವಾಗಿಡಲು ಬಿಬಿಎಂಪಿ ಪಣತೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ನಿಷೇಧಿಸಿದೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬ್ಯಾಗ್ ಬಳಸಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.
ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ಅನಂತ್ ಕುಮಾರ್ ಕಡಲೆ ಪರಿಷೆಯನ್ನು ರಾಷ್ಟ್ರೀಯ ಉತ್ಸವನ್ನಾಗಿ ಮಾಡುವ ಕನಸು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನಂತ ಕುಮಾರ್ ಅವರ ಕನಸನ್ನು ಈಡೇರಿಸಬೇಕು. ರಾಜ್ಯ ಸರ್ಕಾರ ಕೂಡ, ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಮನವಿ ಪತ್ರ ಸಲ್ಲಿಸಬೇಕು. ಬಸವನಗುಡಿಯ ದೊಡ್ಡಗಣಪತಿ ದೇವಾಲಯ ವ್ಯಾಪ್ತಿಯಲ್ಲಿ ಹಲವು ಐತಿಹಾಸಿಕ ದೇವಾಲಯಗಳಿದ್ದು ಇವುಗಳನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದರು.
ತಂದೆ ಕೊಟ್ರು… ಮಗಳು ವಾಪಸ್ ಪಡೆದ್ರು!: ಕಡಲೆ ಪರಿಷೆ ಸೋಮವಾರ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಪ್ಲಾಸ್ಟಿಕ್ ಬ್ಯಾಗ್ ನಿಷೇಧದ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಬಂದಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪಾಲಿಥೇನ್ ಬ್ಯಾಗ್ ವಿತರಣೆ ಮಾಡಿ ತೆರಳಿದರು.
ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಶಾಸಕಿ ಸೌಮ್ಯಾರೆಡ್ಡಿ ಈ ಬ್ಯಾಗ್‌ಗಳು ಪರಿಸರಕ್ಕೆ ಮಾರಾಕ ಎಂಬುವುದನ್ನು ತಿಳಿದು, ವಾಪಸ್ ಪಡೆದರು. ಬಳಿಕ ಹತ್ತು ಸಾವಿರ “ಪರಿಸರ ಸ್ನೇಹಿ’ ಬ್ಯಾಗ್‌ಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಪ್ಲಾಸ್ಟಿಕ್ ನಿಷೇಧ ಸಂಬಂಧ ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದರು.
ಇದೇ ಮೊದಲ ಬಾರಿ ಕಡಲೆಕಾಯಿ ಪರಿಷೆಗೆ ಬಂದಿದ್ದೇನೆ. ಇಲ್ಲಿ ಹಳ್ಳಿಯ ವಾತಾವರಣ ನಿರ್ಮಾಣವಾಗಿರುವುದ ಕಂಡು ನಿಜಕ್ಕೂ ಖುಷಿಯಾಗುತ್ತಿದೆ.-ಗಗನ್ ಕುಮಾರ್, ನಂದಿನಿ ಲೇಔಟ್ ಪ್ರತಿ ವರ್ಷ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಭೇಟಿ ನೀಡುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ.
-ಪಾರಿಜಾತ, ಚಿಕ್ಕಬಳ್ಳಾಪುರ ಕೆಲವು ದೇವಾಲಯಗಳಲ್ಲಿ ಹಿರಿಯರಿಗೆ ದರ್ಶನಕ್ಕೆ ಅನುಕೂಲವಾಗಲಿ ಎಂದು ವಿಶೇಷ ಕೌಂಟರ್ ತೆರೆದಿರುತ್ತಾರೆ. ಆದರೆ ಇಲ್ಲಿ ಅಂತಹ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿ.
-ನಾಗರಾಜ್, ಜೆ.ಪಿ.ನಗರ ನಿವಾಸಿ