Advertisement

ಸ್ಕ್ಯಾನ್‌ ಮಾಡಿದ್ರೆ ವಿಡಿಯೋ ಬರುತ್ತೆ

11:43 AM Nov 30, 2018 | |

ಬೆಂಗಳೂರು: ಪುಸ್ತಕದ ಮೇಲೆ ಮೊಬೈಲ್‌ ಇಟ್ಟರೆ, ಅದರಲ್ಲಿದ್ದ ಪಠ್ಯವನ್ನು ಯಥಾವತ್ತಾಗಿ ಆ ಮೊಬೈಲ್‌ ಓದಿ ಹೇಳುತ್ತದೆ. ಹೌದು, ತೆರೆದ ಪುಸ್ತಕದ ಮೇಲೆ ಮೊಬೈಲ್‌ ಸ್ಕ್ಯಾನ್‌ ಮಾಡಿದರೆ, ಕ್ಷಣಾರ್ಧದಲ್ಲಿ ಆ ಪಠ್ಯ ಡಿಜಿಟಲ್‌ ರೂಪ ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಅದರಲ್ಲಿದ್ದುದನ್ನು ಯಥಾವತ್ತಾಗಿ ಓದುವ ಆಡಿಯೋ ಸಹಿತ ವಿಡಿಯೋ ಮೊಬೈಲ್‌ ಪರದೆ ಮೇಲೆ ಬರುತ್ತದೆ.

Advertisement

ಇದರಿಂದ ಏಕಕಾಲದಲ್ಲಿ ಹಲವಾರು ಜನ ಪರದೆ ಮೇಲೆ ವೀಕ್ಷಿಸಿ ಮಾಹಿತಿ ಪಡೆಯಬಹುದು. ಇಂತಹದ್ದೊಂದು ಮೊಬೈಲ್‌ ಆ್ಯಪ್‌ ಅನ್ನು ರೇನ್‌ಟ್ರೀ ಮೀಡಿಯಾ ಕಂಪೆನಿ ಅಭಿವೃದ್ಧಿಪಡಿಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ಶಿಕ್ಷಣ ಕ್ಷೇತ್ರಕ್ಕೆ ಪರಿಚಯಿಸಲು ಚಿಂತನೆ ನಡೆಸಿದೆ.

ಆದರೆ, ಹೀಗೆ ಡಿಜಿಟಲೀಕರಣಗೊಳ್ಳಲು ಪೂರಕವಾದ ಪಠ್ಯವನ್ನು ಸಿದ್ಧಪಡಿಸಬೇಕಾಗುತ್ತದೆ. ಪ್ರಾಯೋಗಿಕವಾಗಿ ಸ್ವತಃ ರೇನ್‌ಟ್ರೀ ಮೀಡಿಯಾ “ಇನ್ನೋವೇಟ್‌ ಬೆಂಗಳೂರು’ ಕಾಫಿ ಟೇಬಲ್‌ ಪುಸ್ತಕವೊಂದನ್ನು ಹೊರತಂದಿದ್ದು, ಇದಕ್ಕಾಗಿ “Global Village AR’ ಎಂಬ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ಈ ಆ್ಯಪ್‌ಗೆ ಸ್ಪಂದಿಸುವ ಪುಟಗಳನ್ನು ರೂಪಿಸಿದ್ದು, ಒಂದು ಮೂಲೆಯಲ್ಲಿ “ಎಆರ್‌’ ಸಂಕೇತ ಇದೆ. ಬೇಕಾದವರು ತಮ್ಮ ಸ್ಮಾರ್ಟ್‌ಫೋನ್‌ ಅಥವಾ ಐಒಎಸ್‌ನಲ್ಲಿ ಉಚಿತವಾಗಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಪುಸ್ತಕದ ಮೇಲೆ ಸ್ಕ್ಯಾನ್‌ ಮಾಡುತ್ತಿದ್ದಂತೆ ವೀಡಿಯೊ ಪ್ಲೇ ಆಗುತ್ತದೆ.
 
ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಗುರುವಾರ ಈ ಕಾಫಿ ಟೇಬಲ್‌ ಪುಸ್ತಕವನ್ನು ಹೊರತರಲಾಗಿದೆ. ಇದರ ಮುಖ್ಯ ಉದ್ದೇಶ ಏಕಕಾಲದಲ್ಲಿ ಹಲವು ಜನ ಪುಸ್ತಕದಲ್ಲಿನ ಮಾಹಿತಿಯನ್ನು ತಿಳಿಯಬಹುದು. ಇದನ್ನು ಶಿಕ್ಷಣದಲ್ಲೂ ಅಳವಡಿಸಬಹುದು. ಆದರೆ, ಎಲ್ಲ ವಿಷಯಗಳಿಗೆ ಕಷ್ಟಸಾಧ್ಯ. ಭೂಗೋಳಶಾಸ್ತ್ರ, ವಿಜ್ಞಾನ, ವೈದ್ಯಕೀಯದಂತಹ ವಿಷಯಗಳಿಗೆ ಪರಿಚಯಿಸಬಹುದು.

ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸುವ ಆಲೋಚನೆ ಇದೆ ಎಂದು ರೇನ್‌ಟ್ರೀ ಮೀಡಿಯಾ ಸಂಸ್ಥಾಪಕಿ ಸಂಧ್ಯಾ ಮೆಂಡೊನ್ಕ “ಉದಯವಾಣಿ’ಗೆ ತಿಳಿಸಿದರು. ಶಾಲಾ ಗ್ರಂಥಾಲಯಗಳಲ್ಲಿ ಒಂದೇ ಸೆಟ್‌ ಪುಸ್ತಕ ಇರುತ್ತದೆ. ಆದರೆ, ಹೀಗೆ ಡಿಜಿಟಲ್‌ಗೆ ಪರಿವರ್ತಿಸಿದರೆ ಆರಾಮಾಗಿ ಎಲ್ಲರೂ ಓದಬಹುದು.

Advertisement

ಮಕ್ಕಳಿಗೆ ಪುಸ್ತಕಗಳ ಹೊರೆ ಆಗುತ್ತಿದೆ ಎಂಬ ಮಾತು ಚರ್ಚೆಯಲ್ಲಿದೆ. ಆ ಹೊರೆ ತಗ್ಗಿಸಲು ಇದು ಅನುಕೂಲ ಆಗಲಿದೆ. ಹೇಗೆಂದರೆ, ಪುಸ್ತಕಗಳನ್ನು ಮಕ್ಕಳು ಮನೆಗೆ ತರಬೇಕಾಗಿಲ್ಲ. ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿದ್ದನ್ನು ರೆಕಾರ್ಡ್‌ ಮಾಡಿಕೊಂಡು, ಆಗಾಗ್ಗೆ ಕೇಳಿಸಿಕೊಂಡಿರಬಹುದು ಎಂದು ಸಂಧ್ಯಾ ಮೆಂಡೊನ್ಕ ಅಭಿಪ್ರಾಯ ವ್ಯಕ್ತಪಡಿಸಿದರು. 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next