Advertisement
ದಾವಣಗೆರೆ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆದ್ದಿದೆ. ಆ ಮೂಲಕ ಸರ್ಕಾರದ ರಚನೆಗೆ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿನ ಕಾರ್ಯಕರ್ತರ ಉತ್ಸಾಹ ನೋಡಿದರೆ ನಾವು ಮುಂದಿನ ಚುನಾವಣೆ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದೇ ಸಂದೇಶವನ್ನು ನಾನು ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ನೀಡಲಿದ್ದೇನೆ ಎಂದರು.
Related Articles
Advertisement
ಕೇಂದ್ರ ಸರ್ಕಾರದ ಅಸಹಕಾರದ ಮಧ್ಯೆಯೂ ರಾಜ್ಯ ಸರ್ಕಾರ ಸಮರ್ಥವಾಗಿ ಬರ ಪರಿಸ್ಥಿತಿ ನಿರ್ವಹಿಸಿದೆ. ಆದರೆ, ಸರ್ಕಾರದ ಎಲ್ಲಾ ಕಾರ್ಯಕ್ರಮ, ಯೋಜನೆ ಕುರಿತು ಪ್ರಚಾರದ ಕೊರತೆ ಇದೆ. ಜೊತೆಗೆ ವಿಪಕ್ಷದವರು ಅಪ ಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರು ಇದನ್ನ ಸರಿಪಡಿಸುವತ್ತ ಗಮನ ಹರಿಸಬೇಕು.
ನಮ್ಮ ಸರ್ಕಾರದ ಸಾಧನೆಯನ್ನು ಜನರಿಗೆ ಮುಟ್ಟಿಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು. ಪ್ರಸ್ತುತ ಕರ್ನಾಟಕ ರಾಜ್ಯ ಅಭಿವೃದ್ಧಿಯ ನಾಗಾಲೋಟದಲ್ಲಿದೆ. ಉದ್ಯೋಗ ಸೃಷ್ಟಿ, ಅಭಿವೃದ್ಧಿಯಲ್ಲಿ ಗುಜರಾತನ್ನು ಹಿಂದಿಕ್ಕಿದೆ. ಆದರೆ, ಬಿಜೆಪಿಯವರು ಇದಕ್ಕೆ ಬ್ರೇಕ್ ಹಾಕಲು ತಂತ್ರ ರೂಪಿಸುತ್ತಿದ್ದಾರೆ.
ಇದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಬಿಜೆಪಿಯವರ ಒಡೆದು ಆಳುವ ನೀತಿ ಇಲ್ಲಿ ಕೆಲಸ ಮಾಡದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ.
ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಅವರ ಗುರಿ ಎಂದ ಅವರು, ಇಂದು ನಮ್ಮ ಪಕ್ಷದ ಯುವ ಮುಸ್ಲಿಂ ನಾಯಕರು ಕಾಂಗ್ರೆಸ್ ಪಕ್ಷ ನಮಗೇನು ಮಾಡಿದೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಅವರಿಗೆ ನಾವು ಬುದ್ಧಿ ಹೇಳಬೇಕಿದೆ. ಕಾಂಗ್ರೆಸ್ ಪಕ್ಷ ದೇಶದ ಅಖಂಡತೆಗಾಗಿ ದುಡಿದಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ವೀರಪ್ಪ ಮೊಯಿಲಿ ಸಿಎಂ ಆಗಿದ್ದಾಗ ಮುಸ್ಲಿಂರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಇಂತಹ ಹಲವು ಕೆಲಸಗಳನ್ನು ನಮ್ಮ ಪಕ್ಷ ಮಾಡಿರುವುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ಹೇಳಿದರು. ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಜಿ. ಶಾಂತನಗೌಡ, ಎಂ.ಪಿ. ರವೀಂದ್ರ, ಕೆ. ಶಿವಮೂರ್ತಿ ನಾಯ್ಕ,
ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ದಾವಣಗೆರೆ ಜಿಲ್ಲಾ ವೀಕ್ಷಕ ಹುಚ್ಚಪ್ಪ, ಮೇಯರ್ ಅನಿತಾ ಬಾಯಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಜಲಜಾ ನಾಯ್ಕ, ಮುಖಂಡರಾದ ಅಸಗೋಡು ಜಯಸಿಂಹ, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ. ಬಸವರಾಜ, ಪಕ್ಷದ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಇತರರು ವೇದಿಕೆಯಲ್ಲಿದ್ದರು.