Advertisement
ರವಿವಾರದ ಹೊಸದಿಲ್ಲಿ ಮುಖಾ ಮುಖಿಯಲ್ಲಿ ಅಫ್ಘಾನಿಸ್ಥಾನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 69 ರನ್ನುಗಳಿಂದ ಕೆಡವಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಇದು 18 ವಿಶ್ವಕಪ್ ಪಂದ್ಯಗಳಲ್ಲಿ ಅಫ್ಘಾನ್‌ಗೆ ಒಲಿದ ಕೇವಲ 2ನೇ ಜಯ. ತಂಡದ ಸಾಂಘಿಕ ಪ್ರಯತ್ನದಿಂದ ಇಂಥದೊಂದು ಸಾಧನೆ ಸಾಧ್ಯವಾಗಿತ್ತು.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಆಡಲಿಳಿದ ಮುಜೀಬ್ 28 ರನ್ ಬಾರಿಸುವ ಜತೆಗೆ 51 ರನ್ನಿಗೆ 3 ವಿಕೆಟ್ ಉಡಾಯಿಸಿದ್ದರು. ಜೋ ರೂಟ್, ಹ್ಯಾರಿ ಬ್ರೂಕ್ ಮತ್ತು ಕ್ರಿಸ್ ವೋಕ್ಸ್ ಅವರನ್ನು ಮುಜೀಬ್ ಪೆವಿಲಿಯನ್‌ಗೆ ಅಟ್ಟಿದ್ದರು. ಬೌಲಿಂಗ್ ಆರಂಭಿಸುವ ಸವಾಲು
ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅಫ್ಘಾನ್ ಬೌಲಿಂಗ್ ಆರಂಭಿಸುವುದೊಂದು ವಿಶೇಷ. ಇದು ಅತ್ಯಂತ ಕಠಿನ ಸವಾಲು ಎಂಬುದಾಗಿ ಅವರು ಹೇಳುತ್ತಾರೆ. “ಕೇವಲ ಇಬ್ಬರು ಕ್ಷೇತ್ರರಕ್ಷಕರನ್ನು ಬೌಂಡರಿ ಗೆರೆಯಲ್ಲಿ ನಿಲ್ಲಿಸಿ ಓರ್ವ ಸ್ಪಿನ್ನರ್ ಬೌಲಿಂಗ್ ಆರಂಭಿಸುವುದು ನಿಜಕ್ಕೂ ಕಷ್ಟ. ಇದೊಂದು ದೊಡ್ಡ ಸವಾಲು. ಇದನ್ನು ಸ್ವೀಕರಿಸುವ ಧೈರ್ಯ ಇದ್ದರಷ್ಟೇ ಇಂಥ ರಿಸ್ಕ್ ತೆಗೆದು ಕೊಳ್ಳಬೇಕು. ಹಿಂದೆ ವಿಶ್ವಕಪ್‌ನಲ್ಲಿ ಇಂಥ ಅನೇಕ ಸ್ಪಿನ್ ಪ್ರಯೋಗ ನಡೆದಿತ್ತು. ನಾನು ಇದನ್ನು ಬಹಳ ಕಷ್ಟದಿಂದ ನಿಭಾಯಿಸುತ್ತಿದ್ದೇನೆ. ಇಲ್ಲಿ ಲೈನ್-ಲೆಂತ್ ಕಾಪಾಡಿಕೊಳ್ಳುವುದು ಮುಖ್ಯ. ಇದರಲ್ಲಿ ನಾನು ಯಶಸ್ವಿ ಆಗುತ್ತಿದ್ದೇನೆ’ ಎಂಬುದಾಗಿ ಮುಜೀಬ್ ಹೇಳಿದರು.