Advertisement

ಹಲ್ಲೆಗೈದ ಆರೋಪಿಗೆ ಗುಂಡೇಟು

12:20 PM Apr 06, 2018 | Team Udayavani |

ಬೆಂಗಳೂರು: ಸ್ನೇಹಿತನನ್ನೇ ಕೊಂದ ಆರೋಪ ಹೊತ್ತ ವ್ಯಕ್ತಿ ಬಂಧಿಸಲು ಬಂದ ಮಹದೇವಪುರ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಈ ವೇಳೆ ಗುಂಡು ಹಾರಿಸಿ, ಆತನನ್ನು ಬಂಧಿಸಲಾಗಿದೆ.

Advertisement

ಸಿಂಗಯ್ಯನಪಾಳ್ಯದಲ್ಲಿ ಗುರುವಾರ ಬೆಳಗ್ಗೆ 11.3ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಮಹದೇವಪುರದ ಕಾವೇರಿನಗರ ನಿವಾಸಿ ಚರಣ್‌ ಬಂಧಿತ ಆರೋಪಿ. ಚರಣ್‌ ಎಡಕಾಲಿಗೆ ಪೊಲೀಸರ ಗುಂಡು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಯಿಂದ ಹಲ್ಲೆಗೊಳಗಾದ ಪೇದೆ ಮಣಿ ಎಡ ತೋಳಿಗೆ ತೀವ್ರ ಗಾಯವಾಗಿದ್ದು ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚರಣ್‌ ಮಾ.3ರ ರಾತ್ರಿ 11 ಗಂಟೆ ಸುಮಾರಿಗೆ ತನ್ನ ಸಹಚರರೊಂದಿಗೆ ಸೇರಿ ಗರುಡಾಚಾರ್‌ ಪಾಳ್ಯ ಬಳಿ ಸ್ನೇಹಿತ ಅಜಯ್‌ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.

ಕಾವೇರಿನಗರದ ಅಜಯ್‌ ಹಾಗೂ ಆರೋಪಿ ಚರಣ್‌ ಸ್ಥಳೀಯ ಸ್ನೇಹಿತರು. ಅಜಯ್‌ ಮೊಬೈಲ್‌ ಶಾಪ್‌ ನಡೆಸುತ್ತಿದ್ದು, ನಷ್ಟ ಹೊಂದಿದ್ದರಿಂದ ಮನೆಯಲ್ಲೇ ಇರುತ್ತಿದ್ದ. ಆರೋಪಿ ಚರಣ್‌ ಟ್ರಾವಲ್‌ ವಾಹನ ಚಾಲಕ. ಇಬ್ಬರೂ ಸ್ಥಳೀಯ ಬಾರೊಂದರಲ್ಲಿ ಮದ್ಯ ಸೇವಿಸುವಾಗ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಮಾರಾಮಾರಿ ನಡೆದಿತ್ತು. ಆಗ ಬಾರ್‌ ಸಿಬ್ಬಂದಿ ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದ್ದರು. 

ಘಟನೆಯಿಂದ ಕುಪಿತಗೊಂಡ ಚರಣ್‌ ಮಾ. 3ರಂದು ರಾತ್ರಿ 11 ಗಂಟೆಗೆ ಗರುಡಾಚಾರ್‌ ಪಾಳ್ಯದ ಕೆಪಿಟಿಸಿಎಲ್‌ ಕಚೇರಿ ಎದುರು ತನ್ನ ಸಹಚರರೊಂದಿಗೆ ಅಜಯ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಗಾಯಗೊಂಡು ಬಿದ್ದಿದ್ದ ಅಜಯ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

Advertisement

ಪೊಲೀಸರ ಮೇಲೆ ಹಲ್ಲೆ, ಗುಂಡೇಟು: ಖಚಿತ ಮಾಹಿತಿ ಆಧಾರದ ಮೇಲೆ ಸಿಂಗಯ್ಯನಪಾಳ್ಯ ರೈಲ್ವೆ ಟ್ರಾಕ್‌ ಬಳಿ ಆರೋಪಿ ಚರಣ್‌ ಬೆನ್ನಟ್ಟಿದ ಪೊಲೀಸರು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಚರಣ್‌ ಓಡಿಹೋಗಲು ಯತ್ನಿಸಿದ್ದಾನೆ. ಕಾನ್‌ಸ್ಟೆàಬಲ್‌ ಮಣಿ ಅತನನ್ನು ಹಿಡಿಯಲು ಮುಂದಾದಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಚರಣ್‌ ನಡೆಸಿದ ಹಲ್ಲೆಯಿಂದ ಎಡ ಭಾಗದ ತೋಳಿಗೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದ ಮಣಿ ಕುಸಿದುಬಿದ್ದರು. ಅಷ್ಟರಲ್ಲಿ ಪಿಎಸ್‌ಐ ನಾರಾಯಣಸ್ವಾಮಿ ಆತ್ಮರಕ್ಷಣೆಗಾಗಿ ಆರೋಪಿ ಎಡ ಕಾಲಿಗೆ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಅಜಯ್‌ ಸ್ಥಿತಿ ಚಿಂತಾಜನಕ: ಆರೋಪಿ ಚರಣ್‌ನಿಂದ ಹಲ್ಲೆಗೊಳಗಾದ ಅಜಯ್‌ ಸ್ಥಿತಿ ಚಿಂತಾಜನಕವಾಗಿದ್ದು, ಬದುಕುಳಿಯುವ ಬಗ್ಗೆ ಅನುಮಾನವಿದೆ. ಒಂದು ವೇಳೆ ಅಜಯ್‌ ಸಾವನ್ನಪ್ಪಿದರೆ ಆರೋಪಿ ವಿರುದ್ಧ ಹೆಚ್ಚುವರಿಯಾಗಿ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗವುದು. ಸದ್ಯ ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next