Advertisement
ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಐನಕಿದು, ಹರಿಹರ ಕಟ್ಟಗೋಂದ ನಗರ ಮೊದಲಾದ ಗ್ರಾಮಸ್ಥರಿಗೆ ಈ ಪಶುಚಿಕಿತ್ಸಾ ಕೇಂದ್ರದಿಂದ ಪ್ರಯೋಜನವಾಗುತ್ತಿದ್ದು, ರೋಗ ರುಜಿನಗಳು ಕಾಣಿಸಿದಾಗ ಔಷಧಿಗೆ ಚುಚ್ಚುಮದ್ದಿಗೆ ಆಗಮಿಸುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಈಕೇಂದ್ರದಲ್ಲಿ ಪಶುವೈದ್ಯರು ಇಲ್ಲದೇ, ಓರ್ವ ಪಶುವೀಕ್ಷಕರು ಮಾತ್ರ ಕರ್ತವ್ಯದಲ್ಲಿದ್ದರು. ಅವರನ್ನೂ ಮೂರು ತಿಂಗಳ ಹಿಂದೆ ಮೂಡುಬಿದಿರೆಗೆ ವರ್ಗಾವಣೆ ಮಾಡಲಾಗಿತ್ತು. ಈ ಸ್ಥಾನಕ್ಕೆ ಯಾರೂ ನಿಯೋಜನೆ ಆಗದ್ದರಿಂದ ಕೇಂದ್ರ ಬಾಗಿಲು ಮುಚ್ಚಿದೆ. ಈ ಭಾಗದಲ್ಲಿ ಹಲವು ಕೃಷಿಕರು ಹೈನುಗಾರಿಕೆಯಲ್ಲೂ ತೊಡಗಿದ್ದಾರೆ. ಆದರೆ ಪಶುಕೇಂದ್ರದಲ್ಲಿ ಸಿಬಂದಿ ಇಲ್ಲದ್ದರಿಂದ ಅಗತ್ಯ ಚಿಕಿತ್ಸೆಗೆ ದೂರದ ಗುತ್ತಿಗಾರು ಅಥವಾ ಸುಬ್ರಹ್ಮಣ್ಯಕ್ಕೆ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.
ಹಿಂದೆ ಪಶುಕೇಂದ್ರದ ಕಟ್ಟಡ ಪೂರ್ಣವಾಗಿ ಶಿಥಿಲವಾಗಿದ್ದು, ಹಾಳುಕೊಂಪೆಯಂತಾಗಿತ್ತು. 2 ವರ್ಷ ಹಿಂದೆ ದುರಸ್ತಿಗೊಳಿಸಲಾಗಿದ್ದು, ಬಣ್ಣ ನೀಡಲಾಗಿದೆ. ಆದರೆ ಶೌಚಾಲಯ ಸೇರಿದಂತೆ ವಿವಿಧೆಡೆ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. ಸದ್ಯ ಮುಚ್ಚಿರುವ ಈ ಕೇಂದ್ರದ, ಹೊರಾಂಗಣದಲ್ಲಿರುವ ಜಾನುವಾರು ತಪಾಸಣೆ ಕೊಠಡಿ ಮುಕ್ತವಾಗಿದೆ. ಹಲವು ಸಮಯದಿಂದ ಕೇಂದ್ರ ಹೀಗೇ ಮುಚ್ಚಿದ್ದರೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಅಡ್ಡೆಯಾಗುವ ಭೀತಿ ಕಾಡಿದೆ. ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆ ಮೇಲಿದೆ.
Related Articles
ಪಶುಸಂಗೋಪನ ಇಲಾಖೆಯಲ್ಲಿ ಸಿಬಂದಿ ಕೊರತೆ ಇದೆ. ಪ್ರಸ್ತುತ ಅರೆತಾಂತ್ರಿಕ ಹಾಗೂ ಇತರ ಸಿಬಂದಿ ತರಬೇತಿ ಅವಧಿಯಲ್ಲಿದ್ದಾರೆ. ಅದು ಮುಗಿದ ಬಳಿಕ ಕೊಲ್ಲಮೊಗ್ರು ಕೇಂದ್ರಕ್ಕೆ ಸಿಬಂದಿ ನಿಯೋಜನೆಗೆ ಕ್ರಮವಹಿಸುತ್ತೇವೆ.
– ಶಕೀಲ, ಸೂಪರಿಡೆಂಟ್,
ಪಶುಸಂಗೋಪನ ಇಲಾಖೆ
Advertisement
ಬಾಲಕೃಷ್ಣ ಭೀಮಗುಳಿ