ಸುಂದರವಾದ ಪ್ರಕೃತಿಯ ನಡುವೆ ಇರುವ ಆ ಊರಿನಲ್ಲಿ ಬಹು ದಿನಗಳಿಂದ ಮನೆಯೊಂದು ಖಾಲಿ ಬಿದ್ದಿದೆ. ಸುತ್ತಮುತ್ತಲಿನವರ “ದೃಷ್ಠಿ’ಯಿಂದ ದೂರ ಉಳಿದಿದ್ದ ಆ ಖಾಲಿ ಮನೆಗೆ, ಒಮ್ಮೆ ಇಬ್ಬರು ಅಪರಿಚಿತರ ಆಗಮನವಾಗುತ್ತದೆ. ಅವರು ಯಾರು, ಅವರಿಬ್ಬರ ನಡುವಿನ ಸಂಬಂಧವೇನು ಎಂಬುದು ಅಕ್ಕಪಕ್ಕದವರಿಗೆ ಗೊತ್ತಾಗುವ ಹೊತ್ತಿಗೆ ಅಲ್ಲೊಂದು ಅನಾಹುತ ನಡೆದು ಹೋಗುತ್ತದೆ. ಆ ಅನಾಹುತದ ರಹಸ್ಯ ಬೇಧಿಸಲು ಹೊರಟ ಎದುರು ಮನೆಯ ಹುಡುಗ ಅನಿರೀಕ್ಷಿತ ಸುಳಿಯೊಂದರಲ್ಲಿ ಸಿಲುಕಿಕೊಳ್ಳುತ್ತಾನೆ. ಅಂತಿಮವಾಗಿ “ಹೌಸ್’ನಲ್ಲಿ ಸಿಲುಕಿಕೊಂಡ ಎದುರು ಮನೆಯ ಹುಡುಗನಿಗೆ ಮತ್ತು ಎದುರು ಕೂತವರಿಗೆ ಏನೇನು ಅನುಭವವಾಗುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ದಿ ವೆಕೆಂಟ್ ಹೌಸ್’ ಸಿನಿಮಾದ ಕಥಾಹಂದರ.
ಸಿನಿಮಾದ ಹೆಸರು, ಪೋಸ್ಟರ್, ಟ್ರೇಲರ್ ಗಳಲ್ಲಿ ತೋರಿಸಿರುವಂತೆ, “ದಿ ವೆಕೆಂಟ್ ಹೌಸ್’ ಅಪ್ಪಟ ಹಾರರ್-ಥ್ರಿಲ್ಲರ್ ಶೈಲಿಯ ಕಥಾಹಂದರದ ಸಿನಿಮಾ. ಒಂದು ಮನೆ ಅದರ ಹಿಂದೆ ನಾಲ್ಕಾರು ಪಾತ್ರಗಳ ಸುತ್ತ ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಸಿನಿಮಾದ ನಾಯಕಿ ಕಂ ನಿರ್ದೇಶಕಿ ಎಸ್ತಾರ್ ನರೋನ್ಹಾ.
ಹಾರರ್-ಥ್ರಿಲ್ಲರ್ ಜೊತೆಗೆ ಲವ್, ಸೆಂಟಿಮೆಂಟ್, ರೊಮ್ಯಾನ್ಸ್, ಒಂದೆರಡು ಮೆಲೋಡಿ ಹಾಡುಗಳು ಹೀಗೆ ಒಂದಷ್ಟು ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳನ್ನೂ ಹದವಾಗಿ ಬೆರೆಸಿ ಮಾಸ್ ಆಡಿಯನ್ಸ್ ಗಮನ ಸೆಳೆಯುವ ಕಸರತ್ತು ಕೂಡ ಮಾಡಲಾಗಿದೆ.
ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ಎಸ್ತಾರ್ ನರೋನ್ಹಾ, ಮೊದಲ ಸಿನಿಮಾದಲ್ಲೇ ನಿರ್ದೇಶಕಿಯಾಗಿಯೂ ಸೈ ಎನಿಸಿಕೊಂಡಿ ದ್ದಾರೆ. ಸರಳವಾದ ಕಥೆಯೊಂದನ್ನು ಇಟ್ಟುಕೊಂಡು ಅದನ್ನು ಒಂದಷ್ಟು ಕುತೂಹಲಭರಿತವಾಗಿ ಪ್ರೇಕ್ಷಕರ ಮುಂದಿಡಲು ಎಸ್ತಾರ್ ನರೋನ್ಹಾ ಹಾಕಿರುವ ಪರಿಶ್ರಮ ಸಿನಿಮಾದಲ್ಲಿ ಕಾಣುತ್ತದೆ.
ಇನ್ನು ಕಲಾವಿದರ ಬಗ್ಗೆ ಹೇಳುವುದಾದರೆ, ಎಸ್ತಾರ್ ಗ್ಲಾಮರಸ್ ಲುಕ್‌ನಿಂದ ನೋಡುಗರಿಗೆ ಇಷ್ಟವಾದರೆ, ನಟ ಶ್ರೇಯಸ್ ಚಿಂಗಾ ಅಭಿನಯ ಸಿನಿಮಾಕ್ಕೆ ದೊಡ್ಡ ಹಿನ್ನಡೆ ಎನ್ನಬಹುದು. ಛಾಯಾಗ್ರಹಣ “ದಿ ವೆಕೆಂಟ್ ಹೌಸ್’ನ ಅಂದವನ್ನು ಹೆಚ್ಚಿಸಿದೆ, ಸಂಕಲನ ಮತ್ತು ನಿರೂಪಣೆಗೆ ಇನ್ನಷ್ಟು ವೇಗ ನೀಡಿದ್ದರೆ, “ಹೌಸ್’ನಲ್ಲಿ ಕೂತವರಿಗೆ ಇನ್ನಷ್ಟು ಹಾರರ್ ಥ್ರಿಲ್ ಸಿಗುವ ಸಾಧ್ಯತೆಗಳಿದ್ದವು.