ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರಾಗಿ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ಲಲಿತಾದ್ರಿಪುರ ಗ್ರಾಮದಲ್ಲಿ 460 ಕೆ.ಜಿ ಬಾದಾಮಿ ಹಾರದ ಸನ್ಮಾನದೊಂದಿಗೆ ಅದ್ಧೂರಿ ಸ್ವಾಗತವನ್ನು ಸ್ವೀಕರಿಸಿದ ನಂತರ ಪಾದಯಾತ್ರೆ ನಡೆಸಿ ಮತಯಾಚಿಸಿ ಮಾತನಾಡಿ, ರಾಜ್ಯದ ಆಡಳಿತ ನೆಪದಲ್ಲಿ ಕ್ಷೇತ್ರವನ್ನು ಕಡೆಗಣಿಸಿದ ಮುಖ್ಯಮಂತ್ರಿಗಳು ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆಯಾಗಿವೆ. ಗುತ್ತಿಗೆದಾರರ ಜೇಬನ್ನು ತುಂಬಿದೆಯೇ ಹೊರತು ಜನರಿಗೆ ಯಾವುದೇ ಉಪಯೋಗವಾಗಿಲ್ಲ ಎಂದು ದೂರಿದರು.
ಕಾರ್ಯಕರ್ತರು ಹಾಗೂ ಮುಖಂಡರ ಒತ್ತಾಯದಂತೆ ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಕ್ಷೇತ್ರದಾದ್ಯಂತ ಮೊದಲ ಸುತ್ತಿನ ಪ್ರಚಾರವನ್ನು ಯಶಸ್ವಿಗೊಳಿಸಿ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದ ವಿರೋಧಿ ಅಲೆಯಿರುವುದರಿಂದ ಈ ಬಾರಿ ಬಿಜೆಪಿ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುವುದು ಬಹುತೇಕ ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರು ಸೇರ್ಪಡೆ: ವರುಣ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರನ್ನು ಬೆಂಬಲಿಸಿ ಆಲನಹಳ್ಳಿ ಗ್ರಾಪಂ ಸದಸ್ಯರಾದ ನಾಗರಾಜು, ರೇಣುಕ ನಾಗರಾಜಚಾರಿ, ಜವರಯ್ಯ, ರುಕ್ಮಿಣಿ, ತಾಯಮ್ಮ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡರು.
ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎಸ್.ಸಿ.ಅಶೋಕ್, ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಡಾ ಮಾಜಿ ಸದಸ್ಯ ಎನ್.ರಾಜಣ್ಣ,
ಗ್ರಾಪಂ ಸದಸ್ಯ ಮಹದೇವಸ್ವಾಮಿ, ನಾಡಗೌಡ ತಮ್ಮಯ್ಯ, ಲಿಂಗರಾಜು, ಮುಖಂಡರಾದ ಶಿವಣ್ಣ, ನಂಜುಂಡಸ್ವಾಮಿ, ಜಯಪ್ರಕಾಶ್, ಲಕ್ಷ್ಮಣ್‌ಕುಮಾರ್, ರಾಮೇಗೌಡ, ರಮೇಶ್‌ಗೌಡ, ಮಹದೇವಯ್ಯ ಸೇರಿದಂತೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.