ಒಂದು ಊರಿನಲ್ಲಿ ಧೀರಸೇನ ಎನ್ನುವ ರಾಜ ಅತ್ಯಂತ ದಕ್ಷತೆಯಿಂದ ರಾಜ್ಯಭಾರ ಮಾಡುತ್ತಿದ್ದನು. ಒಂದು ದಿನ ರಾಜನ ದರ್ಬಾರು ನಡೆಯುತ್ತಿದ್ದಾಗ ರಾಜನು ತನ್ನ ಸಾಮಂತ ರಾಜರಲ್ಲಿ ನಮ್ಮ ಪ್ರಜೆಗಳ ಜೀವನ ಶೈಲಿ ಮತ್ತು ಜೀವನಮಟ್ಟ ಹೇಗಿದೆ ಎಂದು ಪ್ರಶ್ನಿಸಿದನು. ಆಗ ರಾಜನ ಸಾಮಂತ ನಮ್ಮ ಪ್ರಜೆಗಳೆಲ್ಲರೂ ಅತ್ಯಂತ ಶ್ರೀಮಂತ ರಾಗಿದ್ದು, ಎಲ್ಲರೂ ಒಳ್ಳೆಯ ರೀತಿಯಲ್ಲಿ ಜೀವನ ನಿರ್ವ ಹಿಸುತ್ತಿದ್ದಾರೆ ಎಂದು ಹೇಳಿದರು. ಆಗ ಆಸ್ಥಾನ ಪಂಡಿತನಾದ ಜಯ ಸಿಂಹ ಶಾಸ್ತ್ರಿಯು ಇಲ್ಲ ಸ್ವಾಮೀ, ನಮ್ಮ ರಾಜ್ಯದ ಅಷ್ಟು ಹಳ್ಳಿಗಳ ಪೈಕಿ ಸತ್ಯಪುರ ಎಂಬ ಹಳ್ಳಿಯ ಪ್ರಜೆಗಳು ಅತ್ಯಂತ ಬಡವರಾಗಿದ್ದು, ಮೂರು ಹೊತ್ತು ಊಟ ಮಾಡಲೂ ಕಷ್ಟ ಪಡುತ್ತಿದ್ದಾರೆ. ಪ್ರಜೆಗಳ ಜೀವನ ನಿರ್ವಹಣೆಗಾಗಿ ಆಸ್ಥಾನದಿಂದ ಕಳು ಹಿಸಲಾಗುವ ಅನುದಾನಗಳು ಸರಿ ಯಾದ ರೀತಿಯಲ್ಲಿ ಪ್ರಜೆಗಳಿಗೆ ತಲುಪದೇ ಅಲ್ಲಿನ ಪ್ರಜೆಗಳು ಬಡವರಾಗಿದ್ದಾರೆ ಎಂದನು.
ರಾಜನು ಆಸ್ಥಾನ ಪಂಡಿತನ ಮಾತನ್ನು ಪ್ರತ್ಯಕ್ಷವಾಗಿ ನೋಡಲು ಮತ್ತು ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಆಸ್ಥಾನ ಪಂಡಿತ ಜಯಸಿಂಹ ಶಾಸ್ತ್ರಿಯ ಜತೆಗೆ ಮಾರುವೇಷದಲ್ಲಿ ತೆರಳಿದರು. ತಮ್ಮ ರಾಜ್ಯದಾದ್ಯಂತ ಸಂಚರಿಸಿ ಪರಿಶೀಲಿಸಿದಾಗ ಎಲ್ಲ ಹಳ್ಳಿಯ ಜನರು ಸುಖ ವಾಗಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಕೊನೆಯದಾಗಿ ರಾಜ ಮತ್ತು ಆಸ್ಥಾನ ಪಂಡಿತ ಸತ್ಯಪುರಕ್ಕೆ ಬಂದರು. ಅಲ್ಲಿನ ಜನರೆಲ್ಲರೂ ಅತ್ಯಂತ ಬಡವರಾಗಿದ್ದು, ಜೀವನ ನಿರ್ವ ಹಿಸಲೂ ಕಷ್ಟಪಡುತ್ತಿದ್ದು, ಅಲ್ಲಿನ ಜನರ ಕಷ್ಟ ಗಳನ್ನು ತಿಳಿದುಕೊಂಡ ರಾಜನು ಆಸ್ಥಾನ ಪಂಡಿತನಾದ ಜಯಸಿಂಹ ಶಾಸ್ತ್ರಿಯನ್ನು ಸತ್ಯಪುರದ ಅಭಿವೃದ್ಧಿಗಾಗಿ ಸಾಮಂತ ರಾಜ ನನ್ನಾಗಿ ನೇಮಕ ಮಾಡಿ ಅಲ್ಲಿಗೆ ಕಳುಹಿಸಿದನು. ಸತ್ಯಪುರಕ್ಕೆ ತೆರಳಿ ಅಲ್ಲಿನ ಅಭಿವೃದ್ಧಿಗೆ ಅಗತ್ಯ ವಿರುವ ಯೋಜನೆಯನ್ನು ಹಾಕಿದ ಜಯ ಸಿಂಹ ಶಾಸ್ತ್ರಿಯು ಅಲ್ಲಿನ ಅಭಿವೃದ್ಧಿಗೆ ಅಗತ್ಯ ವಿರುವ ಹಣಕಾಸು ಮತ್ತು ವಿವಿಧ ಸಾಮಗ್ರಿಗಳ ಬೇಡಿಕೆಯನ್ನು ರಾಜನಿಗೆ ಸಲ್ಲಿಸಿದನು. ಜಯಸಿಂಹ ಶಾಸ್ತ್ರಿಯ ಬೇಡಿಕೆಯಂತೆ ಪ್ರತೀ ವರ್ಷವೂ ತಪ್ಪದೆ ರಾಜನು ಹಣ ಮತ್ತು ಸಾಮಗ್ರಿಗಳನ್ನು ಕಳುಹಿಸುತ್ತಿದ್ದನು. ಇದೇ ರೀತಿ 2-3 ವರ್ಷಗಳ ಕಾಲ ಹಣ ಮತ್ತು ಸಾಮಗ್ರಿಗಳ ಪೂರೈಕೆಯ ಅನಂತರ ಅಚಾನ ಕ್ಕಾಗಿ ಈ ಪದ್ಧತಿಯನ್ನು ರಾಜ ನಿಲ್ಲಿಸಿದ.
ಇದೇ ರೀತಿ 4-5 ವರ್ಷಗಳು ಕಳೆದ ಅನಂ ತರ ಧೀರಸೇನನು ಜಯಸಿಂಹ ಶಾಸ್ತ್ರಿಯ ಸತ್ಯಪುರ ಹಳ್ಳಿಗೆ ಅಭಿವೃದ್ಧಿಯ ಪರಿಶೀಲನೆಗಾಗಿ ತೆರಳಿದನು. ಹಳ್ಳಿಯ ಪ್ರಜೆಗಳು ಖುಷಿಯಿಂದ ಜೀವನ ನಿರ್ವಹಣೆ ಮಾಡುತ್ತಿರುವುದನ್ನು ಗಮನಿಸಿದ ಧೀರಸೇನನು ಜಯಸಿಂಹ ಶಾಸ್ತ್ರಿಯ ಭೇಟಿಗಾಗಿ ಆತನನ್ನು ಹುಡುಕಲು ಪ್ರಾರಂಭಿಸಿದ. ಹಳ್ಳಿಯಿಡೀ ರಾಜನು ಸುತ್ತಾಡಿ ದರೂ ಎಲ್ಲೂ ಜಯಸಿಂಹ ಶಾಸ್ತ್ರಿ ರಾಜನಿಗೆ ಕಾಣಿಸಲೇ ಇಲ್ಲ. ಅದಾಗಲೇ ತಮ್ಮ ಹಳ್ಳಿಗೆ ರಾಜನು ಬಂದಿರುವ ವಿಷಯವನ್ನು ತಿಳಿದ ಹಳ್ಳಿಯ ಜನರೆಲ್ಲರೂ ಅಲ್ಲಿ ಸೇರಿದ್ದರು.
ತನ್ನ ಆಸ್ಥಾನ ಪಂಡಿತನಾಗಿದ್ದ ಜಯಸಿಂಹ ಶಾಸ್ತ್ರಿಯನ್ನು ಹುಡುಕಾಡಿ ಸುಸ್ತಾದ ರಾಜನು ಕೊನೆಗೆ ಇಲ್ಲಿ ಜಯಸಿಂಹ ಶಾಸ್ತ್ರಿ ಯಾರೆಂದು ಜೋರಾಗಿ ಕೂಗಿ ಕೇಳಿದನು. ಆಗ ಅಲ್ಲಿ ಸೇರಿದ್ದ ನಾಗರಿಕರ ನಡುವಿನಿಂದ ಕುರುಚಲು ಗಡ್ಡ ಬಿಟ್ಟುಕೊಂಡು ಸಾಮಾನ್ಯ ಜನರಂತೆ ಕಾಣು ತ್ತಿದ್ದ ವ್ಯಕ್ತಿಯೊಬ್ಬ ನಾನೇ ಸ್ವಾಮಿ ಜಯಸಿಂಹ ಶಾಸ್ತ್ರಿ ಎಂದು ಹೇಳುತ್ತಾ ಬಂದು ನಿಂತ.
ಸತ್ಯಪುರ ಹಳ್ಳಿಗೆ ಸಾಮಂತ ರಾಜನಾಗಿ ತೆರಳಿದ್ದಂತಹ ಆಸ್ಥಾನ ಪಂಡಿತ ಅಲ್ಲಿ ರಾಜನಾಗಿ ಅಧಿಕಾರದಿಂದ ಆಡಳಿತ ನಡೆಸುವ ಬದಲಾಗಿ ರಾಜ್ಯದ ಎಲ್ಲ ಪ್ರಜೆಗಳಂತೆ ತಾನೂ ಜೀವನ ನಿರ್ವಹಿಸುತ್ತಾ ತಾನೂ ತನ್ನ ಜಮೀನಿನಲ್ಲಿ ಕೃಷಿ ಮತ್ತಿತರ ಕೆಲಸಗಳನ್ನು ಮಾಡುತ್ತಾ ಅಲ್ಲಿನ ಜನರ ಏಳಿಗೆಗೆ ಅಗತ್ಯ ವಿರುವ ಯೋಜನೆ ಗಳನ್ನು ಹಾಕಿಕೊಡುತ್ತಾ ಜೀವನ ನಿರ್ವಹಿಸಲು ಆರಂಭಿಸಿದ್ದ. 2-3 ವರ್ಷಗಳ ಕಾಲ ರಾಜ ತನ್ನ ಭಂಡಾರದಿಂದ ನೀಡಿದ ಹಣ ಮತ್ತು ಸಾಮ ಗ್ರಿಗಳನ್ನು ಅಲ್ಲಿನ ಪ್ರಜೆಗಳಿಗೆ ನೀಡಿ ಅವರೆಲ್ಲರೂ ತಮ್ಮ ಜಮೀನಿನಲ್ಲಿ ಕಷ್ಟಪಟ್ಟು ದುಡಿಮೆ ಮಾಡಲು ಅಗತ್ಯ ಸಾಮಗ್ರಿಗಳನ್ನು ಖರೀದಿ ಸಲು ಬಳಸಿದ. ರಾಜನು ನೀಡುತ್ತಿದ್ದ ಅನು ದಾನ ನಿಂತ ವೇಳೆಗೆ ಪ್ರಜೆಗಳ ಜಮೀನಿ ನಲ್ಲಿ ಆದಾಯ ಬರಲಾರಂ ಭಿಸಿತ್ತು. ಜಯ ಸಿಂಹ ಶಾಸ್ತ್ರಿ ಸತ್ಯಪುರದ ಸಾಮಂತ ರಾಜನಾಗಿ ಕಾಣಿಸಿ ಕೊಂಡು ಅಧಿಕಾರ ಚಲಾಯಿಸುವ ಬದಲಾಗಿ ಅಲ್ಲಿನ ಅಭಿ ವೃದ್ಧಿಯ ಪ್ರೇರಕನಾಗಿ ಮತ್ತು ಇತರರಿಗೂ ಪ್ರೇರಕನಾಗಿ ಕಂಡನು.
ಯಾವುದೇ ವ್ಯಕ್ತಿಯು ದೊಡ್ಡದಾದ ಹುದ್ದೆಯನ್ನು ಗಳಿಸಿದ ಕೂಡಲೇ ಆ ಹುದ್ದೆಗೆ ಅಥವಾ ಹುದ್ದೆಯಿಂದ ವ್ಯಕ್ತಿಗೆ ಗೌರವ ಬರುವು ದಿಲ್ಲ. ಬದಲಿಗೆ ವ್ಯಕ್ತಿ ಅಥವಾ ಹುದ್ದೆಗೆ ಗೌರವ ಬರುವುದು ನಿರ್ದಿಷ್ಟ ಹುದ್ದೆಯಲ್ಲಿ ಇರು ವಂತಹ ವ್ಯಕ್ತಿಯು ಮಾಡುವ ಕೆಲಸ ದಿಂದ ಮಾತ್ರ. ಅಧಿಕಾರದಲ್ಲಿರುವ ವ್ಯಕ್ತಿಯು ಅಲ್ಲಿ ಬಂಗಾರದ ಕುರ್ಚಿಯಲ್ಲಿ ಕುಳಿತು ಕೊಂಡರೂ ಆ ಕುರ್ಚಿಯಿಂದ ಆತನಿಗೆ ಗೌರವ ಬರದು. ಬದಲಿಗೆ ತನ್ನ ಜವಾಬ್ದಾರಿಯ ವ್ಯಾಪ್ತಿ ಮತ್ತು ಆಳವನ್ನು ಅರಿತು ತನ್ನ ಅಧೀನ ದಲ್ಲಿರುವವರನ್ನೂ ಬೆಳೆಸುತ್ತಾ ಎಲ್ಲರನ್ನೂ ಜತೆಯಾಗಿ ಯಶಸ್ಸಿನ ಹಾದಿಯಲ್ಲಿ ಕರೆದು ಕೊಂಡು ಹೋಗುವವನು ನಿಜಕ್ಕೂ ಗೆಲ್ಲಬಲ್ಲ. ಯಶಸ್ಸಿನ ಗುಟ್ಟು ಇರು ವುದು ಅಧಿಕಾರವನ್ನು ಚಲಾಯಿ ಸುವುದರಲ್ಲಿ ಅಲ್ಲ; ಬದಲಿಗೆ ಅಧಿಕಾರದ ವ್ಯಾಪ್ತಿಯಲ್ಲಿ ಎಲ್ಲರನ್ನೂ ಬೆಳೆಸುವುದರಲ್ಲಿದೆ.
- ಸಂತೋಷ್ ರಾವ್‌ಪೆರ್ಮುಡ