Advertisement
ಖಾಸಗಿ ನಿರ್ಮಾಣ ಕಾಮಗಾರಿ ಮಾತ್ರವಲ್ಲದೇ ಸರ್ಕಾರದ ನಾನಾ ಇಲಾಖೆಗಳು ಕೈಗೊಳ್ಳುವ ಸಿವಿಲ್ ಕಾಮಗಾರಿಗಳಲ್ಲೂ ಶೇ.50ರಷ್ಟು ಕೆಲಸಗಳಿಗೆ “ಎಂ ಸ್ಯಾಂಡ್’ ಬಳಕೆಯಾಗುತ್ತಿದೆ. “ಎಂ ಸ್ಯಾಂಡ್’ ಗುಣಮಟ್ಟದ ಖಾತರಿ ಮೂಲಕ ಬಳಕೆಯನ್ನು ಇನ್ನಷ್ಟು ಉತ್ತೇಜಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಎರಡು ಸಂಚಾರಿ ಪ್ರಯೋಗಾಲಯ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ.
Related Articles
Advertisement
ಎರಡು ವರ್ಷಗಳಿಂದ ಬೇಡಿಕೆ ಹೆಚ್ಚಳ2016ರ ನಂತರ “ಎಂ ಸ್ಯಾಂಡ್’ಗೆ ಬೇಡಿಕೆ ಹೆಚ್ಚಾಯಿತು. ಒಂದು ವರ್ಷದಲ್ಲಿ 99 ಹೊಸ ಘಟಕಗಳು ಸ್ಥಾಪನೆಯಾಗಿ ಘಟಕಗಳ ಸಂಖ್ಯೆ 164ಕ್ಕೆ ಏರಿಕೆಯಾಯಿತು. ಜತೆಗೆ ಉತ್ಪಾದನೆಯೂ ಬರೋಬ್ಬರಿ 20 ದಶಲಕ್ಷ ಟನ್‌ಗೆ ಹೆಚ್ಚಾಯಿತು. ಇದೇ ಪ್ರಮಾಣದಲ್ಲಿ ಈ ವರ್ಷವೂ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರದ ನಾನಾ ಇಲಾಖೆಗಳು ಸಿವಿಲ್ ಕಾಮಗಾರಿಗಳಲ್ಲಿ ಶೇ.50ಕ್ಕೂ ಹೆಚ್ಚು ಕೆಲಸಗಳಿಗೆ “ಎಂ ಸ್ಯಾಂಡ್’ ಬಳಸುತ್ತಿವೆ. ಇದರಿಂದ ಬೇಡಿಕೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ 30 ದಶಲಕ್ಷ ಟನ್ ಮರಳಿಗೆ ಬೇಡಿಕೆಯಿದ್ದು, ಇದರಲ್ಲಿ ಮೂರನೇ ಎರಡಷ್ಟು “ಎಂ ಸ್ಯಾಂಡ್’ ಬಳಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲೇ 46 ಘಟಕಗಳಿದ್ದು, ವಾರ್ಷಿಕ 38 ಲಕ್ಷ ಟನ್ “ಎಂ ಸ್ಯಾಂಡ್’ ಉತ್ಪಾದನೆಯಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ 19 ಘಟಕಗಳಿದ್ದು, 39 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ 10 ಘಟಕಗಳಿದ್ದು, 28 ಲಕ್ಷ ಟನ್ ತಯಾರಾಗುತ್ತಿದೆ. ದಾವಣಗೆರೆಯಲ್ಲೂ 3 ಘಟಕಗಳಿದ್ದು, 1.68 ಲಕ್ಷ ಟನ್ ಉತ್ಪತ್ತಿಯಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಉತ್ಪತ್ತಿಯಾಗುವ “ಎಂ ಸ್ಯಾಂಡ್’ನಲ್ಲಿ ಬಹುಪಾಲು ಬೆಂಗಳೂರಿನಲ್ಲೇ ಬಳಕೆಯಾಗುತ್ತಿದೆ ಎಂದು ಹೇಳಿವೆ. ಎರಡು ಸಂಚಾರಿ ಪ್ರಯೋಗಾಲಯ
ಲೋಕೋಪಯೋಗಿ ಇಲಾಖೆಯ ಪ್ರಯೋಗಾಲಯ ಸೇರಿದಂತೆ ಇತರೆಡೆ “ಎಂ ಸ್ಯಾಂಡ್’ ಗುಣಮಟ್ಟ ಪರಿಶೀಲನೆಗೆ ಅವಕಾಶವಿದೆ. ಜತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿವಿ ವ್ಯಾಪ್ತಿಯ ಕಾಲೇಜುಗಳ ಪ್ರಯೋಗಾಲದಲ್ಲೂ “ಎಂ ಸ್ಯಾಂಡ್’ ಪರೀಕ್ಷೆಗೆ ಅವಕಾಶವಿದೆ. ಬಳಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಎರಡು ಸಂಚಾರಿ ಪ್ರಯೋಗಾಲಯ ಆರಂಭಿಸಲು ಇಲಾಖೆ ಸಿದ್ಧತೆ ನಡೆಸಿದೆ. “ಎಂ ಸ್ಯಾಂಡ್’ಗೆ ಭಾರಿ ಬೇಡಿಕೆ
2016ರಿಂದ ರಾಜ್ಯದಲ್ಲಿ “ಎಂ ಸ್ಯಾಂಡ್’ಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ. ವಾರ್ಷಿಕ 20 ದಶಲಕ್ಷ ಟನ್ “ಎಂ ಸ್ಯಾಂಡ್’ ಬಳಕೆಯಾಗುತ್ತಿದ್ದು, ಇಷ್ಟು ಪ್ರಮಾಣದ ನದಿ ಮರಳಿನ ಬಳಕೆ ಕಡಿಮೆಯಾದಂತಾಗಿದೆ. ದಿನ ಕಳೆದಂತೆ ಬೇಡಿಕೆ ಹೆಚ್ಚಾಗುತ್ತಿದೆ. “ಎಂ ಸ್ಯಾಂಡ್’ ಪ್ರಯೋಜನ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಸದ್ಯದಲ್ಲೇ ಎರಡು ಸಂಚಾರಿ ಪ್ರಯೋಗಾಲಯ ಸೇವೆಗೂ ಚಾಲನೆ ನೀಡಲಾಗುವುದು.
– ಎಂ.ಸಿ.ಕುಮಾರ್, ಉಪ ನಿರ್ದೇಶಕ (ಉಪ ಖನಿಜ), ಗಣಿ ಮತ್ತು ಭೂವಿಜ್ಞಾನ ಇಲಾಖೆ “ಎಂ ಸ್ಯಾಂಡ್’ ಉತ್ಪಾದನೆ ವಿವರ
ವರ್ಷ ಘಟಕ ಸಂಖ್ಯೆ ಪ್ರಮಾಣ (ದಶಲಕ್ಷ ಟನ್)
2013-14 7 1.47
2014-15 35 5.5
2015-16 65 8
2016-17 164 20 – ಎಂ.ಕೀರ್ತಿ ಪ್ರಸಾದ್