Advertisement

ಮ್ಯಾನ್‌ಹೋಲ್‌ ಸ್ವಚ್ಛತೆಗೆ ಪೌರಕಾರ್ಮಿಕರ ಬಳಕೆ

08:55 PM Jul 21, 2019 | Lakshmi GovindaRaj |

ಮೈಸೂರು: ಮಲ ಹೊರಿಸುವುದು, ಮಲ ಹೊರುವುದು ಶಿಕ್ಷಾರ್ಹ ಅಪರಾಧ ಎಂಬ ಸುಪ್ರೀಂ ಕೋರ್ಟಿನ ತೀರ್ಪಿದ್ದರೂ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

Advertisement

ನಿರ್ಮೂಲನೆಗೆ ಮುಂದಾಗಿಲ್ಲ: ಸ್ವಚ್ಛನಗರಿ ಮೈಸೂರಿನಲ್ಲಿ ಮನುಷ್ಯರಿಂದ ಮ್ಯಾನ್‌ಹೋಲ್‌ ಶುಚಿಗೊಳಿಸುವ ಅಮಾನವೀಯ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇವೆ. ಆದರೆ, ಇಂತಹ ಪ್ರಕರಣಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಿಲ್ಲಾಡಳಿತ, ಪಾಲಿಕೆ ಮುಂದಾಗಿಲ್ಲ. ಮೈಸೂರಿನ ಅಗ್ರಹಾರದ ಬಸವೇಶ್ವರ ರಸ್ತೆಯ 15ನೇ ತಿರುವಿನಲ್ಲಿ ವ್ಯಕ್ತಿಯೊಬ್ಬರು ಮ್ಯಾನ್‌ಹೋಲ್‌ ಶುಚಿಗೊಳಿಸುತ್ತಿರುವ ಅಮಾನವೀಯ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮನುಷ್ಯನಿಂದ ಮ್ಯಾನ್‌ಹೋಲ್‌ಗೆ ಇಳಿಸಿ, ಮಲವನ್ನು ಮೇಲಕ್ಕೆ ತೆಗೆಸುವುದು ಶಿಕ್ಷಾರ್ಹ ಅಪರಾಧ ಎಂದು 2003ರಲ್ಲಿಯೇ ಸುಪ್ರೀಂ ಕೋರ್ಟ್‌ ಆದೇಶಿಸಿದ್ದರೂ, ಮೈಸೂರು ಜಿಲ್ಲೆ ಮತ್ತು ನಗರದಲ್ಲಿ ಇಂತಹ ಪ್ರಕರಣಗಳು ಆಗಾಗ ಮರುಕಳುಸುತ್ತಿವೆ.

ಮಾನವ ಹಕ್ಕು ಉಲ್ಲಂಘನೆ: ಬಸವೇಶ್ವರ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಮ್ಯಾನ್‌ಹೋಲ್‌ ಶುಚಿಗೊಳಿಸುತ್ತಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಿದ ಹಿನ್ನೆಲೆ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಪ್ರಕರಣದ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಮಾನವನಿಂದ ಮ್ಯಾನ್‌ಹೋಲ್‌ ಶುಚಿಗೊಳಿಸುವುದು, ಮಲ ಹೊರಿಸುವುದು ಮತ್ತು ಹೊರುವುದು ಮಾನವ ಹಕ್ಕು ಸ್ಪಷ್ಟ ಉಲ್ಲಂಘನೆಯಾಗಿದೆ. ದೇಶದಲ್ಲಿ ತಿಂಗಳಿಗೊಂದು ರಾಕೆಟ್‌ ಉಡಾವಣೆ ಮಾಡುವಷ್ಟು ತಂತ್ರಜ್ಞಾನವಿದ್ದರೂ, ಮ್ಯಾನ್‌ಹೋಲ್‌ ಶುಚಿಗೊಳಿಸುವ ಯಂತ್ರವೊಂದನ್ನು ಕಂಡು ಹಿಡಿಯಲು ಏಕೇ ಸಾಧ್ಯವಾಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ.

ಗಂಭೀರವಾಗಿ ಪರಿಗಣಿಸಿ: ಮೈಸೂರು ನಗರ ಸ್ವಚ್ಛತೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಹೆಮ್ಮೆ ಪಟ್ಟುಕೊಳ್ಳುತ್ತೇವೆ. ಇದಕ್ಕೆ ಪೌರಕಾರ್ಮಿಕ ಶ್ರಮ ಸಾಕಷ್ಟಿದೆ. ಆದರೆ, ಅವರಿಂದ ಮ್ಯಾನ್‌ಹೋಲ್‌ ಶುಚಿಗೊಳಿಸಲು ಆಗಾಗ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇಂತಹ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸಂತೆ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಹಿಂದೆಯೂ ನಡೆದಿದೆ: ಕೆಲವು ತಿಂಗಳ ಹಿಂದೆ ಅಶೋಕಪುರಂನಲ್ಲಿ ಪೌರಕಾರ್ಮಿಕನನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಶುಚಿಗೊಳಿಸಲಾಗಿತ್ತು. ನಂತರ ಈ ಬಗ್ಗೆ ಸಾರ್ವಜನಿಕರು ವಿರೋಧಿಸಿ, ದೂರು ದಾಖಲಿಸಿದ್ದರು. ಒಂದು ವರ್ಷದ ಹಿಂದೆ ಚಾಮುಂಡಿಬೆಟ್ಟದಲ್ಲೂ ಪೌರಕಾರ್ಮಿಕರನ್ನು ಮ್ಯಾನ್‌ಹೋಲ್‌ಗಿಳಿಸಿ ಶುಚಿಗೊಳಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ, ಪೌರಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ್ದವರನ್ನು ಶಿಕ್ಷೆಗೆ ಒಳಪಡಿಸಿತ್ತು.

Advertisement

ಅಪಾಯಕ್ಕೆ ಆಹ್ವಾನ: ಮ್ಯಾನ್‌ಹೋಲ್‌ಗ‌ಳಿಗೆ ಮಾನುಷ್ಯರನ್ನು ಇಳಿಸುವುದು ಅಮಾನವೀಯ ಕೃತ್ಯವಾದರೂ, ಮತ್ತೂಂದೆಡೆ ಸಾವಿನ ದವಡೆಗೆ ಮನುಷ್ಯನನ್ನು ತಳ್ಳಿದಂತೆ. ಮ್ಯಾನ್‌ಹೋಲ್‌ ಒಳಗೆ ಶುದ್ಧಗಾಳಿ ಇಲ್ಲದ ಕಾರಣ, ರಾಸಾಯನಿಕ ಕ್ರಿಯೆಗೆ ಒಳಪಟ್ಟ ಮೀಥೆನ್‌ ಅನಿಲ ಮಾರಕವಾಗಿದ್ದು, ಹಲವರು ಮೃತಪಟ್ಟಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.

ಸಚಿವರ ಪ್ರತಿಕ್ರಿಯೆ: ಘಟನೆ ಬಗ್ಗೆ ಫೋಟೋ ಸಹಿತ ಟ್ವಿಟರ್‌ನಲ್ಲಿ ಕಾನೂನು ವಿದ್ಯಾರ್ಥಿಯೊಬ್ಬರು ಟ್ವೀಟ್‌ ಮಾಡಿದ್ದು, ಇದಕ್ಕೆ ಕೂಡಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಗಮನಹರಿಸಿ, ಸೂಕ್ತ ಕ್ರಮ ವಹಿಸಲಿದೆ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪೌರಕಾರ್ಮಿಕರು ಅಥವಾ ವ್ಯಕ್ತಿಯಿಂದ ಮ್ಯಾನ್‌ಹೋಲ್‌ ಶುಚಿಗೊಳಿಸುವುದು ಅಕ್ಷಮ್ಯ ಅಪರಾಧ. ಜೊತೆಗೆ ಮನುಷ್ಯರಿಂದ ಮ್ಯಾನ್‌ಹೋಲ್‌ ಶುಚಿಗೊಳಿಸುವುದು ಮಹಾಪರಾಧವೆಂದು ನಾಗರಿಕರಿಗೆ ಅರಿವು ಮೂಡಿಸಬೇಕು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರ ಸ್ಥಾನದಲ್ಲಿರುವವರು ಎಚ್ಚರಿಕೆ ವಹಿಸಬೇಕು.
-ಪುನೀತ್‌, ಕಾನೂನು ವಿದ್ಯಾರ್ಥಿ

ಘಟನೆ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ. ಈ ಸಂಬಂಧ ವರದಿ ತರಿಸಿಕೊಂಡು ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಪಾಲಿಕೆ ಜವಾಬ್ದಾರಿ ಇರುವುದರಿಂದ ಅವರು, ಈ ಬಗ್ಗೆ ಜಾಗೃತಿ ವಹಿಸಬೇಕು.
-ಬಿಂದ್ಯಾ, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ

* ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next