ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಬೈಪಾಸ್ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿಯಿಂದ ತನಿಖೆ ಮಾಡಿ ವರದಿ ಸಲ್ಲಿಕೆಗೆ ಆದೇಶ ಪತ್ರ ಕಳುಹಿಸಿದ್ದರೂ ಅದನ್ನು ಪರಿಗಣಿಸದೆ ಸುಮಾರು 40 ಜನ ರೈತರ ಕೃಷಿಗೆ ಕಂಟಕವಾಗುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿರುವುದಕ್ಕೆ ಕುಸುಗಲ್ಲ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಾದ 218, 63 ಹಾಗೂ 4ನ್ನು ಜೋಡಿಸಲು ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಅಭಿವೃದ್ಧಿ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ಭೂಮಾμಯಾ ಹಾಗೂ ರಾಜಕಾರಣಿಗಳ ಭೂಮಿಗಳ ಅನುಕೂಲಕೋಸ್ಕರ ರೈತರ ಫಲವತ್ತಾದ ಭೂಮಿಯನ್ನು ಯೋಜನೆ ಹೆಸರಿನ ಸ್ವಾಹಕ್ಕೆ ನಮ್ಮ ವಿರೋಧವಿದೆ ಎಂಬುದು ಸುಗಲ್ಲ ರೈತ ಸೇವಾ ಸಂಘದ ಅನಿಸಿಕೆಯಾಗಿದೆ.
ಬೈಪಾಸ್ ರಸ್ತೆ ನಿರ್ಮಾಣಕ್ಕೆ ರಾಜಕಾರಣಿಗಳ ಭೂಮಿಗೆ ಅನುಕೂಲ ಮಾಡಿಕೊಡಲು ರೈತರ ಹೊಲದಲ್ಲಿ ರಸ್ತೆ ಬರುವಂತೆ ಮಾಡಲಾಗುತ್ತಿದೆ ಎಂಬ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಅದೇ ರೀತಿ ಪ್ರಧಾನಿ ಕಚೇರಿಗೆ ಹಾಗೂ ಕೇಂದ್ರ ಭೂ ಸಾರಿಗೆ ಸಚಿವರ ಕಚೇರಿಗೆ ಪತ್ರ ಬರೆದಿದ್ದೆವು.
ಪ್ರಕರಣದ ಕುರಿತಾಗಿ ತನಿಖೆ ನಡೆಸಿ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನೀಯರ್‌ಗೆ ಪ್ರಧಾನಿ ಕಚೇರಿಯಿಂದ ಇದೇ ವರ್ಷದ ಜನವರಿ 18ರಂದು ಆದೇಶ ಬಂದಿದೆ. ಇಷ್ಟಿದ್ದರೂ ಇತ್ತೀಚೆಗೆ ಸಂಸದ ಪ್ರಹ್ಲಾದ ಜೋಶಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ, ಶಾಸಕ ಎನ್.ಎಚ್.ಕೋನರಡ್ಡಿ ಅವರು ಬೈಪಾಸ್ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಎರಡು ವರ್ಷದಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಹೇಳಿರುವುದು ರೈತರ ಆತಂಕ ಹೆಚ್ಚುವಂತೆ ಮಾಡಿದೆ.
ಅಷ್ಟೇ ಅಲ್ಲ ತಮ್ಮದೇ ಪಕ್ಷದ ಪ್ರಧಾನಿಯವರ ಕಚೇರಿ ಆದೇಶಕ್ಕೂ ಬೆಲೆ ಇಲ್ಲದ ರೀತಿಯಲ್ಲಿ ಸಂಸದರು ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕರು ರೈತರಿಗೆ ಅನ್ಯಾಯ ಮಾಡುವ ರೀತಿಯಲ್ಲಿ ಬೈಪಾಸ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ.
ಅದೇ ರೀತಿ ಸಂಸದ ಪ್ರಹ್ಲಾದ ಜೋಶಿಯವರು ನಮ್ಮ ಗುರುವೆಂದು ಹೇಳಿಕೊಳ್ಳುವ ಶಾಸಕ ಎನ್.ಎಚ್. ಕೋನರಡ್ಡಿ ಅವರು ಹೋರಾಟ ನಿರತ ರೈತರಿಂದ ರಾಜಿ ಮಾಡಿಸುತ್ತೇವೆ ಎಂದು ಹೇಳಿರುವುದು ನೋಡಿದರೆ ಇವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ತೋರಿಸುತ್ತದೆ.
ರೈತರಿಗಾದ ಅನ್ಯಾಯಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಕರೆದ್ಯೊಯುತ್ತೇನೆ, ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ ಎಂದೆಲ್ಲ ಹೇಳಿದ್ದ ಕೋನರಡ್ಡಿ ರೈತರಿಗೆ ಮೋಸ ಮಾಡಿದ್ದಾರೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ನಮ್ಮ ಕೃಷಿ ಭೂಮಿ ನೀಡುವುದಿಲ್ಲ. ಕಾನೂನು ಹೋರಾಟಕ್ಕೂ ನಾವು ಸಿದ್ದರಿದ್ದೇವೆ ಎಂದು ನೊಂದ ರೈತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.