Advertisement

ಆಯುರ್ವೇದ ವೈದ್ಯಕೀಯ ಪದ್ದತಿ ಬಳಕೆ ಹೆಚ್ಚಳ ಅವಶ್ಯ

05:33 PM May 19, 2018 | Team Udayavani |

ಹುಬ್ಬಳ್ಳಿ: ಆಯುರ್ವೇದ ವೈದ್ಯ ಪದ್ಧತಿ ಬಳಕೆ ಹೆಚ್ಚುವುದು ಅವಶ್ಯ ಎಂದು ಓಡಿಶಾ ಸ್ಕೂಲ್‌ ಆಫ್ ಬಯೋಟೆಕ್ನಾಲಜಿ ಪ್ರಾಧ್ಯಾಪಕ ಡಾ| ಸಂತೋಷ ಕುಮಾರ ಕಾರ್‌ ಹೇಳಿದರು.

Advertisement

ಡಾ| ಕೆ.ಎಸ್‌. ಶರ್ಮಾ ಸಮೂಹ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಎಂಬಾರ್‌ ಭಾಷ್ಯಾಚಾರ್ಯ ಮೆಮೋರಿಯಲ್‌ ಕ್ಯಾನ್ಸರ್‌ ಕೇರ್‌ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದ ಪ್ರಾಚೀನ ವೈದ್ಯ ಪದ್ಧತಿಯಾಗಿದ್ದು, ಅಲೋಪತಿ ಚಿಕಿತ್ಸಾ ಪದ್ಧತಿ ಒಂದು ಶತಮಾನದಿಂದೀಚೆಗೆ ಚಾಲ್ತಿಯಲ್ಲಿದೆ. ಆಯುರ್ವೇದ ಸಹಸ್ರಾರು ವರ್ಷಗಳಿಂದ ಬಳಕೆಯಲ್ಲಿದ್ದು, ಹಲವಾರು ಮಾರಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಆಯುರ್ವೇದಕ್ಕಿದೆ ಎಂದರು.

ತುಳಸಿ, ಅಲೋವೆರಾ, ಅರಿಷಿಣದ ಉಪಯೋಗವನ್ನು ಅರಿತುಕೊಳ್ಳುವುದು ಮುಖ್ಯ. ಹಲವು ಆರೋಗ್ಯ ಸಮಸ್ಯೆಗಳಿಗೆ ಇವುಗಳಿಂದ ಚಿಕಿತ್ಸೆ ನೀಡಬಹುದಾಗಿದೆ. ಸ್ಕೂಲ್‌ ಆಫ್ ಬಯೋಟೆಕ್ನಾಲಜಿಯಲ್ಲಿ ಅರಿಷಿಣದಿಂದ ನ್ಯಾನೊ ಕುರ್ಕುಮಿನ್‌ ಔಷಧಿ ಸಿದ್ಧಪಡಿಸಿದ್ದು, ಮಲೇರಿಯಾ, ಕ್ಯಾನ್ಸರ್‌ ರೋಗಿಗಳು ಗುಣಮುಖರಾಗಲು ಇದು ನೆರವಾಗಲಿದೆ. ಕಿಮೋ ಥೆರಪಿಯಿಂದ ರೋಗಿಯ ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳಿಗೆ ನ್ಯಾನೊ ಕುರ್ಕುಮಿನ್‌ ಬಳಕೆಯಿಂದ ಪ್ರಯೋಜನವಾಗಲಿದೆ ಎಂದು ಹೇಳಿದರು. 10 ವರ್ಷಗಳ ಪ್ರಯತ್ನದ ಬಳಿಕ ನ್ಯಾನೊ ಕುರ್ಕುಮಿನ್‌ಗೆ ಪೇಟೆಂಟ್‌ ಪಡೆದುಕೊಳ್ಳಲಾಗಿದೆ. ಲಾಭ ಮಾಡಿಕೊಳ್ಳುವುದು ನಮ್ಮ ಉದ್ದೇಶವಲ್ಲ, ಜನರಿಗೆ ಇದರಿಂದ ಒಳಿತಾಗುವುದು ಮುಖ್ಯ. ಮಲೇರಿಯಾ ರೋಗ ತಡೆಗಟ್ಟುವ ದಿಸೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಶ್ರೀಲಂಕಾ ಸರಕಾರ ಮಲೇರಿಯಾ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದೇ ಮಾದರಿಯಲ್ಲಿ ನಾವು ಕ್ರಮಕ್ಕೆ ಮುಂದಾಗಬೇಕು ಎಂದರು.

ಪುಣೆಯ ನ್ಯಾಷನಲ್‌ ಸೆಂಟರ್‌ ಫಾರ್‌ ಸೆಲ್‌ ಸೈನ್ಸ್‌ ವಿಜ್ಞಾನಿ ಡಾ| ಭಾಸ್ಕರ ಸಹಾ ಮಾತನಾಡಿ, ಆಯುರ್ವೇದದಲ್ಲಿ ಸಾಕಷ್ಟು ಅವಕಾಶಗಳಿವೆ. ಯುವ ವೈದ್ಯರು ಅವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಡಾ| ಕೆ.ಎಸ್‌. ಶರ್ಮಾ ಪ್ರಾಸ್ತಾವಿಕ ಮಾತನಾಡಿದರು. ಸಂಜೀವಿನಿ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ| ಶ್ರೀನಿವಾಸ ಬನ್ನಿಗೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next