Advertisement

ಇಂದಿನಿಂದ ಮೇಲ್ಸೇತುವೆ ಲೂಪ್‌ ತೆರವು

01:00 AM Jan 16, 2020 | Team Udayavani |

ಬೆಂಗಳೂರು: ಮೆಟ್ರೋ ಇಂಟರ್‌ಚೇಂಜ್‌ ನಿಲ್ದಾಣಕ್ಕಾಗಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದ ಜಯದೇವ ಮೇಲ್ಸೇತುವೆ ಲೂಪ್‌ ತೆರವು ಕಾಮಗಾರಿ ಗುರುವಾರದಿಂದ ಪ್ರಾರಂಭ ವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಆರ್‌.ವಿ. ರಸ್ತೆ-ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗಗಳ ಇಂಟರ್‌ಚೇಂಜ್‌ ನಿಲ್ದಾಣ ಜಯದೇವ ಆಸ್ಪತ್ರೆ ಬಳಿ ನಿರ್ಮಾಣವಾಗಲಿದ್ದು, ಇದಕ್ಕಾಗಿ ಜಯದೇವ ಆಸ್ಪತ್ರೆ ಎದುರಿನ ಮೇಲ್ಸೇತುವೆ ಕೆಡವಲು ಯೋಜನೆ ರೂಪಿಸಲಾಗಿತ್ತು.

2 ಹಂತದಲ್ಲಿ ಮೇಲ್ಸೇತುವೆ ತೆರವು ಕಾರ್ಯಾಚರಣೆಗೆ ಯೋಜನೆ ರೂಪಿಸಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಮೇಲ್ಸೇತುವೆ ಒಂದು ಭಾಗವಾದ 150 ಮೀಟರ್‌ ಉದ್ದದ ಲೂಪ್‌ ತೆರವು ಕಾಮಗಾರಿ ಕೈಗೊಳ್ಳಲಾಗಿತ್ತು. ಈಗ ಇನ್ನುಳಿದ ಮೇಲ್ಸೇತುವೆ ಭಾಗ ತೆರವು ಮಾಡಲು ಬಿಎಂಆರ್‌ಸಿಎಲ್‌ ಸಿದ್ಧತೆ ಮಾಡಿಕೊಂಡಿದೆ.

ಮೇಲ್ಸೇತುವೆ ತೆರವು ಕಾರ್ಯಾಚರಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮೇಲ್ಸೇತುವೆ ಕೆಳಭಾಗದಲ್ಲಿ ಎಲ್ಲಾ ವಾಹನ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.

ಕೆಳಸೇತುವೆಯಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರಾತ್ರಿ 10ರ ನಂತರ ಮೇಲ್ಸೇತುವೆ ಕಾಮಗಾರಿ ಆರಂಭವಾಗಲಿದ್ದು, ಸುರಕ್ಷತೆ ದೃಷ್ಟಿಯಿಂದ ವಾಹನ ಸಂಚಾರ ನಿರ್ಬಂಧಿಸಲಾ ಗಿದೆ. ತೆರವು ಕಾರ್ಯಾಚರಣೆ 3 ತಿಂಗಳ ಕಾಲ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಜಯದೇವ ಆಸ್ಪತ್ರೆ ಜಂಕ್ಷನ್‌ನಲ್ಲಿ 70 ಅಡಿ ಎತ್ತರದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದ ನಿಲ್ದಾಣ ಬರಲಿದ್ದು, ಕೆಳಗೆ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಿಲ್ದಾಣ, ಅದರ ಕೆಳಗೆ ಹೊಸ ಮೇಲ್ಸೇತುವೆ ನಿರ್ಮಾಣವಾಗಲಿದೆ. ಆ ಮೇಲ್ಸೇ ತುವೆ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಮಾರ್ಗದ ಕಡೆ ಹೋಗಲಿದೆ.

13 ವರ್ಷದ ಮೇಲ್ಸೇತುವೆ: ಜಯದೇವ ಮೇಲ್ಸೇತುವೆ 13 ವರ್ಷ ಹಳೆಯದಾಗಿದೆ. ಜಯನಗರ, ಬನಶಂಕರಿ ಕಡೆಯಿಂದ ಸಿಲ್ಕ್ಬೋರ್ಡ್‌ ಕಡೆಗೆ ಸಂಚರಿಸುವ ವಾಹನ ಸವಾರರ ಅನುಕೂಲಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 21 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ಯನ್ನು ನಿರ್ಮಿಸಿತ್ತು. 2006ರಲ್ಲಿ ಇದನ್ನು ಲೋಕಾರ್ಪಣೆ ಮಾಡಿ ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಒಂದರ ಮೇಲೊಂದು ಮಾರ್ಗ: ಜಯದೇವ ಆಸ್ಪತ್ರೆಯ ಜಂಕ್ಷನ್‌ನಲ್ಲಿ 70 ಅಡಿ ಎತ್ತರದಲ್ಲಿ ಗೊಟ್ಟಿಗೆರೆ- ನಾಗವಾರ ಮಾರ್ಗದ ನಿಲ್ದಾಣ ಬರಲಿದೆ. ಕೆಳಗೆ ಆರ್‌. ವಿ.ರಸ್ತೆ-ಬೊಮ್ಮಸಂದ್ರ ನಿಲ್ದಾಣ ಹಾಗೂ ಅದರ ಕೆಳಗೆ ಹೊಸ ಮೇಲ್ಸೇತುವೆ ನಿರ್ಮಾಣವಾಗಲಿದೆ. ಆ ಮೇಲ್ಸೇತುವೆ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಕಡೆ ಹೋಗಲಿದೆ.

ಮಾರ್ಗ ಬದಲು:‌ ಮೇಲ್ಸೇತುವೆ ತೆರವಿನಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ನಿಗದಿ ಮಾಡಿಕೊಳ್ಳಲಾಗಿದೆ. ಅದರಂತೆ ಸಿಲ್ಕ್ ಬೋರ್ಡ್‌ ಕಡೆಗೆ ತೆರಳುವ ವಾಹನ ರಾಘವೇಂದ್ರ ಮಠದ ಬಳಿ ಎಡ ತಿರುವು ಪಡೆಯಬೇಕಿದೆ. ಹಾಗೂ ಸಿಲ್ಕ್ಬೋರ್ಡ್‌ ಕಡೆಯಿಂದ ಜಯನಗರ, ಬನಶಂಕರಿ ಕಡೆಗೆ ತೆರಳುವ ವಾಹನ ಅಕ್ಸಾ ಸಿಗ್ನಲ್‌ (ಮಡಿವಾಳ ಕೆರೆ ಬಳಿ)ನಲ್ಲಿ ಬಲ ತಿರುವು ಪಡೆದು ಸಾಗಬೇಕಿದೆ.

ಸಂಚಾರ ದಟ್ಟಣೆ: ಬನಶಂಕರಿಯಿಂದ ಸಿಲ್ಕ್ಬೋರ್ಡ್‌ ಕಡೆಗೆ ತೆರಳುವ ಬಹುತೇಕ ವಾಹನಗಳು ಜಯದೇವ ಮೇಲ್ಸೇತುವೆ ಮೂಲಕ ಸಂಚರಿಸುತ್ತಿವೆ. ಈಗ ಮೇಲ್ಸೇತುವೆ ತೆರವಿನಿಂದ ವಾಹನಗಳು ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಿದೆ. ಹೀಗಾಗಿ, ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next