Advertisement

ಯುಪಿಒಆರ್‌ ಯೋಜನೆ ಶೀಘ್ರ ಜಾರಿ

03:19 PM Aug 05, 2018 | Team Udayavani |

ಬೆಂಗಳೂರು: ನಗರಗಳಲ್ಲಿನ ಆಸ್ತಿಗಳ ಮಾಲೀಕತ್ವದ ಹಕ್ಕಿಗೆ ಸಂಬಂಧಪಟ್ಟಂತೆ ದಾಖಲೆ ಸಿದ್ಧಪಡಿಸುವ ಮಹತ್ವಾಕಾಂಕ್ಷಿ “ನಗರ ಆಸ್ತಿ ಮಾಲೀಕತ್ವದ ಹಕ್ಕು ದಾಖಲೆಗಳ ಯೋಜನೆ’ಯನ್ನು (ಯುಪಿಒಆರ್‌- ಅರ್ಬನ್‌ ಪ್ರಾಪರ್ಟಿ ಓನರ್‌ಶಿಪ್‌ ರೆಕಾರ್ಡ್ಸ್‌ ಪ್ರಾಜೆಕ್ಟ್) ರಾಜ್ಯಾದ್ಯಂತ ಕ್ಷಿಪ್ರವಾಗಿ ಜಾರಿಗೊಳಿಸಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

Advertisement

1964ರ ಕರ್ನಾಟಕ ಭೂಕಂದಾಯ ಕಾಯ್ದೆ ಮತ್ತು ನಿಯಮಾವಳಿ 1966ರನ್ವಯ ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನವಾಗುತ್ತಿದೆ. ಕಂದಾಯ ಇಲಾಖೆಯ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ ಜಾರಿಗೊಳಿಸುತ್ತಿರುವ ಯೋಜನೆಗೆ ಮೊದಲ ಸುತ್ತಿನಲ್ಲಿ ಮೈಸೂರು, ಶಿವಮೊಗ್ಗ ಹಾಗೂ ಮಂಗಳೂರು ನಗರ ಆಯ್ಕೆಯಾಗಿವೆ. ಯೋಜನೆಯಡಿ ನಗರ ಪ್ರದೇಶ ವ್ಯಾಪ್ತಿಯ ಪ್ರತಿ ಆಸ್ತಿಯನ್ನು ಅಳತೆ ಮಾಡಿ ನಕ್ಷೆ ಸಿದ್ಧಪಡಿಸಲಾಗುತ್ತದೆ. ಅದರಂತೆ ಈ ಮೂರು ನಗರಗಳಲ್ಲಿ ಆಸ್ತಿ ಅಳತೆ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಆಸ್ತಿಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳಿಂದ ದಾಖಲೆ ಸಂಗ್ರಹಿಸಿ ನಂತರ ಪರಿಶೀಲನೆಗೆ ಒಳಪಡಿಸಲಾಗುವುದು. ಬಳಿಕ ಹಕ್ಕು ವಿಚಾರಣೆ ಪ್ರಕ್ರಿಯೆ ಆರಂಭಿಸಿ ಆಸ್ತಿ ದಾಖಲೆ (ಪ್ರಾಪರ್ಟಿ ರೆಕಾರ್ಡ್‌) ಸಿದ್ಧಪಡಿಸಿ ಆಸ್ತಿ ಮಾಲೀಕರಿಗೆ ವಿತರಿಸಲಾಗುವುದು. ನಗರ ಪ್ರದೇಶಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗೆ ಆಸ್ತಿ ದಾಖಲೆ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಶಿವಮೊಗ್ಗದಲ್ಲಿ ಆಸ್ತಿ ದಾಖಲೆ ವಿತರಿಸಲಾಗಿದೆ. ಸದ್ಯ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಲವೇ ದಿನಗಳಲ್ಲಿ ಮೈಸೂರು ನಗರದಲ್ಲೂ ಆಸ್ತಿ ನೋಂದಣಿಗೆ ಇದೇ ಕ್ರಮ ಜಾರಿಗೊಳಿಸಲಾಗುವುದು. ಹೀಗೆ ರಾಜ್ಯದ ಎಲ್ಲ ನಗರಗಳಲ್ಲೂ ಯುಪಿಒಆರ್‌ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಮೂನೆ- 13ರ ಅನ್ವಯ ಈ ಆಸ್ತಿ ದಾಖಲೆಗಳನ್ನು ಮಾಲೀಕತ್ವದ ದಾಖಲೆಗಳೆಂದು ಪರಿಗಣಿಸಲಾಗುವುದು. ಹೀಗಾಗಿ ನಗರ ಪ್ರದೇಶಗಳಲ್ಲಿ ಆಸ್ತಿ ಹೊಂದಿರುವವರಿಗೆ ಇದು ಅತ್ಯವಶ್ಯಕ ದಾಖಲೆಯಾಗಲಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next