Advertisement

ಬಾಲಗ್ರಹ ಪೀಡೆಗೆ ತುತ್ತಾದ ವಿಪಕ್ಷಗಳ ಒಗ್ಗಟ್ಟು

11:18 PM Jul 04, 2023 | Team Udayavani |

ಆಡಳಿತಾರೂಢ ಬಿಜೆಪಿ ವಿರುದ್ಧ ಮುಂಬರುವ ಲೋಕಸಭೆ ಚುನಾವಣೆ­ಯಲ್ಲಿ ದೇಶಾದ್ಯಂತ ಒಗ್ಗೂಡಿ ಕಣಕ್ಕಿಳಿಯುವ ವಿಪಕ್ಷಗಳ ಪ್ರಯತ್ನಕ್ಕೆ ಪ್ರಾಥಮಿಕ ಹಂತದಲ್ಲಿಯೇ ಅಡೆತಡೆಗಳು ಬಾಧಿಸುತ್ತಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿ ಕಾಂಗ್ರೆಸ್‌ ಬಹುಮತದಿಂದ ಅಧಿಕಾರಕ್ಕೇರಿದ ಬಳಿಕ ವಿಪಕ್ಷ ಪಾಳಯದಲ್ಲಿ ಬಿಜೆಪಿಯನ್ನು ಮಣಿಸುವ ಆಶಾವಾದವೊಂದು ಚಿಗುರೊಡೆದಿತ್ತು. ಕಳೆದೆರಡು ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರ ಸೂತ್ರವನ್ನು ಹಿಡಿದಿರುವ ಬಿಜೆಪಿಗೆ ಈ ಬಾರಿ ಶತಾಯಗತಾಯ ಸೋಲುಣಿಸಲು ಪಣತೊಟ್ಟಿರುವ ವಿಪಕ್ಷಗಳು ಒಂದೇ ವೇದಿಕೆಯಡಿ ಸ್ಪರ್ಧಿಸಲು ತೀರ್ಮಾನಿಸಿವೆ.

Advertisement

ಎನ್‌ಡಿಎಯೇತರ ಪಕ್ಷಗಳ ಸಭೆ ಜೂ.23ರಂದು ಪಟ್ನಾದಲ್ಲಿ ನಡೆದಿತ್ತು. ಈ ಸಭೆಯಲ್ಲಿ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಜೆಡಿಯು, ಎನ್‌ಸಿಪಿ, ಆಪ್‌, ಡಿಎಂಕೆ, ಸಿಪಿಐ, ಪಿಡಿಪಿ ಸಹಿತ 16 ಪಕ್ಷಗಳ ಮುಖಂಡರು ಭಾಗವಹಿಸಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗೂಡಿ ಹೋರಾಟ ನಡೆಸಲು ತೀರ್ಮಾನಿಸಿದ್ದರು.

ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಯನ್ನು ಶಿಮ್ಲಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತಾದರೂ ಆ ಬಳಿಕ ಇದನ್ನು ಬೆಂಗಳೂರಿಗೆ ಸ್ಥಳಾಂತರಿ­ಸಲಾಗಿದೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಸಭೆಯ ದಿನಾಂಕವನ್ನು ಜುಲೈ 13 ಮತ್ತು 14ರ ಬದಲಿಗೆ ಇದೇ 17 ಮತ್ತು 18ಕ್ಕೆ ಮುಂದೂಡಲಾಗಿದೆ ಎಂದು ಕಾಂಗ್ರೆಸ್‌ ಧುರೀಣ ಕೆ.ಸಿ. ವೇಣುಗೋಪಾಲ್‌ ಘೋಷಿಸಿದ್ದಾರೆ. ಎನ್‌ಸಿಪಿಯಲ್ಲಿ ಆಂತರಿಕ ಸಂಘರ್ಷ ಭುಗಿಲೆದ್ದಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಎಂವಿಎ ಯ ಪಾಲು­ದಾರ ಪಕ್ಷವಾಗಿದ್ದ ಎನ್‌ಸಿಪಿಯ ಹಿರಿಯ ನಾಯಕ ಅಜಿತ್‌ ಪವಾರ್‌ ನೇತೃತ್ವದ ಬಣ ದಿಢೀರನೆ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣ ಮತ್ತು ಬಿಜೆಪಿ ಮೈತ್ರಿಕೂಟದೊಂದಿಗೆ ಕೈಜೋಡಿಸಿ ಸರಕಾರಕ್ಕೆ ಸೇರ್ಪಡೆಗೊಳ್ಳುವುದರ ಮೂಲಕ ಹಿರಿಯ ನಾಯಕ ಶರದ್‌ ಪವಾರ್‌ ಅವರನ್ನು ದಿಗ್ಭ್ರಾಂತರನ್ನಾಗಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ವಿಪಕ್ಷ ಮೈತ್ರಿಕೂಟ ರಚನೆಗೆ ಮುಂದಡಿ ಇಟ್ಟಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಸರಕಾರವೂ ಅತಂತ್ರಗೊಳ್ಳುವ ಸಾಧ್ಯತೆಗಳು ದಟ್ಟವಾಗ­ತೊಡಗಿವೆ. ನಿತೀಶ್‌ ಸರಕಾರವನ್ನು ಕೆಡಹಲು ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ ಎಂಬ ವದಂತಿಯ ನಡುವೆಯೇ ನಿತೀಶ್‌ ಅವರು ಬೆಂಗಳೂರಿನಲ್ಲಿ ನಡೆಯಲಿರುವ ವಿಪಕ್ಷಗಳ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳುವ ಬಗೆಗೆ ಅನುಮಾನ ಮೂಡಿದೆ. ಅಷ್ಟು ಮಾತ್ರವಲ್ಲದೆ ನಿತೀಶ್‌ ಅವರ ಮುಂದಿನ ರಾಜಕೀಯ ನಡೆಯ ಕುರಿತಂತೆಯೂ ದೇಶದ ಜನತೆಯಲ್ಲಿ ಕುತೂಹಲ ಮೂಡಿದೆ.

ಒಟ್ಟಾರೆ ರಾಷ್ಟ್ರದ ಸದ್ಯದ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿ­ದಾಗ ವಿಪಕ್ಷಗಳ ಒಕ್ಕೂಟ ಬಾಲಗ್ರಹ ಪೀಡೆಗೆ ತುತ್ತಾಗಿರುವಂತೆ ಭಾಸ­ವಾಗುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಜಯಭೇರಿ ಬಾರಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಲು ಪಣತೊಟ್ಟಿರುವ ಬಿಜೆಪಿ ಕೂಡ ವಿಪಕ್ಷಗಳ ಈ ಕಾರ್ಯತಂತ್ರವನ್ನು ವಿಫ‌ಲಗೊಳಿಸಲು ತನ್ನ ಬತ್ತಳಿಕೆ­ಯಲ್ಲಿರುವ ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಈ ಮೂಲಕ ವಿವಿಧ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ತನ್ನದೇ ಆದ ರಣನೀತಿಯನ್ನು ರೂಪಿಸಿ, ಅದರಂತೆ ಮುನ್ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next