Advertisement

ದುರಸ್ತಿಯಾಗದ ಉದ್ಯಾವರ ಬೊಳ್ಜೆ-ಮಣಿಪುರ ಸೇತುವೆ

12:30 AM Feb 09, 2019 | Team Udayavani |

ಕಟಪಾಡಿ: ಉದ್ಯಾವರ – ಮಣಿಪುರ ಗ್ರಾಮಗಳನ್ನು  ಸಂಪರ್ಕಿಸುವ  ಕಾಲು ಸೇತುವೆಯು ಸಂಚಾರಿಗಳ ಸುರಕ್ಷತೆಗಾಗಿ ಹ್ಯಾಂಡಲ್ಸ್‌ ಅಳವಡಿಸುವ ಕಾರ್ಯ ಇನ್ನೂ ನಡೆದಿಲ್ಲ.  ಪ್ರಕೃತಿ ವಿಕೋಪದ ಅನುದಾನದಡಿ 4 ಲಕ್ಷ ರೂ.ಬಳಸಿಕೊಂಡು ಜನವರಿ ತಿಂಗಳೊಳಗೆ ಬೇಡಿಕೆ ಈಡೇರಿಸುವ ಭರವಸೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸಿಕ್ಕಿತ್ತು. ಆದರೆ ಈ ಕಾರ್ಯ ಇನ್ನೂ ನಡೆಯದಿರುವುದು ಅಸಮಾಧಾನ ಸೃಷ್ಟಿಸಿದೆ.
 
ಅಪಾಯಕಾರಿ 
ಪಾಪನಾಶಿನಿ ಹೊಳೆಗೆ ನಿರ್ಮಿಸಲಾದ ಈ ಸೇತುವೆ ಉದ್ಯಾವರ ಗ್ರಾಮ ಮತ್ತು ಮಣಿಪುರ ಗ್ರಾಮಕ್ಕೆ ಕೊಂಡಿ. ಇದನ್ನೇ ಬಳಸಿಕೊಂಡು  ಬೊಳ್ಜೆ ಅಂಗನವಾಡಿ ಶಾಲೆಗೆ ಮಕ್ಕಳು ಆಗಮಿಸುತ್ತಿದ್ದಾರೆ. ಸೇತುವೆ ದುರವಸ್ಥೆಯಿಂದ ಹೆತ್ತವರು ಮಕ್ಕಳನ್ನು ಅಂಗನವಾಡಿಗೆ ಕರೆ ತರಲು ಹಿಂದೇಟು ಹಾಕುತ್ತಿದ್ದಾರೆ. ಮಳೆಗಾಲ ಶುರುವಾದರಂತೂ ಸೇತುವೆ ಮೇಲೆ ನಡೆದಾಡುವುದೇ ಅಪಾಯಕಾರಿಯಾಗಿ ಪರಿಣಮಿಸಲಿದೆ. ಈ ಮೊದಲು ನೆರೆ ನೀರಿನ ರಭಸಕ್ಕೆ ಸೇತುವೆಯ ಇಕ್ಕೆಲಗಳಲ್ಲಿ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಹಿಡಿಕೆಗಳು ಕಿತ್ತು ಬಂದಿತ್ತು.ಸೇತುವೆ ಬಗ್ಗೆ ಈ ಮೊದಲೇ ಉದಯವಾಣಿ ವರದಿ ಪ್ರಕಟಿಸಿ ಎಚ್ಚರಿಸಿತ್ತು.
  
ವಿಸ್ತರೀಕರಣ ಆಗಬೇಕು
ಸೇತುವೆಯನ್ನು ದುರಸ್ತಿ ಪಡಿಸಿ, ವಿಸ್ತರೀಕರಣಗೊಳಿಸಿ, ಹೆಚ್ಚಿನ ಸುರಕ್ಷತೆ ಕಲ್ಪಿಸಬೇಕು.ಮುಂದಿನ ಚುನಾವಣೆ ಮೊದಲು ಇದರ ಕಾಮಗಾರಿ ಈಡೇರಿಸಬೇಕು. ಇದಕ್ಕೆ ಸ್ಪಂದಿಸದಿದ್ದರೆ, ಚುನಾವಣೆ ಬಹಿಷ್ಕರಿಸುವುದಾಗಿ ಸ್ಥಳೀಯರು ಹೇಳಿದ್ದಾರೆ.  

Advertisement

ಕಾಮಗಾರಿಗೆ ಮನವಿ
ಸೇತುವೆಯ ಸುರಕ್ಷಾ ಕಾಮಗಾರಿ ವಿಳಂಬಕ್ಕೆ ಸಮಸ್ಯೆ ಏನೆಂದು ಗಮನಕ್ಕೆ ಬಂದಿಲ್ಲ. ಚುನಾವಣೆ ಘೋಷಣೆ ಆದಲ್ಲಿ  ನೀತಿ ಸಂಹಿತೆ ಕಾಮಗಾರಿಗೆ ಅಡ್ಡಿಯಾಗುತ್ತದೆ. ಕೂಡಲೇ ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ವಿನಂತಿ ಮಾಡುತ್ತೇವೆ.
– ರಮಾನಂದ ಪುರಾಣಿಕ್‌, 
ಪಿಡಿಒ ಉದ್ಯಾವರ  

ಸೂಚನೆ ನೀಡಲಾಗಿದೆ
ತುರ್ತಾಗಿ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ನೀರಿನ ಮಟ್ಟ ಹೆಚ್ಚಿದ್ದು ಕಾಮಗಾರಿಯಲ್ಲಿ ವಿಳಂಬ ಆಗಿದೆ ಎಂದು ಗುತ್ತಿಗೆದಾರರು ಹೇಳಿದ್ದು  15 ದಿನಗಳೊಳಗಾಗಿ ಕಾಮಗಾರಿ ಕೈಗೊಳ್ಳಲಾಗುತ್ತದೆ.  
– ದೇವಾನಂದ್‌, ಸ.ಇಂಜಿನಿಯರ್‌,ಸಣ್ಣ ನೀರಾವರಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next