Advertisement

ಉ.ಕ ಬಂದ್‌ಗೆ ಹೈ.ಕ ಬೆಂಬಲವಿಲ್ಲ

10:12 AM Aug 02, 2018 | Team Udayavani |

ಕಲಬುರಗಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್‌ 2ರಂದು ಕರೆ ನೀಡಲಾಗಿರುವ ಬಂದ್‌ಗೆ ಹೈದ್ರಾಬಾದ ಕರ್ನಾಟಕದ ಕನ್ನಡಪರ ಸಂಘಟನೆಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಹೋರಾಟಗಾರರು ಬೆಂಬಲಿಸದಿರಲು ದೃಢ ನಿರ್ಧಾರ ಕೈಗೊಂಡಿ ದ್ದಲ್ಲದೇ ಬಂದ್‌ ಕರೆಗೆ ಪ್ರತಿಯಾಗಿ ಪ್ರತಿಭಟನೆ ನಡೆಸುವ ಮೂಲಕ ಖಂಡನೆ ವ್ಯಕ್ತವಾಗಿದೆ.

Advertisement

ಉತ್ತರ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲವೆಂದು ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಬಂದ್‌ಗೆ ಸಂಪೂರ್ಣ ವಿರೋಧವಿದೆ.
ಮುಂಬೈ ಕರ್ನಾಟಕದವರು ಬೇಕಿದ್ದರೆ ಪ್ರತ್ಯೇಕ ರಾಜ್ಯ ಕೇಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಹೈ.ಕ ಭಾಗದ ಆರೂ ಜಿಲ್ಲೆಗಳನ್ನು ಸೇರಿಸಿಕೊಂಡು ಕೇಳುತ್ತಿರುವುದಕ್ಕೆ ತಮ್ಮ ವಿರೋಧವಿದೆ ಎಂದು ಘೋಷಣೆ ಕೂಗಿದರು.

ಹಲವು ದಶಕಗಳ ಕಾಲ 371ನೇ (ಜೆ) ವಿಧಿ ತಿದ್ದುಪಡಿ ಸಲುವಾಗಿ ವಿವಿಧ ಹಂತದ ಹೋರಾಟಗಳನ್ನು ನಡೆಸುತ್ತ ಬಂದಿದ್ದರೂ ಒಮ್ಮೆಯೂ ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ ಭಾಗದವರು ಬೆಂಬಲಿಸಿಲ್ಲ. ಜತೆಗೆ ಭೀಮಾ, ಕೃಷ್ಣಾ ನದಿ ನೀರಿನ ಸಲುವಾಗಿ ನಡೆದ ಹೋರಾಟಕ್ಕೆ ಬೆಂಬಲಿಸದೇ ಇರುವಾಗ ಈಗ ನಾವೇಕೆ ಬೆಂಬಲಿಸಬೇಕೆಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

371ನೇ (ಜೆ) ವಿಧಿ ಜಾರಿಯಾಗಿ ಹೈದ್ರಾಬಾದ ಕರ್ನಾಟಕ ಭಾಗದವರಿಗೆ ಈಗ ಸೌಲಭ್ಯ ಸಿಗಲಾರಂಭಿಸಿವೆ. ಅಂತಹುದರಲ್ಲಿ ಈಗ ಭಾವನಾತ್ಮಕ ವಿಷ ಬೀಜ ಬಿತ್ತಿ ದೊರಕಿರುವ ವಿಶೇಷ ಸೌಲಭ್ಯವನ್ನು ಕಬಳಿಸುವ ಹುನ್ನಾರ ಇದರಲ್ಲಡಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಸಿಎಂ ಸಭೆ ಕರೆಯಲಿ: ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ ಕರ್ನಾಟಕ ಭಾಗದ ಹಿರಿಯ ರಾಜಕೀಯ ನಾಯಕರಿಗೆ ಹಾಗೂ ಹೋರಾಟ ಗಾರರೊಂದಿಗೆ ಮುಖ್ಯಮಂತ್ರಿಗಳು ವಿಶೇಷ ಸಭೆ ಕರೆದು ಕೂಲಂಕುಶವಾಗಿ
ಚರ್ಚಿಸಿ ಸೂಕ್ತ ನಿರ್ಧಾರ ತೆಗೆದು ಕೊಳ್ಳಬೇಕೆಂದು ಆಗ್ರಹಿಸಿದರು.

Advertisement

ಒಕ್ಕೂಟದ ಪದಾಧಿಕಾರಿಗಳಾದ ಎಂ.ಎಸ್‌. ಪಾಟೀಲ ನರಿಬೋಳ, ಜಗನ್ನಾಥ ಸೂರ್ಯವಂಶಿ, ಸಚೀನ ಫರತಾಬಾದ್‌, ಮಂಜುನಾಥ ನಾಲವಾರಕರ್‌, ನಂದಕುಮಾರ ನಾಗಭುಜಂಗೆ, ಅಮೃತ ಪಾಟೀಲ ಸಿರನೂರ, ಗೋಪಾಲ ನಾಟೀಕಾರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಕರುನಾಡ ಹೋರಾಟ ಸಮಿತಿ ಬೆಂಬಲ 
ಕಲಬುರಗಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಕರುನಾಡ ಹೋರಾಟ ಸಮಿತಿ ತಿಳಿಸಿದೆ. ಆ.2 ರಂದು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಪಾಶಾಮಿಯಾ ಹೀರಾಪುರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೆಲವೊಂದು ಸಂಘಟನೆಗಳು ಸಣ್ಣಪುಟ್ಟ ನೆಪಗಳನ್ನು ಒಡ್ಡಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ತಮ್ಮ ಬೆಂಬಲವಿಲ್ಲ ಎನ್ನುತ್ತಿದ್ದಾರೆ. ಆದರೆ ಉತ್ತರ ಕರ್ನಾಟಕ ರಾಜ್ಯವಾದರೆ ತಮ್ಮ ಭಾಗದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next