ಅದೊಂದು ದಿನ ಚೆನ್ನಾಗಿ ನೆನಪಿದೆ. ನನ್ನ ಜೀವನದಲ್ಲೇ ಮರೆಯಲಾರದ ದಿನವದು. ಅವು ನನ್ನ ಬಾಲ್ಯದ ದಿನಗಳು. ದಸರೆಗೆಂದು ಶಾಲೆಗೆ ರಜೆ ಘೋಷಿಸಲಾಗಿತ್ತು. ರಜೆ ಆರಂಭವಾದ ನಾಲ್ಕನೇ ದಿನವೇ ಊರಿನ ಹಳ್ಳ ಕೋಡಿ ಬೀಳುವಂಥ ಮಳೆ ಬಂದಿತ್ತು. ಬೆಳ್ಳಗೆ ನಾಷ್ಟ ಮಾಡಿಕೊಂಡು ನಾನು ಹಾಗು ಗೆಳೆಯರೆಲ್ಲಾ ತೋಟಗಳಲ್ಲಿ ಅಲೆಯಲು ಹೊರಟೆವು.
ಒಂದೆರಡು ತೋಟ ಅಲೆದವು. ಅಲ್ಲಿ ತಿನ್ನಲು ಏನೂ ಸಿಗಲಿಲ್ಲ. ಎಲ್ಲರಿಗೂ ಬೇಸರವಾಯಿತು. ನಂತರ ಮಾವಿನ ತೋಟಕ್ಕೆ ಹಿಂಭಾಗದಿಂದ ನುಗ್ಗಿದೆವು. ಮರದಲ್ಲೇ ಕುಳಿತುಕೊಂಡಿದ್ದ ಯಜಮಾನ ನಮ್ಮನ್ನು ನೋಡಿ ಒಮ್ಮೆಲೇ ಕೆಳಗೆ ಇಳಿದು ನಮ್ಮನ್ನು ಹಿಡಿಯಲು ಮುಂದಾದ. ನಾವೋ, ಪ್ರಚಂಡ ಓಟಗಾರರು. ಅವನಿಗೆ ಯಾರೂ ಸಿಗದ ಹಾಗೆ ಸುಮಾರು ಅರ್ಧ ಕಿ.ಮೀ. ಓಡಿದೆವು. ಓಡಿ ಓಡಿ ಸುಸ್ತಾದ ಮಾವಿನ ತೋಟದ ಯಜಮಾನ, ಸುಮ್ಮನಾಗಿ ಬಿಟ್ಟ. ನಮಗೂ ಸುಸ್ತಾಗಿತ್ತು. ಬಾಯಾರಿತ್ತು. ಏದುಸಿರು ಬಿಡುತ್ತಲೇ ಆ ಮನುಷ್ಯ ಹಿಂಬಾಲಿಸಿಕೊಂಡು ಬರಲ್ಲ. ನಿಧಾನಕ್ಕೆ ಹೋಗೋಣ ಅನ್ನುತ್ತಲೇ ಸುಮ್ಮನೆ ತಲೆ ಎತ್ತಿ ನೋಡಿದೆವು. ನಮ್ಮ ಊರಿನ ಗೌಡ್ರ ತೋಟ ಕಾಣಿಸಿತು. ಅಲ್ಲಿ ಎಳನೀರು ಕುಡಿದು, ಕೊಬ್ಬರಿ ತಿಂದು ಮನೆಗೆ ಹೋದರಾಯಿತು ಎಂದು ಯೋಚಿಸಿದೆವು. ಅಕಸ್ಮಾತ್ ಈಗಲೂ ತೊಂದರೆ ಎದುರಾದರೆ ಏನು ಮಾಡುವುದು ಎಂದು ಮಾತಾಡಿಕೊಂಡು, ನಮ್ಮಲ್ಲಿದ್ದ ಐವರು ಮರ ಏರಿದೆವು. ಉಳಿದ ಮೂವರು ಕೆಳಗಿದ್ದರು.
ಕೆಳಗೆ ನಿಂತಿದ್ದವರಲ್ಲಿ ಗೆಳೆಯ ರಾಮನೂ ಇದ್ದ. ಅವನು ತಲೆಯನ್ನು ಕೊಡವಿಕೊಳ್ಳುತ್ತಿದ್ದ. ಒಂದು ಹುಳ ಅವನ ಕಿವಿಯ ಬಳಿ ಬಂದು ಗುಂಯ್‌ಗಾಟ್ಟುಟ್ಟಾ ತೊಂದರೆ ಕೊಡುತ್ತಿತ್ತು. ಕೊನೆಗೊಮ್ಮೆ ಸಿಟ್ಟು ಹತ್ತಿ ನೆಲದ ಮೇಲಿದ್ದ ಕಲ್ಲೊಂದನ್ನು ಎತ್ತಿ ಮೇಲಕ್ಕೆಸೆದೇಬಿಟ್ಟ. ಆ ಕಲ್ಲು ಪಕ್ಕದ ಮರಕ್ಕೆ ಬಡಿಯಿತು. ನಮ್ಮ ದುರಾದೃಷ್ಟಕ್ಕೆ, ಅದೇ ಜಾಗದಲ್ಲಿ ಜೇನುಗೂಡಿರಬೇಕೆ?! ಅದನ್ನು ಕಂಡ ತಕ್ಷಣ ನಾವೆಲ್ಲರೂ ಮರಗಳಿಂದ ಕೆಳಗೆ ಒಮ್ಮೆಲೆ ದೊಪ್ಪನೆ ನೆಲಕ್ಕೆ ಹಾರಿದೆವು. ಹಿಂದಿನ ರಾತ್ರಿ ಮಳೆ ಬಂದಿದ್ದರಿಂದ ಯಾರಿಗೂ ಅಂತ ಪೆಟ್ಟಾಗಲಿಲ್ಲ. ಆ ಹೆಜ್ಜೆàನು ಹುಳುಗಳಿಗೆ ಕೋಪ ಬಂದು ನಮ್ಮನ್ನು ಕಚ್ಚಲು ಬಂದವು. ಆಗ ಶುರುವಾಯಿತು ನೋಡಿ ನಮ್ಮ ಒಲಿಂಪಿಕ್ ರನ್ನಿಂಗ್ ರೇಸ್… ಆದರೆ, ಮಾವಿನ ತೋಟದ ಯಜಮಾನನಿಂದ ತಪ್ಪಿಸಿಕೊಂಡಷ್ಟು ಸುಲಭವಾಗಿರಲಿಲ್ಲ ಜೇನು ಹುಳುಗಳಿಂದ ತಪ್ಪಿಸಿಕೊಳ್ಳೋದು.
ಯಾರು, ಯಾವ ಕಡೆ ಓಡುತ್ತಿದ್ದೇವೆ ಎಂಬುದೇ ತಿಳಿಯಲಿಲ್ಲ. ದಿಕ್ಕಾಪಾಲಾಗಿ ಎಲ್ಲರೂ ಮನಸ್ಸಿಗೆ ತೋಚಿದ ಕಡೆಗೆ ಓಡಿದೆವು. ಪಕ್ಕದಲ್ಲಿ ಸಜ್ಜೆ ತೋಟ. ಮಳೆ ಬಂದು ಎಲ್ಲಾ ಕಡೆ ಕೆಸರು ಕೆಸರಾಗಿದೆ. ಅಲ್ಲಿ ನಮ್ಮ ಶರವೇಗಕ್ಕೆ ಕಡಿವಾಣ ಬಿತ್ತು. ಎಷ್ಟೇ ಓಡಿದರೂ ಕಾಲು ಹೂತು ಹೋಗುತ್ತಿದ್ದುದರಿಂದ ಜೇನ್ನೊಣಗಳಿಗೆ ನಾವು ಸಿಕ್ಕಿಹಾಕಿಕೊಂಡೆವು. ಕೈ ಕಾಲುಗಳಿಗೆಲ್ಲ ಕಚ್ಚಿಸಿಕೊಂಡೆವು. ಆದರೂ ಅಲ್ಲಿಯೇ ನಿಲ್ಲುವಂತಿರಲಿಲ್ಲ. ಎದ್ದೂ ಬಿದ್ದೂ ಓಡಿದೆವು. ಇದೇ ರೀತಿ ನಾವು ಸುಮಾರು 3 ಕಿ.ಮೀ. ಓಡಿರಬಹುದು. ಅಷ್ಟರಲ್ಲಿ ಹುಳುಗಳು ನಮ್ಮನ್ನು ಬೆನ್ನಟ್ಟುವುದನ್ನು ನಿಲ್ಲಿಸಿದ್ದವು. ನಾವು ನಿಂತೆವು. ಜೇನ್ನೊಣ ಕಚ್ಚಿದ್ದರಿಂದ ನಮ್ಮ ಕೆನ್ನೆ ತುಟಿಗಳೆಲ್ಲಾ ಊದಿಕೊಂಡಿದ್ದವು. ನಾವು ಊರ ಹಾದಿ ಹಿಡಿದೆವು. ಆಗ, ಮತ್ತೆ ಏದುಸಿರು ಬಿಡುತ್ತಾ ದಾರಿಯಲ್ಲಿ, ರಾಮೇಗೌಡರು ತಮ್ಮ ಬಾಳೆಹಣ್ಣಿನ ತೋಟದಿಂದ ಮನೆಗೆ ಹೋಗುತ್ತಿರುವುದು ಕಂಡಿತು. ನಾವು ಮೆಲ್ಲನೆ ಯಾರಿಗೂ ಕಾಣದ ಹಾಗೆ ಅವರ ತೋಟಕ್ಕೆ ನುಗ್ಗಿಬಿಟ್ಟೆವು. ನಮ್ಮ ಅದೃಷ್ಟಕ್ಕೆ ಒಂದು ಬಾಳೆಗೊನೆ ಹಣ್ಣಾಗಿರುವುದು ಸಿಕ್ಕಿತು. ಹೊಟ್ಟೆ ತುಂಬುವವರೆಗೂ ತಿಂದೆವು. ಆಗಷ್ಟೇ ಸಮಾಧಾನವಾಯಿತು. ನಂತರ ಮನೆ ಕಡೆ ಸಾಗಿದೆವು. ಈಗಲೂ ನಾವು ಗೆಳೆಯರೆಲ್ಲಾ ಭೇಟಿಯಾದಾಗ ಆ ದಿನಗಳನ್ನು ನೆನೆದು ಬಿದ್ದೂ ಬಿದ್ದು ನಗುತ್ತೇವೆ.
ಪ್ರಭಾಕರ ಪಿ.