Advertisement
ಹೀಗಿರುವಾಗಲೇ ಕಾಂಗ್ರೆಸ್ ನೇತೃತ್ವದ ಬಿಬಿಎಂಪಿಯಲ್ಲಿ ವಿಚಿತ್ರ ಸನ್ನಿವೇಶವೊಂದು ಸೃಷ್ಟಿಯಾಗಿದೆ. ಅದೇನೆಂದರೆ ರಾಜಧಾನಿಯ ಪ್ರಥಮ ಪ್ರಜೆ ಅಂದರೆ ಮೇಯರ್ ಕನ್ನಡಿಗರಲ್ಲದೇ ಬೇರೆ ಭಾಷಿಕರಾಗಿರುವುದು. ಈ ಎರಡು ಅವಧಿಯಲ್ಲಿ ತೆಲುಗರ ಕೈಲಿದ್ದ ಪಾಲಿಕೆ ಚುಕ್ಕಾಣಿ ಈ ಬಾರಿ ತಮಿಳು ಅಭ್ಯರ್ಥಿಯ ಕೈಗೆ ಹೋಗುತ್ತಿರುವುದು ಸದ್ಯ ಚರ್ಚಿತ ಸಂಗತಿಯಾಗಿದೆ.
Related Articles
Advertisement
ಈಗ ಪೈಪೋಟಿಯಲ್ಲಿರುವ ದೇವರ ಜೀವನ್ ಹಳ್ಳಿ ವಾರ್ಡ್ ಕಾರ್ಪೊರೇಟರ್ ಸಂಪತ್ ರಾಜ್ ತಮಿಳು ಭಾಷಿಕರಾಗಿದ್ದು, ಮೂಲ ತಮಿಳುನಾಡಿನ ತಿರುನಾಲ್ವೆಲಿಯಿಂದ ಬೆಂಗಳೂರಿಗೆ ವಲಸೆ ಬಂದವರಾಗಿದ್ದಾರೆ. ಮೇಯರ್ ಗಾದಿಗಾಗಿ ಅವರೂ ಸಾಕಷ್ಟು ಪೈಪೋಟಿ ನಡೆಸುತ್ತಿದ್ದು, ವಿಶೇಷವಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಸಂಪತ್ ರಾಜ್ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಪತ್ ರಾಜ್ ಎಂಜನೀಯರ ಪದವೀಧರರಾಗಿದ್ದು ಗೋವಿಂದ್ ರಾಜ್ ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ಈಗಾಗಲೇ ಇಬ್ಬರೂ ತೆಲಗು ಭಾಷಿಕರು ಮಂಜುನಾಥ ರೆಡ್ಡಿ ಹಾಗೂ ಬಲಿಜ ಸಮಾಜದ ಪದ್ಮಾವತಿ ಅಧಿಕಾರ ನಡೆಸಿದ್ದಾರೆ. ಸಂಪತ್ ರಾಜ್ ಮೇಯರ್ ಆಗಿ ಆಯ್ಕೆಯಾದರೆ ತೆಲುಗರಿಂದ ತಮಿಳರ ಕೈಗೆ ಅಧಿಕಾರ ಕೊಟ್ಟಂತಾಗುತ್ತದೆ ಎಂಬ ಮಾತುಗಳು ಕೆಪಿಸಿಸಿ ಪಡಸಾಲೆಯಲ್ಲಿ ಚರ್ಚಿತವಾಗುತ್ತಿವೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಕಳೆದ ಹತ್ತು ಹದಿನೈದು ವರ್ಷಗಳ ಬಿಬಿಎಂಪಿ ಇತಿಹಾಸವನ್ನು ಗಮನಿಸಿದರೆ, ತೆಲಗು, ತಮಿಳು ಭಾಷಿಕರೇ ಹೆಚ್ಚಿನ ಅವಧಿಗೆ ಬಿಬಿಎಂಪಿಯಲ್ಲಿ ಮೇಯರ್ ಹುದ್ದೆ ಅಲಂಕರಿಸಿದ್ದು, ಕನ್ನಡ ಮಾತೃಭಾಷೆಯವರು ಮೇಯರ್‌ಗಳಾಗಿದ್ದು ತೀರಾ ಕಡಿಮೆ. ಈಗಾಗಲೇ ರಾಜಧಾನಿಯಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂಬ ಕೂಗು ಜೋರಾಗಿದ್ದು, ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಸ್ವತ ರಾಜ್ಯ ಸರ್ಕಾರವೇ ಪ್ರತಿರೋಧ ಒಡ್ಡಿತ್ತು.
ಅಲ್ಲದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎನ್ನುವ ಕುರಿತಂತೆಯೂ ರಾಜ್ಯ ಸರ್ಕಾರ ಪ್ರಯತ್ನ ನಡೆಸಿತ್ತು. ಆದರೆ, ರಾಜಧಾನಿ ಪ್ರಥಮ ಪ್ರಜೆಯ ಸ್ಥಾನವನ್ನು ಮಾತ್ರ ಅನ್ಯಭಾಷಿಕರ ಕೈಗೆ ಕೊಟ್ಟು ಕೈ ಕಟ್ಟಿ ಕುಳಿತುಕೊಳ್ಳುತ್ತಿದೆ ಎಂಬ ಆರೋಪದ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ರಾಜಧಾನಿಯಲ್ಲಿ ಕನ್ನಡ ಭಾಷಿಕರ ಸಂಖ್ಯೆ ಕುಸಿಯುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ.
ಆದರೆ, ರಾಜಧಾನಿ ಪ್ರಥಮ ಪ್ರಜೆಗಳು ಮಾತ್ರ ಅನ್ಯ ಭಾಷಿಕರೇ ಆಗುತ್ತಿರುವುದು ಮುಂದುವರೆದಿದೆ. ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅನ್ಯ ಭಾಷಿಕರನ್ನು ಸೆಳೆಯಲು ತಮಿಳು ಮತ್ತು ಹಿಂದಿ ಭಾಷಿಕರಿಗಾಗಿ ಅವರ ಭಾಷೆಯಲ್ಲಿಯೇ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿತ್ತು. ಅನ್ಯ ಭಾಷಿಕರನ್ನು ಸೆಳೆಯಲು ತಮ್ಮ ಪಕ್ಷಗಳಲ್ಲಿ ಪ್ರತ್ಯೇಕ ಭಾಷಾವಾರು ಘಟಕಗಳನ್ನು ಮಾಡಿಕೊಳ್ಳುತ್ತಿರುವುದು ಮತ ರಾಜಕಾರಣದ ಒಂದು ಭಾಗವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.