ಕನ್ನಡದಲ್ಲೀಗ ಚಾಪ್ಟರ್ 1, ಚಾಪ್ಟರ್ 2 ಸಿನಿಮಾಗಳ ಪರ್ವ! ಹೌದು, “ಕೆಜಿಎಫ್’ ಚಾಪ್ಟರ್ 1 ಮುಗಿಸಿ, ಯಶಸ್ಸು ಕಂಡಿದ್ದು ಗೊತ್ತೇ ಇದೆ. ಈಗ “ಕೆಜಿಎಫ್’ ಚಾಪ್ಟರ್ 2 ಚಿತ್ರೀಕರಣ ನಡೆಯುತ್ತಿರುವುದು ಎಲ್ಲರಿಗೂ ಗೊತ್ತು. ಅದರಂತೆ ಕನ್ನಡದ ಒಂದಷ್ಟು ಚಿತ್ರಗಳು ಕೂಡ ಚಾಪ್ಟರ್ 1 ಮುಗಿಸಿ ಚಾಪ್ಟರ್ 2ಗೆ ಕೈ ಹಾಕುವ ಮಾತುಗಳನ್ನಾಡುತ್ತಿವೆ. ಅವುಗಳ ಸಾಲಿಗೆ ಜಗ್ಗೇಶ್ ಅಭಿನಯದ “ತೋತಾಪುರಿ’ ಕೂಡ ಸೇರಿದೆ.
ಈಗಾಗಲೇ ಶೀರ್ಷಿಕೆ ಮೂಲಕವೇ ಗಮನಸೆಳೆದಿರುವ “ತೋತಾಪುರಿ’ ಚಿತ್ರ ಕೂಡ ಎರಡು ಭಾಗದಲ್ಲಿ ಕಾಣಿಸಿಕೊಳ್ಳಲಿದೆ. “ನೀರ್‌ದೋಸೆ’ ಚಿತ್ರದ ನಂತರ ಜಗ್ಗೇಶ್ ಜೊತೆ ಈ ಚಿತ್ರ ಕೈಗೆತ್ತಿಕೊಂಡಿರುವ ನಿರ್ದೇಶಕ ವಿಜಯಪ್ರಸಾದ್, ಈಗ “ತೋತಾಪುರಿ’ ಚಿತ್ರವನ್ನು ಎರಡು ಭಾಗದಲ್ಲಿ ತೋರಿಸುವ ನಿರ್ಧಾರ ಮಾಡಿದ್ದಾರೆ. “ತೋತಾಪುರಿ’ ಚಿತ್ರದ ಮೊದಲ ಭಾಗದ ಅಂತ್ಯದಲ್ಲೊಂದು ಘಟನೆ ನಡೆಯುತ್ತೆ.
ಅಲ್ಲಿಗೆ ಚಾಪ್ಟರ್ 1 ಮುಗಿಯುತ್ತದೆ. ಮುಂದೇನಾಗುತ್ತೆ ಎಂಬ ಪ್ರಶ್ನೆಗೆ ಚಾಪ್ಟರ್ 2ನಲ್ಲಿ ಉತ್ತರ ಸಿಗಲಿದೆ ಎಂಬುದು ನಿರ್ದೇಶಕರ ಮಾತು. “ತೋತಾಪುರಿ’ ಚಾಪ್ಟರ್ 1, ಚಾಪ್ಟರ್ 2 ಆಗಿ ಕಾಣಿಸಿಕೊಳ್ಳುವುದು ವಿಶೇಷವಲ್ಲದಿದ್ದರೂ, ಈ ಎರಡು ಭಾಗದ ಅವಧಿ ಮಾತ್ರ ವಿಶೇಷ ಎನ್ನಬಹುದು. ಯಾಕೆಂದರೆ, ಒಂದೊಂದು ಚಾಪ್ಟರ್‌ನಲ್ಲೂ ಒಂದುವರೆ ತಾಸು ಅವಧಿ ಮಾತ್ರ ಇದೆ. ಒಂದೇ ಭಾಗದಲ್ಲಿ ಮೂರು ಗಂಟೆ ಅವಧಿಯ ಸಿನಿಮಾ ತೋರಿಸಿದರೆ, ನೋಡುಗರಿಗೆ ಅದು ಅವಧಿ ಹೆಚ್ಚು ಎಂಬ ಅಸಮಾಧಾನ ಆಗಬಹುದು.
ಅಥವಾ ರುಚಿಸದೆಯೂ ಇರಬಹುದು ಎಂಬುದನ್ನ ಅರ್ಥ ಮಾಡಿಕೊಂಡಿರುವ ಚಿತ್ರತಂಡ, ಎರಡು ಭಾಗದಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಎರಡು ಭಾಗಕ್ಕೂ “ತೋತಾಪುರಿ’ ಶೀರ್ಷಿಕೆ ಇದ್ದರೂ, ಅಡಿಬರಹ ಮಾತ್ರ ಬೇರೆ ಇರಲಿದೆ. ಮೊದಲ ಭಾಗದ “ತೋತಾಪುರಿ’ಗೆ “ತೊಟ್ಟು ಕೀಳ್ಬೇಕು’ ಎಂಬ ಅಡಿಬರಹವಿದ್ದರೆ, ಎರಡನೇ ಭಾಗದ “ತೋತಾಪುರಿ’ಗೆ “ತೊಟ್ಟು ಕಿತ್ತಾಯ್ತು’ ಎಂಬ ಅಡಿಬರಹವಿರಲಿದೆ.
ಸದ್ಯದ ಮಟ್ಟಿಗೆ ಈ ಅಡಿಬರಹದಲ್ಲಿ ಒಂದು ಕುತೂಹಲ ಹುಟ್ಟುಹಾಕಿರುವ ನಿರ್ದೇಶಕರು, ಸಿನಿಮಾ ಬಿಡುಗಡೆ ಸಮಯದಲ್ಲಿ ಇನ್ನಷ್ಟು ವಿಷಯ ಹೊರ ಹಾಕಲಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ದಸರಾ ಅಥವಾ ಕ್ರಿಸ್‌ಮಸ್‌ಗೆ ಮೊದಲ ಭಾಗದ “ತೋತಾಪುರಿ’ ಚಿತ್ರ ಪ್ರೇಕ್ಷಕರ ಮುಂದೆ ತರುವ ಯೋಚನೆ ತಂಡಕ್ಕಿದೆ. ಈಗಾಗಲೇ ಸುಮಾರು 90ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಇನ್ನಷ್ಟು ದಿನಗಳ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡಿರುವ ಚಿತ್ರತಂಡ, ಜುಲೈನಿಂದ ಎರಡನೇ ಭಾಗದ ಚಿತ್ರೀಕರಣಕ್ಕೆ ಹೊರಡಲಿದೆ. ಇನ್ನು, ಚಾಪ್ಟರ್ 1, ಚಾಪ್ಟರ್ 2 ಚಿತ್ರದಲ್ಲಿ ಎರಡು ಹಾಡುಗಳು ಇರಲಿವೆ. ಅನೂಪ್ ಸೀಳಿನ್ ಅವರು ಸಂಗೀತ ನೀಡಿದ್ದಾರೆ. ಜಗ್ಗೇಶ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಇದ್ದಾರೆ. ಉಳಿದಂತೆ ಸುಮನ್ ರಂಗನಾಥ್, “ಡಾಲಿ’ ಧನಂಜಯ್ ಇತರರು ನಟಿಸುತ್ತಿದ್ದಾರೆ. ಕೆ.ಎ.ಸುರೇಶ್ ಚಿತ್ರದ ನಿರ್ಮಾಪಕರು.