Advertisement

ಪಿಂಕ್‌ ಆಸನಗಳ ನಂತರ ಪಿಂಕ್‌ ಸಾರಥಿಯ ಸರದಿ

12:37 PM Dec 04, 2017 | |

ಬೆಂಗಳೂರು: “ಪಿಂಕ್‌ ಹೊಯ್ಸಳ’ ಮಾದರಿಯಲ್ಲೇ ನಗರದಲ್ಲಿ ಈಗ “ಪಿಂಕ್‌ ಸಾರಥಿ’ ಕೂಡ ಬರಲಿದೆ! ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ರಕ್ಷಣೆಗಾಗಿ ಈ ಪಿಂಕ್‌ ಸಾರಥಿಗಳನ್ನು ಪರಿಚಯಿಸಲು ಚಿಂತನೆ ನಡೆದಿದೆ.

Advertisement

ಕೇಂದ್ರದ “ನಿರ್ಭಯಾ ಯೋಜನೆ’ ಅಡಿ ಬಿಎಂಟಿಸಿಗೆ ಈಚೆಗೆ 56 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ ಮಹಿಳೆಯರ ರಕ್ಷಣೆಗಾಗಿ ಬಸ್‌ಗಳಲ್ಲಿ ಸಿಸಿಟಿವಿ, ಅಲಾರಂ, ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಅದರಲ್ಲಿ ಪಿಂಕ್‌ ಸಾರಥಿ ಕೂಡ ಒಂದಾಗಿದೆ. ಇದಕ್ಕೆ ಮಹಿಳಾ ಚಾಲಕರನ್ನೇ ನಿಯೋಜಿಸುವ ಚಿಂತನೆಯೂ ಇದೆ. ಒಬ್ಬ ಮಹಿಳಾ ಇನ್‌ಸ್ಪೆಕ್ಟರ್‌ ಮತ್ತೂಬ್ಬ ಪುರುಷ ಇನ್‌ಸ್ಪೆಕ್ಟರ್‌ ಇರಲಿದ್ದಾರೆ. ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣಿಸುವಾಗ ಯಾವುದೇ ರೀತಿಯ ಸಮಸ್ಯೆಗೆ ಸಿಲುಕಿದರೆ, ಈ ಸಾರಥಿಗಳು ನೆರವಿಗೆ ಧಾವಿಸಲಿದ್ದಾರೆ.

ಕೇಂದ್ರದ ಸೂಚನೆ; ಎಂಡಿ: ನಿರ್ಭಯಾ ಅಡಿ ಅನುದಾನ ನೀಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸಾರಥಿಯಲ್ಲಿ ಮಹಿಳಾ ಸಿಬ್ಬಂದಿ ಕೂಡ ಇರಬೇಕು ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯರು ಇರುವ ಸಾರಥಿಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಅಲಾರಂ, ಮಹಿಳೆಯರಿಗಾಗಿ ಆ್ಯಪ್‌, ಸಹಾಯವಾಣಿಯೊಂದಿಗೆ ಈ ಸಾರಥಿಯನ್ನು ಜೋಡಿಸಲಾಗುವುದು.

ಇದರಿಂದ ಮಹಿಳೆಯರಿಗೆ ಸಂಬಂಧಿಸಿದ ದೂರುಗಳಿಗೆ ಈ ಸಾರಥಿಗಳಿಂದ ತಕ್ಷಣ ಸ್ಪಂದನೆ ದೊರೆಯಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಸ್ಪಷ್ಟಪಡಿಸಿದರು. ಮಹಿಳೆಯರಿಗಾಗಿಯೇ “ಇಂದಿರಾ ಸಾರಿಗೆ’ ಅಡಿ ಪ್ರತ್ಯೇಕ ಬಸ್‌ ಬರುತ್ತಿದೆ. ಮಹಿಳಾ ಕಟ್ಟಡ ಕಾರ್ಮಿಕರಿಗೆ “ಇಂದಿರಾ ಪಾಸು’, ಗುಲಾಬಿ ಆಸನಗಳನ್ನೂ ಪರಿಚಯಿಸಲಾಗುತ್ತಿದೆ. ಈಗ ಅವರ ರಕ್ಷಣೆಗಾಗಿ ಪಿಂಕ್‌ ಸಾರಥಿ ಅವಶ್ಯಕತೆ ಇದೆ.

Advertisement

ಅಲ್ಲದೆ, ಈ ಸಂಬಂಧ ನಿರ್ಭಯಾ ಅಡಿ ಅನುದಾನ ಕೂಡ ಲಭ್ಯ ಇರುವುದರಿಂದ ಈ ನಿಟ್ಟಿನಲ್ಲಿ ಬಿಎಂಟಿಸಿ ಚಿಂತನೆ ನಡೆಸಿದೆ. ಇದು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಯೋಜನೆಯ ರೂಪುರೇಷೆ ಸಿದ್ಧಪಡಿಸಿ, ನಂತರ ಮಂಡಳಿಯ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು ಎಂದು ಅವರು ತಿಳಿಸಿದರು. ಈಗಾಗಲೇ ಸುವ್ಯವಸ್ಥಿತ ಸೇವೆಗಾಗಿ ಬಿಎಂಟಿಸಿಯ ಆರು ವಲಯಗಳಿಗೆ ತಲಾ ಎರಡರಂತೆ 12 ಸಾರಥಿಗಳು ಇದ್ದು, ನಗರದಾದ್ಯಂತ ನಿರಂತರ ಗಸ್ತು ತಿರುಗುತ್ತವೆ.

ನಿಲ್ದಾಣಗಳಲ್ಲಿ ನಿಲುಗಡೆ, ಬಸ್‌ಗಳ ಬಾಗಿಲು ಹಾಕಲಾಗಿದೆಯೇ, ವೇಗ ಮಿತಿ, ಬಸ್‌ ಕೆಟ್ಟುನಿಂತಿರುವುದು ಸೇರಿದಂತೆ ಮತ್ತಿತರ ಅಂಶಗಳ ಮೇಲೆ ಇದು ನಿಗಾ ಇಡುತ್ತದೆ. ಇದರ ಮುಂದುವರಿದ ಭಾಗವಾಗಿ ಮಹಿಳೆಯರಿಗೆ ಸಂಬಂಧಿಸಿದ ದೂರುಗಳನ್ನು ಆಲಿಸಲು ಪಿಂಕ್‌ ಸಾರಥಿ ಬರಲಿದೆ ಎಂದು ಬಿಎಂಟಿಸಿಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಮಹಿಳಾ ಸಂರಕ್ಷತೆಗೆ ವಿಶೇಷ ಆ್ಯಪ್‌
ಮಹಿಳೆಯರಿಗಾಗಿ ವಿಶೇಷ ಆ್ಯಪ್‌ ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ಆ್ಯಪ್‌ ಅನ್ನು ಬಿಎಂಟಿಸಿ ಅಭಿವೃದ್ಧಿಪಡಿಸುತ್ತಿದ್ದು, ಇದರಿಂದ ಮಹಿಳೆಯರು ಬಸ್‌ ಏರುತ್ತಿದ್ದಂತೆ ಅವರ ಸಂಬಂಧಿಕರ ಮೊಬೈಲ್‌ಗೆ ಅಲರ್ಟ್‌ ಹೋಗುತ್ತದೆ! ನಗರದಲ್ಲಿರುವ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಮಾದರಿಯಲ್ಲೇ ಬಿಎಂಟಿಸಿ ಕೂಡ ಮಹಿಳೆಯರಿಗೆ ಪ್ರತ್ಯೇಕ ಆ್ಯಪ್‌ ಪರಿಚಯಿಸುತ್ತಿದೆ.

ಇದರಲ್ಲಿ ಕೂಡ ತುರ್ತು ಎಸ್‌ಒಎಸ್‌ ಗುಂಡಿ ಇರುತ್ತದೆ. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರು ತಮ್ಮ ಆಪ್ತರೊಬ್ಬರ ಮೊಬೈಲ್‌ ಸಂಖ್ಯೆ ಹಾಗೂ ಇ-ಮೇಲ್‌ ವಿಳಾಸ ನೀಡಬೇಕಾಗುತ್ತದೆ. ಬಸ್‌ ಏರುತ್ತಿದ್ದಂತೆ ಪ್ರಯಾಣಿಕರು ಆನ್‌ ಮಾಡಿದರೆ ಸಾಕು, ಆಪ್ತರಿಗೆ ಅಲರ್ಟ್‌ ಸಂದೇಶ ರವಾನೆಯಾಗುತ್ತದೆ.

ನಂತರ ಆ ವ್ಯಕ್ತಿಗೆ ಜಿಪಿಎಸ್‌ ತಂತ್ರಜ್ಞಾನದಿಂದ ಬಸ್‌ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಮೊಬೈಲ್‌ನಲ್ಲಿ ಸಿಗುತ್ತದೆ ಎಂದು ವಿ. ಪೊನ್ನುರಾಜ್‌ ವಿವರಿಸಿದರು. ಈಗಾಗಲೇ ಚತುರ ಸಾರಿಗೆ ವ್ಯವಸ್ಥೆ ಅಡಿ ಸಕಾಲದಲ್ಲಿ ಮಾಹಿತಿ ಬಸ್‌ ಆಗಮನ, ನಿರ್ಗಮನ, ಟ್ರ್ಯಾಕಿಂಗ್‌ ಮತ್ತಿತರ ಮಾಹಿತಿ ನೀಡುವ ಆ್ಯಪ್‌ ಚಾಲ್ತಿಯಲ್ಲಿದೆ. ಈಗ ಮುಂದುವರಿದ ಭಾಗವಾಗಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಆ್ಯಪ್‌ ಮಾಡಲಾಗುತ್ತಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next