Advertisement

ಸ್ಟೀಲ್‌ ಬ್ರಿಡ್ಜ್ ಕೈಬಿಟ್ಟ ಬೆನ್ನೆಲ್ಲೇ ಸುರಂಗ ಮಾರ್ಗದ ಪ್ರಸ್ತಾಪ

12:37 PM Jun 09, 2017 | Team Udayavani |

ವಿಧಾನ ಪರಿಷತ್ತು: ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾಣ ಮಾಡುವ ಯೋಜನೆಯನ್ನು  ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಬಲ್ಗೇರಿಯಾದ ಕಂಪನಿಯೊಂದು ಸುರಂಗ ಮಾರ್ಗ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, “ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ಸುಗಮ ಸಂಚಾರಕ್ಕಾಗಿ ಉಕ್ಕಿನ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಕೆಲ ಜನರ ವಿರೋಧ, ಎನ್‌ಜಿಟಿ ವಿಚಾರಣೆ ಇತರೆ ಕಾರಣಕ್ಕೆ ಯೋಜನೆ ಕೈಬಿಡಲಾಯಿತು. ನಗರದಲ್ಲಿ 1.20 ಕೋಟಿ ಜನರಿದ್ದು, 65 ಲಕ್ಷ ವಾಹನಗಳಿವೆ. ಹೀಗಾಗಿ ದಟ್ಟಣೆ ನಿವಾರಣೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕಿದೆ,’ ಎಂದು ಹೇಳಿದರು.

ಮರ ಕಡಿಯಲು ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಚರ್ಚೆ ನಡೆದಿದೆ. ಬಲ್ಗೇರಿಯಾದ ಸಂಸ್ಥೆಯೊಂದು ಪ್ರಸ್ತಾವ ಸಲ್ಲಿಸಿದ್ದು, ನಾಲ್ಕು ಪಥದ ಹೆದ್ದಾರಿ ಜತೆಗೆ ಎರಡು ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ 500 ಕೋಟಿ ರೂ. ವೆಚ್ಚವಾಗುವುದಾಗಿ ಅಂದಾಜಿಸಿದೆ. ಸದ್ಯ ಇದು ಪ್ರಾಥಮಿಕ ಹಂತದಲ್ಲಿದೆ. ಮುಂದಿನ ವಾರ ಸಂಸ್ಥೆಯು ಅಧ್ಯಯನ ವರದಿ ಸಲ್ಲಿಸಲಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next