Advertisement

ಸುರಂಗ ಮಾರ್ಗ ಪೂರ್ಣ: ಚಿಗುರೊಡೆದ ಕನಸು

04:27 PM Oct 01, 2018 | Team Udayavani |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ಬಳಿ ನಿರ್ಗಮನ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಆದಷ್ಟು ಬೇಗ ಭದ್ರಾ ನೀರು ಹರಿದುಬರಬಹುದು ಎಂಬ ಆಸೆ ಜಿಲ್ಲೆಯ ಜನರಲ್ಲಿ ಚಿಗುರೊಡೆದಿದೆ.

Advertisement

ಅಜ್ಜಂಪುರ ಬಳಿ 7.039 ಕಿಮೀ ಸುರಂಗ ಮಾರ್ಗ ಪೂರ್ಣಗೊಂಡಿರುವುದರಿಂದ ವಿಶೇಷವಾಗಿ ರೈತರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಇಡೀ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಜ್ಜಂಪುರ ಸಮೀಪ ಸುರಂಗ ತೋಡುವುದು ಮತ್ತು ಮಾರ್ಗ ಜೋಡಣೆ ಕಾರ್ಯ ಅತ್ಯಂತ ಸವಾಲಿನಿಂದ ಕೂಡಿತ್ತು. 

ಸುರಂಗ ಮಾರ್ಗವನ್ನು ಎರಡು ದಿಕ್ಕುಗಳಿಂದ ಕೊರೆಯಲಾಗುತ್ತಿತ್ತು. ಇನ್ನು ಕೇವಲ ಎರಡು ಮೀಟರ್‌ ಮಾತ್ರ ಬಾಕಿ ಇದ್ದು ಅದನ್ನು ಬ್ಲಾಸ್ಟ್‌ ಮಾಡಿ ಅಕ್ಟೋಬರ್‌ 1ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ಸುರಂಗ ಮಾರ್ಗದ ಜೋಡಣೆ
ಕಾರ್ಯ ನಡೆಯಲಿದೆ. ಇದರಿಂದ ಮೊದಲ ಹಂತದ ಯಶಸ್ಸು ಲಭ್ಯವಾಗಲಿದ್ದು, ಡಿಸೆಂಬರ್‌ ನಲ್ಲಿ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ.

ಅಜ್ಜಂಪುರ ಸುರಂಗ ಮಾರ್ಗ: ನರಸೀಪುರದ ಬಳಿ ಸುರಂಗ ಮಾರ್ಗ ಆರಂಭವಾಗಿ ಅಜ್ಜಂಪುರ ಸಮೀಪ ಮುಕ್ತಾಯಗೊಳ್ಳುತ್ತದೆ. ಅಪ್ರೋಚ್‌ ಕಾಲುವೆ ಉದ್ದ 0.33 ಕಿಮೀ, ಸುರಂಗ ಮಾರ್ಗದ ಉದ್ದ 6.9 ಕಿಮೀ ಸೇರಿದಂತೆ ಒಟ್ಟು 7.039 ಕಿಮೀ ಉದ್ದದ ಸುರಂಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 5.884 ಕಿಮೀ ಸುರಂಗ ಲೈನಿಂಗ್‌ ಕೂಡ ಮುಕ್ತಾಯವಾಗಿದೆ. ಸುರಂಗ ಮಾರ್ಗದ ವ್ಯಾಸ 6.72 ಮೀಟರ್‌, ಎಕ್ಸಿಟ್‌ ನಾಲೆಯ ಉದ್ದ 2.77 ಕಿಮೀ ಇದೆ.

ಅಲ್ಲದೆ ಯೋಜನೆಯ ಪ್ರಮುಖ ಘಟ್ಟವಾದ ಆಗಮನ ಹಾಗೂ ನಿರ್ಗಮನ ಮಾರ್ಗವನ್ನು ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ. ಈ ಸುರಂಗ ಮಾರ್ಗದಲ್ಲಿ 79.37 ಕ್ಯೂಮೆಕ್ಸ್‌
(2801 ಕ್ಯೂಸೆಕ್‌) ಪ್ರಮಾಣದಷ್ಟು ನೀರು ಹರಿಯಲಿದೆ.
 
ಮೆ| ಶಂಕರನಾರಾಯಣ ಕನ್ಸ್ಟ್ರಕ್ಷನ್ ಪ್ರೈವೇಟ್‌ ಲಿಮಿಟೆಡ್‌ (ಎಸ್‌ಎನ್‌ಸಿ) ಕಂಪನಿಯವರು 224 ಕೋಟಿ ರೂ. ವೆಚ್ಚದಲ್ಲಿ
ಕಾಮಗಾರಿ ಕೈಗೊಂಡಿದ್ದರು. ಉತ್ತಮ ಗುಣಮಟ್ಟ, ಸುರಕ್ಷತಾ ಕ್ರಮಗಳು ಹಾಗೂ ಆಧುನಿಕ ತಂತ್ರಜ್ಞಾನವನ್ನು ಸುರಂಗ ಮಾರ್ಗ ನಿರ್ಮಾಣದಲ್ಲಿ ಅಳವಡಿಸಿದ್ದಾರೆ. ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದವರೆಗೆ ನೀರೆತ್ತುವ ಕಾರ್ಯ ಪ್ಯಾಕೇಜ್‌ ಮೂರರಲ್ಲಿ ಸೇರ್ಪಡೆಗೊಂಡು ಪೂರ್ಣವಾಗಿದೆ. 

Advertisement

ಸುರಂಗ ಮಾರ್ಗ ಹಾಗೂ ಕಾಲುವೆ ಮೂಲಕ ಹಿರಿಯೂರಿನ ವಿವಿ ಸಾಗರಕ್ಕೆ ನೀರು ಹಾಯಿಸಬೇಕಿದೆ. ಹೊಸದುರ್ಗ
ಕಾಲುವೆ ನಿರ್ಮಾಣ ಪೂರ್ಣಗೊಂಡಲ್ಲಿ ಜಿಲ್ಲೆಯ ಜನರ ಬಹು ವರ್ಷಗಳ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ.

ಕಾಂಗ್ರೆಸ್‌ ಮುಖಂಡರಿಂದ ತಿರುಪತಿ ತಿಮ್ಮಪ್ಪಗೆ ವಿಶೇಷ ಪೂಜೆ ಅಜ್ಜಂಪುರ ಸುರಂಗ ಮಾರ್ಗ ಕಾಮಗಾರಿ
ಯಶಸ್ವಿಯಾದ ಹಿನ್ನೆಲೆಯಲ್ಲಿ ಹಾಗೂ ಡಿಸೆಂಬರ್‌ ವೇಳೆಗೆ ವಿವಿ ಸಾಗರಕ್ಕೆ ನೀರು ಹರಿಯವಂತಾಗಲಿ ಎಂದು ಪ್ರಾರ್ಥಿಸಿ
ಜಿಲ್ಲಾ ಉಸ್ತುವಾರಿ ಸಚಿವರು, ಕಾಂಗ್ರೆಸ್‌ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಕುಟುಂಬ ಸಮೇತರಾಗಿ
ತಿರುಪತಿಗೆ ತೆರಳಿ ಭಾನುವಾರ ಬೆಳಗಿನ ಜಾವ ವಿಶೇಷ ಪೂಜೆ ನೆರವೇರಿಸಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಸಂಸದ ಬಿ.ಎನ್‌. ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಡಿ. ಸುಧಾಕರ್‌, ಜಿಪಂ ಸದಸ್ಯರು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ
ಪ್ರಮುಖರಾಗಿದ್ದಾರೆ. 

ಏನಿದು ಯೋಜನೆ? ಏನಿದು ಯೋಜನೆ? ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ 1,07,265 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವುದು ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳ 156 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ವೃದ್ಧಿಸುವ ಬೃಹತ್‌ ಯೋಜನೆ ಇದಾಗಿದೆ.

ಅಲ್ಲದೆ ಬರಪೀಡಿತ ಜಿಲ್ಲೆಗಳ 195 ಹಳ್ಳಿಗಳಿಗೆ ಖಾರಿಫ್‌ ಬೆಳೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು ಮತ್ತು ಕುಡಿಯುವ ನೀರು ಪೂರೈಕೆ ಮಾಡುವುದು ಯೋಜನೆಯಲ್ಲಿ ಸೇರಿದೆ. ಸ್ಕೀಂ ಎ ಮತ್ತು ಸ್ಕೀಂ ಬಿನಲ್ಲಿ ಲಭ್ಯವಾಗುವ 29.90 ಟಿಎಂಸಿ ನೀರನ್ನು ಬಳಸಿಕೊಂಡು ಸೂಕ್ಷ್ಮ ಹನಿ ನೀರಾವರಿ ಪದ್ಧತಿ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ 5,67,022 ಎಕರೆ (2,25,515 ಹೆಕ್ಟೇರ್‌) ಭೂ ಪ್ರದೇಶಕ್ಕೆ ನೀರಾವರಿ ಕಲ್ಪಿಸುವುದು ಮತ್ತು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ 367 ಕೆರೆಗಳ ಸಾಮರ್ಥ್ಯದ ಶೇ. 50 ರಷ್ಟು ನೀರನ್ನು ತುಂಬಿಸಲು ಯೋಜಿಸಲಾಗಿದೆ. 

ಹೀಗಿದೆ ನೀರಿನ ಹಂಚಿಕೆ ಹೀಗಿದೆ ನೀರಿನ ಹಂಚಿಕೆ ತರೀಕೆರೆ 1.47 ಟಿಎಂಸಿ ನೀರಿನಲ್ಲಿ 20,150 ಹೆಕ್ಟೇರ್‌ ಭೂಮಿಗೆ ನೀರು ಮತ್ತು 79 ಕೆರೆಗಳಿಗೆ ನೀರು ಭರ್ತಿ, ಚಿತ್ರದುರ್ಗ ಕಾಲುವೆ ಮೂಲಕ 11.96 ಟಿಎಂಸಿ ನೀರು ಬಳಸಿ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ 107265 ಹೆಕ್ಟೇರ್‌ ನೀರಾವರಿ ಸೌಲಭ್ಯ ಮತ್ತು 37 ಕೆರೆ ಭರ್ತಿ ಮಾಡುವ ಉದ್ದೇಶ ಹೊಂದಲಾಗಿದೆ. ತುಮಕೂರು ಕಾಲುವೆ ಮೂಲಕ 9.40 ಟಿಎಂಸಿ ಬಳಸಿ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು
ತುಮಕೂರು ಜಿಲ್ಲೆಗಳ 84,900 ಹೆಕ್ಟರ್‌ ನೀರಾವರಿ ಸೌಲಭ್ಯ, 131 ಕೆರೆಗಳಿಗೆ ನೀರು ಭರ್ತಿ, ಜಗಳೂರು ಕಾಲುವೆ ಮೂಲಕ 1.86 ಟಿಎಂಸಿ ನೀರಿನಲ್ಲಿ 13,200 ಹೆಕ್ಟೇರ್‌ ಭೂಮಿಗೆ ನೀರು ಮತ್ತು 7 ಕೆರೆಗಳ ಭರ್ತಿ, 1.25ಟಿಎಂಸಿ ನೀರಿಲಲ್ಲಿ ಚಳ್ಳಕೆರೆಯ 42 ಕೆರೆಗಳು, 0.92 ಟಿಎಂಸಿ ನೀರಿನಲ್ಲಿ ಮೊಳಕಾಲ್ಮೂರು ತಾಲೂಕಿನ 20 ಕೆರೆಗಳು, 0.50 ಟಿಎಂಸಿ ನೀರಿನಲ್ಲಿ ಹೊಳಲ್ಕೆರೆಯ 21 ಕೆರೆಗಳು, 0.54 ಟಿಎಂಸಿ ನೀರಿನಲ್ಲಿ ಪಾವಗಡ ತಾಲೂಕಿನ 30 ಕೆರೆಗಳು, 2 ಟಿಎಂಸಿ ನೀರಿನಲ್ಲಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿ ಮಾಡಲಾಗುವುದು. ಈ ಯೋಜನೆಯ ಅಂದಾಜು ವೆಚ್ಚ 12,340 ಕೋಟಿ ರೂ. ಗಳಾಗಿವೆ.

„ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next