Advertisement

2ಜಿ ಬಗ್ಗೆ ಸತ್ಯ ಬಯಲಾಯ್ತು ರಾಫೇಲ್‌ ಬಗ್ಗೆ ಮೌನವೇಕೆ?

08:40 AM Dec 23, 2017 | Team Udayavani |

ಹೊಸದಿಲ್ಲಿ: 2ಜಿ ಸ್ಪೆಕ್ಟ್ರಂ ಹಗರಣ ಬಗೆಗಿನ ನಮ್ಮ ವಾದವೇ ಗೆದ್ದಿದ್ದು, ಇಡೀ ಹಗರಣವೇ ಬಿಜೆಪಿ ಪ್ರಾಯೋಜಿತ ಸುಳ್ಳು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಪಾದಿಸಿದ್ದಾರೆ.  

Advertisement

ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ರಾಹುಲ್‌ ಅವರು, 2ಜಿ ಹಗರಣವೂ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, 2ಜಿ ಸ್ಪೆಕ್ಟ್ರಂ ಹಂಚಿಕೆ ವಿಚಾರದಲ್ಲಿ ನಾವು ಇದು ಹಗರಣವೇ ಅಲ್ಲ ಎಂದು ಹೇಳಿದ್ದೆವು. ಆದರೆ, ಬಿಜೆಪಿ ಇದೊಂದು ಭಾರಿ ಹಗರಣ ಎಂದು ಸುಳ್ಳೇ ಸುಳ್ಳು ಹೇಳುತ್ತಾ ಬಂದಿತ್ತು. ಕಡೆಗೂ ಕೋರ್ಟ್‌ ಇದೊಂದು ಹಗರಣವೇ ಅಲ್ಲ ಎಂದು ಹೇಳುವ ಮೂಲಕ ನಮ್ಮ ವಾದವನ್ನೇ ಎತ್ತಿಹಿಡಿದಿದೆ ಎಂದರು. 

ಆದರೆ ರಾಫೆಲ್‌ ಡೀಲ್‌ ಕುರಿತಂತೆ ಎನ್‌ಡಿಎ ಸರಕಾರದ ವಿರುದ್ಧ ಆರೋಪಗಳಿದ್ದರೂ ಅವರು ಈ ಬಗ್ಗೆ ಮಾತನಾಡದೇ ಏಕೆ ಮೌನತಾಳಿದ್ದಾರೆ ಎಂದು ಪ್ರಶ್ನಿಸಿದರು. ಗುಜರಾತ್‌ ಚುನಾವಣೆ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಸುಳ್ಳುಗಳಿಗೆ ಜನ ಪಾಠ ಕಲಿಸಿದ್ದಾರೆ. ನಾವು ಗುಜರಾತ್‌ಗೆ ಹೋದಾಗ ಅಲ್ಲಿ ಯಾವುದೇ ಮಾಡೆಲ್‌ ಎಂಬುದಿರಲಿಲ್ಲ. ಇದುವರೆಗೆ ಬಿಜೆಪಿ ಜನರ ಸಂಪನ್ಮೂಲಗಳನ್ನು ಕದ್ದಿದೆ ಎಂದು ಆರೋಪಿಸಿದರು. 2012ರಲ್ಲಿ 61ರಲ್ಲಿ ಗೆದ್ದಿದ್ದ ನಾವು ಈ ಬಾರಿ 77ಕ್ಕೆ ಸ್ಥಾನ ಏರಿಸಿಕೊಂಡಿದ್ದೇವೆ ಎಂದೂ ಹೇಳಿದರು. 

ಈ ಸಭೆಯಲ್ಲಿ ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌, ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಹಿರಿಯ ನಾಯಕರಾದ ಮೋತಿಲಾಲ್‌ ವೋರಾ, ಗುಲಾಂ ನಬಿ ಆಜಾದ್‌, ಜನಾರ್ದನ್‌ ದ್ವಿವೇದಿ, ಮಲ್ಲಿಕಾರ್ಜುನ ಖರ್ಗೆ, ಕರಣ್‌ ಸಿಂಗ್‌, ಆನಂದ್‌ ಶರ್ಮಾ, ಮೋಹ್ಸಿನಾ ಕಿದ್ವಾಯಿ, ಅಂಬಿಕಾ ಸೋನಿ, ಸಿ.ಪಿ.ಜೋಷಿ, ಕಮಲ್‌ನಾಥ್‌, ಬಿ.ಕೆ. ಹರಿಪ್ರಸಾದ್‌, ಆಸ್ಕರ್‌ ಫ‌ರ್ನಾಂಡೀಸ್‌ ಸೇರಿದಂತೆ ವಿವಿಧ ರಾಜ್ಯಗಳ ಉಸ್ತುವಾರಿಗಳು ಭಾಗವಹಿಸಿದ್ದರು. 

ಕರುಣಾಗೆ ರಾಜಾ ಪತ್ರ
ಡಿಎಂಕೆ ಮುಖ್ಯಸ್ಥ ಕರುಣಾನಿಧಿಗೆ ರಾಜಾ ಸುದೀರ್ಘ‌ವಾದ ಭಾವನಾತ್ಮಕ ಪತ್ರ ಬರೆದಿದ್ದು, ನೀವು ಹಾಗೂ ನಿಮ್ಮ ಪುತ್ರ ಸ್ಟಾಲಿನ್‌ ನನ್ನನ್ನು ರಕ್ಷಿಸಿದ್ದೀರಿ. ಈ ಪ್ರಕರಣದಲ್ಲಿನ ಯಶಸ್ಸನ್ನು ನಿಮ್ಮ ಪಾದದ ಮೇಲೆ ಇಟ್ಟು ನಮಸ್ಕರಿಸುತ್ತೇನೆ. ಈ ಅವಧಿಯಲ್ಲಿ ನಿಮ್ಮ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ನಿಮ್ಮ 80 ವರ್ಷದ ಸಾರ್ವಜನಿಕ ಜೀವನ ಹಾಳು ಮಾಡಿದವರನ್ನು ಯಾರು ಶಿಕ್ಷಿಸುತ್ತಾರೆ? ನಿಮ್ಮನ್ನು ಎದುರಿಸಲಾಗದವರು ಈ ರಾಜಕೀಯ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

Advertisement

ಯುಪಿಎ ಸರಕಾರವನ್ನು ಉರುಳಿಸಲು 2ಜಿ ಸಂಚು
ಯುಪಿಎ-1 ಸರಕಾರ ಉರುಳಿಸಲು 2ಜಿ ಹಗರಣ ಎಂಬ ಸಂಚನ್ನು ಹೂಡಲಾಗಿತ್ತು ಎಂದು ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಆರೋಪಿಸಿದ್ದಾರೆ. ಡಿಎಂಕೆ ತಮಿಳುನಾಡಿನಲ್ಲಿ ಬೆಳೆಯುತ್ತಿರುವುದನ್ನು ತಡೆಯಲು ಈ ಸಂಚು ಹೂಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅವರು ಈ ಬಗ್ಗೆ ಯಾವುದೇ ವ್ಯಕ್ತಿಯನ್ನಾಗಲೀ ಪಕ್ಷವನ್ನಾಗಲೀ ಅವರು ದೂರಲಿಲ್ಲ. ಟೆಲಿಕಾಂ ಕಂಪೆನಿಗಳ ಮೇಲೂ ರಾಜಾ ಆರೋಪ ಮಾಡಿದ್ದಾರೆ. ಕೆಲವು ಕಂಪೆನಿಗಳು ಲಭ್ಯ ತರಂಗಾಂತರಗಳನ್ನು ಮುಚ್ಚಿಟ್ಟಿದ್ದವು. ನಾನು ರೂಪಿಸಿದ ನೀತಿಯಿಂದಾಗಿ ಕುತಂತ್ರಗಳು ಬಯಲಾದವು. ನಾನು ಕೈಗೊಂಡ ನೀತಿಗಳಿಂದಾಗಿಯೇ ಜನರು ಈಗ ವಾಟ್ಸ್‌ ಆ್ಯಪ್‌, ಟ್ವಿಟರ್‌ನಂತಹ ಅಪ್ಲಿಕೇಶನ್‌ಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದಾಗಿದೆ. ಈ ಕ್ರಾಂತಿಯನ್ನು ನಾನು ಮಾಡಿದ್ದೇ ಈಗ ಅಪರಾಧವಾಗಿದೆ. ಇದು ಈ ದೇಶದಲ್ಲಿ ಮಾತ್ರ ಸಾಧ್ಯ ಎಂದು ರಾಜಾ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next