Advertisement

ಪರರ ದುಃಖದಲ್ಲಿ ಪಾಲ್ಗೊಂಡವರೇ ನಿಜವಾದ ಬುದ್ದ

09:56 AM Nov 07, 2021 | Team Udayavani |

ವಾಡಿ: ಮಾನವನ ದುಃಖದ ಮೂಲ ಪತ್ತೆಹಚ್ಚಿದ ಸಿದ್ಧಾರ್ಥನನ್ನು ಇಡೀ ವಿಶ್ವವೇ ಬುದ್ಧ ಎಂದು ಕರೆಯಿತು. ಅಂಬೇಡ್ಕರ್‌ ಮತ್ತು ಬುದ್ಧನ ಅನುಯಾಯಿಗಳು ಪರರ ದುಃಖದಲ್ಲಿ ಪಾಲ್ಗೊಳ್ಳುವ ಮೂಲಕ ಬುದ್ಧನಾಗಿ ಹೊರ ಹೊಮ್ಮಬೇಕು ಎಂದು ಬೌದ್ಧ ಭಿಕ್ಷು, ಮಹಾಥೇರೊ ಬೋದಿಧಮ್ಮ ಜಪಾನ್‌ ಹೇಳಿದರು.

Advertisement

ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಡಾ| ಬಿ.ಆರ್‌.ಅಂಬೇಡ್ಕರ್‌ ತರುಣ ಸಂಘದ ವತಿಯಿಂದ ಶುಕ್ರವಾರ ನಗರದ ಅಂಬೇಡ್ಕರ್‌ ಕಾಲೋನಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಏರ್ಪಡಿಸಲಾಗಿದ್ದ ಆರು ದಿನಗಳ ಜಪಾನೀಸ್‌ ಜೆನ್‌ ಧ್ಯಾನ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.

ಪ್ರಬುದ್ಧ ಭಾರತ ನಿರ್ಮಿಸಲು ಅಂಬೇಡ್ಕರ್‌ ಆಶಯದಂತೆ ಬುದ್ಧನ ಮಾರ್ಗದಲ್ಲಿ ನಡೆಯಬೇಕು ಎನ್ನುವವರು ಕೊಲ್ಲುವ ಪವೃತ್ತಿಯಿಂದ ಹೊರಬರಬೇಕು. ಮೋಸ, ವಂಚನೆ, ಮಾನಭಂಗ, ಅತ್ಯಾಚಾರ, ದೌರ್ಜನ್ಯಗಳಂತ ಅಮಾನವೀಯ ಕೃತ್ಯಗಳಿಗೆ ಕೈಹಾಕಬಾರದು. ಇತರರ ದುಃಖವನ್ನು ತನ್ನ ದುಃಖವಾಗಿ ಸ್ವೀಕರಿಸುವ ಜತೆಗೆ ನರರ ಪ್ರಾಣ ರಕ್ಷಣೆ ಬೌದ್ಧನ ಕರ್ತವ್ಯವಾಗಿದೆ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಬುದ್ಧತ್ವ ಪ್ರಾಪ್ತಿಯಾಗುತ್ತದೆ ಎಂದರು.

ಮೈತ್ರಿ ಮಾರ್ಗದಲ್ಲಿ ಸಾಗುವವರು ಬೌದ್ಧ ಧಮ್ಮವನ್ನು ಹೆಚ್ಚು ಜನರಿಗೆ ತಲುಪಿಸಬಲ್ಲರು. ಕಷ್ಟದಲ್ಲಿರುವವರಿಗೆ ಹಣದಿಂದ ಸಹಾಯ ಮಾಡಲಾಗದಿದ್ದರೂ ಆತ್ಮಸ್ತೈರ್ಯ ತುಂಬುವ ಸರಳ ಕೆಲಸ ಮಾಡಿದರೆ ಇತರರ ಬದುಕಿನಲ್ಲಿ ಹೊಸ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಂಬೇಡ್ಕರ್‌ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ಮುಖಂಡರಾದ ಸಂತೋಷ ಜೋಗೂರ, ಕಿಶೋರಕುಮಾರ ಸಿಂಗೆ ಹಾಗೂ ಬೌದ್ಧ ಉಪಾಸಕರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next