ಬೆಂಗಳೂರು: ಮುಸ್ಲಿಮ್ ಸಮುದಾಯದ ಧಾರ್ಮಿಕ ಭಾವನೆಗಳ ವಿಷಯವಾಗಿರುವ ತ್ರಿವಳಿ ತಲಾಖ್ ಕುರಿತು ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಪುನರ್ ಪರಿಶೀಲಿಸಬೇಕು ಎಂದು “ಮುಸ್ಲಿಮ್ ಅವೇರೆ°ಸ್ ಲೀಗ್’ ಮನವಿ ಮಾಡಿದೆ. ಸಂವಿಧಾನದಲ್ಲಿ ರಾಷ್ಟ್ರದ ಎಲ್ಲಾ ಜನಾಂಗದವರಿಗೂ ಅವರವರ ಧರ್ಮ ಅನುಸರಿಸಲು ಅನುವು ಮಾಡಿಕೊಡಲಾಗಿದೆ.
ಅದನ್ನು ಎಲ್ಲರೂ ಒಪ್ಪಿಕೊಂಡು ಕಳೆದ 67 ವರ್ಷಗಳಿಂದಲೂ ಬಾಳುವೆ ನಡೆಸುತ್ತಿದ್ದೇವೆ. ಸಾವಿರಾರು ವರ್ಷಗಳಿಂದ ಮುಸ್ಲಿಮ್ ಧರ್ಮ ಅನುಸರಿಸಿಕೊಂಡು ಬಂದಂತಹ ಕಟ್ಟುನಿಟ್ಟಿನ ಷರಿಯತ್ತಿನ ಕಾನೂನನ್ನು ದುರ್ಬಲಗೊಳಿಸಲು ಬಹುದೊಡ್ಡ ರಾಜಕೀಯ ಪಿತೂರಿ ನಡೆಯುತ್ತಿದೆ.
ಸರ್ವೋತ್ಛ ನ್ಯಾಯಾಲಯ ತನ್ನ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಸಂಘದ ಅಧ್ಯಕ್ಷ ಎಚ್.ಎಂ.ಆಸೀಫ್ ಇಕ್ಬಾಲ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. ಅಲ್ಪಸಂಖ್ಯಾತರ ಮೇಲೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ದೌರ್ಜನ್ಯ, ಅನ್ಯಾಯಗಳು ನಡೆಯುತ್ತಿವೆ.
ಗೋಹತ್ಯೆಯ ನೆಪವೊಡ್ಡಿ ಅನಧಿಕೃತ ಗೋರಕ್ಷಕರಿಂದ ಕಗ್ಗೊಲೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲಗೊಂಡಿದೆ. ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ವೈಯಕ್ತಿಕ ಧರ್ಮದ ವ್ಯವಸ್ಥೆಯಲ್ಲಿ ಭಾವನೆಗಳೊಂದಿಗೆ ಹುಡುಗಾಟ ಆಡಲಾಗುತ್ತಿದೆ.
ತ್ರಿವಳಿ ತಲಾಖ್ ವಿಚಾರದಲ್ಲಿ ನೀಡಲಾಗಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಮ್ ಅವೇರೆ°ಸ್ ಲೀಗ್ ಪ್ರಧಾನ ಕಾರ್ಯದರ್ಶಿ ಜಿ.ಎಚ್.ಮಸೂದ್ ಅಹಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.