ಹುಬ್ಬಳಿ: ಆಫ್ರಿಕಾದ ಅತಿ ದೊಡ್ಡ ಪರ್ವತ ಕಿಲಿಮಂಜಾರೋ ಶಿಖರದ ಮೇಲೆ ತ್ರಿವರ್ಣ ಧ್ವಜ ಹಾರಿಸುವಲ್ಲಿ ಇಲ್ಲಿನ ವಿಕಾಸನಗರದ ನಿವಾಸಿ, ಖಾಸಗಿ ಹಣಕಾಸು ಕಂಪೆನಿ ಉಪಾಧ್ಯಕ್ಷರಾಗಿರುವ ಐವತ್ತರ ವಯಸ್ಸಿನ ಗಿರೀಶ ಹುಲ್ಲೂರು ಯಶಸ್ವಿಯಾಗಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಸಾಧನೆಯ ಅನುಭವ ಹಂಚಿಕೊಂಡ ಅವರು, ಎರಡು ವರ್ಷಗಳ ಸತತ ಪರಿಶ್ರಮ ಫಲ ನೀಡಿದೆ.
ಸಮುದ್ರ ಮಟ್ಟದಿಂದ 5895 ಮೀಟರ್ ಎತ್ತರವಿರುವ ಈ ಪರ್ವತ ಆಫ್ರಿಕಾದಲ್ಲಿ ಅತ್ಯಂತ ದೊಡ್ಡ ಶಿಖರವಾಗಿದೆ. ಈಗಾಗಲೇ ಪಶ್ಚಿಮ ಘಟ್ಟ ಸೇರಿದಂತೆ ಹಲವು ಪರ್ವತಾರೋಹಣ ಮಾಡಿದ್ದು, ಕಿಲಿಮಂಜಾರೋ ಶಿಖರ ಹತ್ತುವ ಕನಸು ಹೊಂದಿದ್ದೆ ಎಂದರು.
ಈ ಚಾರಣದಲ್ಲಿ ಸುಮಾರು 300 ಜನರಿದ್ದರು. ಅದರಲ್ಲಿ ಸಾಕಷ್ಟು ಜನರು ಅರ್ಧಕ್ಕೆ ಮೊಟಕುಗೊಳಿಸಿದರು. ಎತ್ತರಕ್ಕೆ ಹೋದಂತೆಲ್ಲ ಶೂನ್ಯ ತಾಪಮಾನ ಇರುತ್ತಿತ್ತು. ರಭಸವಾಗಿ ಗಾಳಿ ಬೀಸಿದರೆ ಆಮ್ಲಜನಕ ಸಮರ್ಪಕವಾಗ ಇರುತ್ತಿರಲಿಲ್ಲ. ದೃಢ ಸಂಕಲ್ಪದಿಂದ ಮುನ್ನುಗ್ಗಿದೆ. ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದರೂ ಶಿಖರದ ಮೇಲೆ ರಾಷ್ಟ್ರಧ್ವಜ ಹಾರಿಸಿದಾಗ ಆದ ಸಂತಸ ನೋವುಗಳೆಲ್ಲವನ್ನೂ ಮರೆಸಿತು ಎಂದು ಸಂತಸ ವ್ಯಕ್ತಪಡಿಸಿದರು.
ಗಿರೀಶ ಅವರ ಸಹೋದರಿ ಸುಹಾಸಿನ ದೇಸಾಯಿ ಮಾತನಾಡಿ, ಬಾಲ್ಯದಿಂದಲೂ ಗುಡ್ಡ ಬೆಟ್ಟಗಳನ್ನು ಹತ್ತುವ ಆಸೆ. ಸಾಕಷ್ಟು ಕಡೆ ಓಡಾಡಿದ್ದಾನೆ. ಕಿಲಿಮಾಂಜರೋ ಪರ್ವತದ ಮೇಲೆ ತಿರಂಗಾ ಹಾರಿಸಬೇಕು ಎನ್ನುವ ಪಣತೊಟ್ಟು ಈ ಸಾಧನೆ ಮಾಡಿದ್ದಾರೆ. ಈ ಚಾರಣ ಕೈಗೊಂಡಾಗ ಅವರ ಸ್ನೇಹಿತರು “ಹುಬ್ಬಳ್ಳಿಯವ’ ಎನ್ನುವ ಬ್ಯಾನರ್ ನೀಡಿದ್ದರು. ಶಿಖರದ ತುದಿಯಲ್ಲಿ ಆ ಬ್ಯಾನರ್ ಹಾಗೂ ತ್ರಿವರ್ಣ ಧ್ವಜ ಹಾರಾಡಿದ ದೃಶ್ಯಗಳು ಸಾಕಷ್ಟು ಸಂತಸ ಮೂಡಿಸುತ್ತವೆ ಎಂದರು. ಸಹೋದರ ನವೀನ ಹುಲ್ಲೂರು, ಸಂಬಂಧಿ ಮೋಹನ ದೇಸಾಯಿ ಇದ್ದರು.
ಆ.12ರಿಂದ ಪ್ರಯಾಣ; ಎಂಟು ದಿನಗಳ ಯಶಸ್ವಿ
ಚಾರಣ ಕಾಡುಗಳಿಂದ ಆರಂಭವಾಗುವ ಈ ಚಾರಣ ಹಿಮಚ್ಛಾದಿತ ಪ್ರದೇಶವರೆಗೆ ಕೊಂಡೊಯ್ಯುತ್ತದೆ. ಶೂನ್ಯ ತಾಪಮಾನದಿಂದ -30 ಡಿಗ್ರಿಯವರೆಗೆ ಅಲ್ಲಿನ ಉಷ್ಣಾವಂಶವಿದೆ. ವಿಭಿನ್ನ ಹವಾಮಾನ ಹಾಗೂ ಪರಿಸರವನ್ನು ಹೊಂದಿರುವ ಈ ಪರ್ವತ ಚಾರಣಕ್ಕೆ ಎರಡು ವರ್ಷಗಳಿಂದ ತಯಾರಿ ನಡೆಸಿದ್ದೆ. ಇದಕ್ಕಾಗಿ ಕೆಲ ತರಬೇತಿ ಪಡೆದಿದ್ದೆ. ಆ.12ರಂದು ಆಫ್ರಿಕಾದ ತಾಂಜಾನಿಯಾ ತಲುಪಿ ಅಲ್ಲಿಂದ ಚಾರಣ ಆರಂಭಿಸಿ ಆ.19ಕ್ಕೆ ಪೂರ್ಣಗೊಳಿಸಿದೆ. ಬೆನ್ನಿಗೆ 10 ಕೆಜಿ ಭಾರದ ಚೀಲದೊಂದಿಗೆ 8 ದಿನಗಳ ಚಾರಣ ಯಶಸ್ವಿಯಾಗಿ ಮುಗಿಸಿ ವಾಪಸಾಗಿದ್ದೇನೆ ಎಂದು ಗಿರೀಶ ಹುಲ್ಲೂರು ತಿಳಿಸಿದರು.