Advertisement

ತಪ್ಪಿದ ಅನಾಹುತ; ಎಚ್ಚೆತ್ತುಕೊಳ್ಳದ ಬಿಸಿಎಂ ಇಲಾಖೆ

06:44 PM Jan 08, 2022 | Team Udayavani |

ಕುಂದಾಪುರ: ಇಲ್ಲಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಹಾಸ್ಟೆಲ್‌ನ ಸಮೀಪ ಭಾರೀ ಗಾತ್ರದ ಮರವೊಂದು ಬಿದ್ದು 4 ವಿದ್ಯುತ್‌ ಕಂಬಗಳು ಬಿದ್ದಿವೆ. ಭಾರೀ ಅನಾಹುತವೊಂದು ತಪ್ಪಿದೆ.

Advertisement

ಉದ್ಘಾಟನೆಗೆ ಅಡ್ಡಿಯಾಗಿತ್ತು ಇಲ್ಲಿನ ತಾ.ಪಂ. ಬಳಿ ನಿರ್ಮಾಣ ಕಾರ್ಯ ಪೂರ್ಣವಾಗಿ ತಿಂಗಳುಗಳೇ ಕಳೆದರೂ ಬಿಸಿಎಂ ಹಾಸ್ಟೆಲ್‌ ಕಟ್ಟಡದ ಉದ್ಘಾಟನೆಯೇ ನಡೆದಿರಲಿಲ್ಲ. ಮಕ್ಕಳ ವಸತಿಗೆ ಲಭ್ಯವಾಗಿರಲಿಲ್ಲ. ಇದಕ್ಕೆ ಕಾರಣ ಅಡ್ಡ ಬಂದ ವಿದ್ಯುತ್‌ ತಂತಿ ಆಗಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಡಿ. ದೇವರಾಜ ಅರಸು ಬಿಸಿಎಂ ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ 2001ರಲ್ಲಿ ಮಂಜೂರಾಗಿದೆ. ಹಳೆ ಕಟ್ಟಡದಲ್ಲಿ 100 ವಿದ್ಯಾರ್ಥಿನಿಯರ ಸಾಮರ್ಥ್ಯ ಎಂದಾದರೂ 200 ವಿದ್ಯಾರ್ಥಿನಿಯರಿದ್ದರು. ಈ ನಿಟ್ಟಿನಲ್ಲಿ ಹೊಸ ಕಟ್ಟಡ ಮಂಜೂರಾಗಿತ್ತು. 3.37 ಕೋ.ರೂ. ವೆಚ್ಚದಲ್ಲಿ ಹಾಸ್ಟೆಲ್‌ನ ಹೊಸ ಕಟ್ಟಡ ನಿರ್ಮಾಣವಾಗಿ 100 ವಿದ್ಯಾರ್ಥಿನಿಯರಿಗೆ ತಂಗಲು ಅನುವಾಗುವಂತೆ 10 ಕೊಠಡಿಗಳನ್ನು ಮಾಡಲಾಗಿತ್ತು.

ಇದೇ ಕಟ್ಟಡ ಕೋವಿಡ್‌ಗೆ ಹಾಗೋ ಹೀಗೋ ಮಕ್ಕಳ ವಸತಿಗೆ ದೊರೆತ ಕಟ್ಟಡ ಕಳೆದ ಬಾರಿ ಕೋವಿಡ್‌ ಸಂದರ್ಭದಲ್ಲಿ ಕೊರೊನಾ ಕೇರ್‌ ಸೆಂಟರ್‌ ಆಗಿ ಕಾರ್ಯನಿರ್ವಹಣೆಗೆ ದೊರೆತಿತ್ತು. ಈ ಬಾರಿಯೂ ಕೋವಿಡ್‌ ನಿರ್ವಹಣೆಗೆ ಕಟ್ಟಡ ಸಜ್ಜು ಮಾಡಲಾಗಿದೆ.

ಹತ್ತಿರ ಇದ್ದ ತಂತಿ
ಹಾಸ್ಟೆಲ್‌ನ ಕಟ್ಟಡಕ್ಕೆ ತಾಗಿಕೊಂಡಂತೆ ಆವರಣ ಗೋಡೆ ಪಕ್ಕದಲ್ಲಿ ವಿದ್ಯುತ್‌ ಕಂಬಗಳಿದ್ದು ಅವುಗಳ ತಂತಿ ಕಟ್ಟಡದ ಗೋಡೆ ಬದಿಯಲ್ಲೇ ಹಾದು ಹೋಗಿತ್ತು. ಮಕ್ಕಳು ಮೇಲ್ಛಾವಣಿಗೆ ಹೋದರೆ, ಬಟ್ಟೆ ಇತ್ಯಾದಿ ಅದಕ್ಕೆ ತಾಗುವಂತೆ ಇತ್ತು. ಆದ್ದರಿಂದ ಮೇಲ್ಛಾವಣಿಗೆ ಹೋಗುವ ಪ್ರವೇಶಿಕೆಯನ್ನೇ ತತ್ಕಾಲ ಬಂದ್‌ ಮಾಡಲಾಗಿತ್ತು.

ಸಮನ್ವಯವಾಗದ ಇಲಾಖೆ
ಕಟ್ಟಡಕ್ಕೆ ಆತುಕೊಂಡಂತೆ ಇರುವ ತಂತಿಯನ್ನು ಸ್ಥಳಾಂತರಿಸಲು ಯಾರೂ ಮುಂದಾಗದಿರುವುದು ವಿಪರ್ಯಾಸ. ಇಲಾಖೆ ಶಾಸಕರ ಮೊರೆ ಹೋಯಿತು. ಶಾಸಕರು ಮೆಸ್ಕಾಂಗೆ ಪತ್ರ ಬರೆದರು. ಮೆಸ್ಕಾಂ ಇದರ ಖರ್ಚನ್ನು ಬಿಸಿಎಂ ಇಲಾಖೆ ನೀಡಬೇಕೆಂದು ಮಾರುತ್ತರ ಬರೆಯಿತು. ಎಂಬಲ್ಲಿಗೆ ಬಿಸಿಎಂ ಇಲಾಖೆ ಆ ಪತ್ರವನ್ನು ಭದ್ರವಾಗಿ ಕಪಾಟಿನಲ್ಲಿಟ್ಟು ಮೈ ಮರೆಯಿತು. ಸುದೈವವಶಾತ್‌ ಈವರೆಗೆ ಯಾವುದೇ ಅನಾಹುತ ನಡೆದಿಲ್ಲ ಎನ್ನುವುದನ್ನು ಬಿಟ್ಟರೆ ಎರಡು ವರ್ಷ ಕಾಲ ಮಕ್ಕಳು ತಂತಿ ಕಂಡಾಗ ಜೀವಭಯದಲ್ಲಿದ್ದರು. ಎರಡು ಇಲಾಖೆಗಳು ಸಮನ್ವಯಗೊಂಡು ಕಂಬ ಅಥವಾ ತಂತಿ ತೆರವಿನ ಕುರಿತು ಮುಂದಾಗಲೇ ಇಲ್ಲ.

Advertisement

ಪ್ರಕೃತಿಯ ವರ
ಶುಕ್ರವಾರ ಹಾಸ್ಟೆಲ್‌ ಸಮೀಪ ಇದ್ದ ಭಾರೀ ಗಾತ್ರದ ಮರ ಬಿದ್ದಿದೆ. ಹಾಗೆ ಬೀಳುವಾಗ 4 ವಿದ್ಯುತ್‌ ಕಂಬಗಳು ಬಿದ್ದು ತುಂಡಾಗಿವೆ. ಕಾರ್ಯ ಪ್ರವೃತ್ತವಾದ ಮೆಸ್ಕಾಂ ಇಲಾಖೆ ಹೊಸ ಕಂಬಗಳನ್ನು ಹಾಕಿದೆ. ಹಾಗೆ ಕಂಬ ಹಾಕುವಾಗ ಮೆಸ್ಕಾಂ ಇಲಾಖೆ ಅಧಿಕಾರಿಗಳು ಮಾನವೀಯತೆ ತೋರಿದ್ದಾರೆ. 2 ಅಡಿಗಳಷ್ಟು ದೂರದಲ್ಲಿ ಹೊಸ ಕಂಬ ನೆಟ್ಟಿದ್ದಾರೆ. ಕಾಂಪೌಂಡ್‌ ಪಕ್ಕದಲ್ಲಿ ಕಾಂಕ್ರೀಟ್‌ ಕೂಡ ಹಾಕಿದ್ದು ಇದಕ್ಕೆ ಕಾರಣವೂ ಆಗಿತ್ತು. ಪರಿಣಾಮ ತಂತಿ ಹಾಸ್ಟೆಲ್‌ ಗೋಡೆ ಪಕ್ಕ ಹಾಯುವುದು ತಪ್ಪಿದಂತಾಗಿದೆ.

“ಉದಯವಾಣಿ’ ವರದಿ
ಹಾಸ್ಟೆಲ್‌ ಪಕ್ಕ ವಿದ್ಯುತ್‌ ತಂತಿ ಹಾದು ಹೋಗಿ ಅಪಾಯ ಇದ್ದುದನ್ನು “ಉದಯವಾಣಿ’ 2019 ಡಿ. 3ರಂದು ವರದಿ ಮಾಡಿತ್ತು. ಶಾಸಕರು, ಇಲಾಖೆಗಳು ಪತ್ರ ವ್ಯವಹಾರ ಮಾಡಿದ್ದರೂ ಕಾರ್ಯಾನುಷ್ಠಾನವಾಗಿರಲಿಲ್ಲ. ಈಗ ಪ್ರಕೃತಿಯೇ ಪಾಠ ಕಲಿಸಿದೆ. ಅಪಾಯ ತಪ್ಪಿಸಿದೆ.

ಸ್ಥಳಾಂತರಿಸಲಾಗಿದೆ
ಸಂಬಂಧಪಟ್ಟ ಇಲಾಖೆಯವರೇ ಹಣ ಪಾವತಿಸಿ ಸ್ವಂತ ಖರ್ಚಿನಿಂದ ಕಂಬ ಸ್ಥಳಾಂತರಿಸಬೇಕಾದ್ದು ನಿಯಮ. ಹಾಗೆ ಪತ್ರವನ್ನೂ ಬರೆಯಲಾಗಿತ್ತು. ಇತರೆಡೆ ಸ್ಥಳಾಂತರ ಮಾಡುವುದಾದರೆ ಬೇರೆ ತಾಂತ್ರಿಕ ಸಂಗತಿಗಳನ್ನೂ ಪರಿಶೀಲಿಸಬೇಕಾಗುತ್ತದೆ. ಈಗ ಮರ ಬಿದ್ದು ಹಾನಿಯಾದ ಕಾರಣ ಸುರಕ್ಷಿತವಾಗಿ ಅಂತರ ಇಟ್ಟು ಕಂಬ ಹಾಕಲಾಗಿದೆ.
-ವಿಜಯ ಕುಮಾರ್‌ ಶೆಟ್ಟಿ,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಮೆಸ್ಕಾಂ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next