Advertisement

ನಿಧಿ ಆಸೆಗೆ ನರಬಲಿ ನೀಡಲು ಹಳ್ಳ ತೊಡಿದ್ದ!

03:27 PM Mar 27, 2018 | |

ಆನೇಕಲ್‌:  ನಿಧಿ ಆಸೆಗೆ ವ್ಯಕ್ತಿಯೊಬ್ಬನನ್ನು ಬಲಿ ನೀಡಲು ಮುಂದಾಗಿ ಕೊನೆಗೆ ಅವನೇ ಜೈಲು ಸೇರಿದ ಘಟನೆ ತಾಲೂಕಿನ ಅತ್ತಿಬೆಲೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

Advertisement

 ತಾಲೂಕಿನ ಅತ್ತಿಬೆಲೆ ನಿವಾಸಿ ಶಂಕರಪ್ಪ(45) ಬಂಧನಕ್ಕೆ ಒಳಗಾಗಿರುವ ವ್ಯಕ್ತಿ. ನರಬಲಿಯಿಂದ ಬಚಾವ್‌ ಆಗಿ ಠಾಣೆಯಲ್ಲಿ ದೂರು ನೀಡಿದವನು ಮೂಲತಃ ದಾವಣಗೆರೆ ನಿವಾಸಿ ನಾಗರಾಜು. ಹಲವು ವರ್ಷಗಳಿಂದ ಅತ್ತಿಬೆಲೆ ಸುತ್ತಮುತ್ತ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ. 

ಘಟನೆ ವಿವರ: ಶಂಕರಪ್ಪ ತಮ್ಮ ಜಮೀನಿನಲ್ಲಿ ಅಡಗಿರುವ ನಿಧಿ ತೆಗೆಯಲು ವಿಶೇಷ ಪೂಜೆ ಹಮ್ಮಿಕೊಂಡಿದ್ದು, ಆ ಪೂಜೆಗೆ ನರ ಬಲಿ ನೀಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಇದಕ್ಕಾಗಿ ಆರು ಅಡಿ ಹಳ್ಳ ತೆಗೆದು, ಹಳ್ಳದಲ್ಲಿ ವಿಶೇಷ ಪೂಜೆ ನಡೆಸಿ ನರ ಬಲಿಗಾಗಿ ದಾವಣಗೆರೆ ಮೂಲದ ನಾಗರಾಜು ಎಂಬುವರನ್ನು ಭೇಟಿ ಮಾಡಿ ನಮ್ಮ ಹೊಲದಲ್ಲಿ ಕೆಲಸ ಇದೆ ಬಾ ಎಂದು ಕರೆದಿದ್ದ. ಕೂಲಿಗೆ ಬರುವಾಗ ಸ್ನಾನ ಮಾಡಿಕೊಂಡು ಬಾ. ಕೂಲಿಗೆ ಹೋಗುತ್ತಿರುವ ವಿಷಯ ಬೇರೆಯಾರಿಗೂ ಹೇಳಬೇಡ ಎಂದು ನಾಗರಾಜುವನ್ನು ಒಪ್ಪಿಸಿ ಬಂದಿದ್ದ.

ಒಬ್ಬನೇ ಬರಲು ಹೇಳಿದ್ದ: ರಾತ್ರಿ ಕೂಲಿಗೆ ನಾಗರಾಜು ಬರುವ ಸಮಯದಲ್ಲಿ ನಾಗರಾಜು ಮತ್ತೂಬ್ಬ ಸ್ನೇಹಿತನೊಂದಿಗೆ ಬರುವ ವಿಷಯ ತಿಳಿದು ಕೇವಲ ನಾಗರಾಜು ಒಬ್ಬನನ್ನೇ ಬರಲು ಒತ್ತಾಯಿಸಿದ್ದಾನೆ. ಅದರಂತೆ ನಾಗರಾಜು ಒಬ್ಬನೇ ಬಂದಿದ್ದಾನೆ. ಶಂಕರಪ್ಪ ನಾಗರಾಜುವನ್ನು ಕರೆದುಕೊಂಡು ಮೊದಲೇ ನಿಗದಿಯಾಗಿದ್ದ ನಿಧಿ ತೆಗೆಯುವ ಪೂಜಾ ಸ್ಥಳದ ಬಳಿ ಕರೆದುಕೊಂಡು ಹೋಗಿ ಆರು ಅಡಿ ಹಳ್ಳದಲ್ಲಿ ಇಳಿಯಲು ತಿಳಿಸಿದ್ದಾನೆ.

ಸ್ಥಳದಲ್ಲಿ ಪೂಜೆಗಳು ನಡೆದಿರುವುದು, ಅಲ್ಲದೇ ಹಳ್ಳದೊಳಗೆ ಪೂಜಾರಿ ಒಬ್ಬ ಪೂಜೆ ನಡೆಸುತ್ತಿದ್ದಿದ್ದನ್ನು ಕಂಡ ನಾಗರಾಜನಿಗೆ ಅನುಮಾನ ಬಂದಿದೆ. ಕೂಡಲೇ ಅಲ್ಲಿಂದ ಪರಾರಿಯಾಗಿ ಅತ್ತಿಬೆಲೆ ಪೊಲೀಸ್‌ ಠಾಣೆಗೆ ಹೋಗಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ.

Advertisement

ನಾಗರಾಜು ನೀಡದ ದೂರಿನ ಮೇರೆಗೆ ಶಂಕರಪ್ಪನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಾಹಿತಿ ನೀಡದ ಪೊಲೀಸರು: ಘಟನೆ ಬಗ್ಗೆ ಮಾಹಿತಿ ನೀಡಲು ಪೊಲೀಸರು ಮೀನಮೇಷ ಏಣಿಸಿದ್ದು ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ನಡೆದಿರುವ ಘಟನೆ ಕುರಿತು ಮಾಹಿತಿ ನೀಡದೇ ಇದ್ದರಿಂದ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಜೂಜಾಟ: 23 ಆರೋಪಿಗಳ ಬಂಧನ, 62 ಸಾವಿರ ರೂ. ವಶ
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳ ವಂಗಳ ಪೊಲೀಸ್‌ ಠಾಣೆ ವ್ಯಾಪ್ತಿಯ ವಿವಿಧೆಡೆ ಜೂಜಾಟದಲ್ಲಿ ತೊಡಗಿದ್ದ 23 ಮಂದಿಯನ್ನು ಪೊಲೀಸರು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಾಮಾನ್ಯವಾಗಿರುವ ಜೂಜಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯ ಎಸ್‌ಐ ಗಜೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ 7 ಮಂದಿಯನ್ನು ಬಂಧಿಸಿ ಪಡೆದು 11,480ರೂ. ನಗದು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಬೆನಕಿನ ಮಡಗು ಗ್ರಾಮದಲ್ಲಿ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 16 ಮಂದಿಯನ್ನು ಬಂಧಿಸಿ 50,700 ರೂ. ನಗದು ವಶಕ್ಕೆ ಪಡೆದಿದ್ದಾರೆ. 

ಪ್ರತಿ ವರ್ಷ ಯುಗಾದಿ ಹಬ್ಬದ ಆದ ನಂತರದ ದಿನಗಳಲ್ಲಿ ಗ್ರಾಮಗಳಲ್ಲಿ ಜೂಜಾಟಗಳು ಹೆಚ್ಚಾಗಿ ನಡೆಯುತ್ತಿದ್ದು,
ಪೊಲೀಸ್‌ ಇಲಾಖೆ ಈ ಬಗ್ಗೆ ಈ ವೇಳೆ ಹೆಚ್ಚಿನ ನಿಗಾವಹಿಸಿ ಜೂಜಾಟಗಳನ್ನು ತಡೆಗಟ್ಟಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು

ಯುವತಿ ನಾಪತ್ತೆ: ಪತ್ತೆಗೆ ತಾಯಿ ಮನವಿ
ಹೊಸಕೋಟೆ: ತಾಲೂಕಿನ ಕೊಳತೂರಿ ನಿಂದ ಮಂಜುಳಾ ಮಗಳಾದ ಎನ್‌.ನಯನಾ (17) ಎಂಬ ಯುವತಿ ಕಾಣೆಯಾಗಿದ್ದಾಳೆ. ಮಾ.23ರಂದು ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ತನ್ನ ಅಕ್ಕ ಅಮರಾವತಮ್ಮ ಮನೆಗೆ ಹೋಗಿಬರುವುದಾಗಿ ಹೇಳಿ ಮತ್ತೆ ಹಿಂದಿರುಗಿಲ್ಲ. ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಮಂಜುಳಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಯುವತಿಯು ಸುಮಾರು 5 ಅಡಿ ಎತ್ತರವಿದ್ದು ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು ನೀಲಿ, ಹಸಿರು, ಬಿಳಿ ಬಣ್ಣದ ಚೂಡಿದಾರ್‌ ಧರಿಸಿದ್ದಾಳೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡಲು ಬರುತ್ತಿದ್ದು ಯುವತಿಯ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ಹೊಸಕೋಟೆ ಪೊಲೀಸ್‌ ಠಾಣೆ ದೂ. (080) 27931570 ಸಂಪರ್ಕಿಸಬಹುದಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next