ಕೆ.ಆರ್.ಪುರ: ಕ್ಷೇತ್ರದ ಬಸವನಪುರ, ರಾಮಮೂರ್ತಿನಗರ, ವಿಜಿನಾಪುರ ಸೇರಿ ಎಲ್ಲ 9 ವಾರ್ಡ್‌ಗಳಲ್ಲೂ ಕಸದ ಸಮಸ್ಯೆ ಬಿಗಡಾಯಿಸಿದೆ. ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಿಸಲು ಬಾರದ ಕಾರಣ ಸಾರ್ವಜನಿಕರು ರಸ್ತೆ ಬದಿ, ನಿವೇಶನಗಳಲ್ಲಿ ತ್ಯಾಜ್ಯ ಸುರಿಯುತ್ತಿದ್ದು, ಕ್ಷೇತ್ರದೆಲ್ಲೆಡೆ ಬ್ಲಾಕ್ ಸ್ಪಾರ್ಟ್‌ಗಳು ರಾರಾಜಿಸುತ್ತಿವೆ.
ಕೆ.ಆರ್.ಪುರ ಮುಖ್ಯ ರಸ್ತೆ ಬದಿಯಲ್ಲಿ ಹಾಗೂ ಬಡಾವಣೆಗಳ ಖಾಲಿ ಜಾಗಗಳಲ್ಲಿ ಬಿದ್ದಿರುವ ಕಸ ವಿಲೇವಾವಾರಿ ಆಗಿಲ್ಲ. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್, ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನದಿಂದ ದಿನಕ್ಕೆ ಕಸದ ಪ್ರಮಾಣ ಹೆಚ್ಚಾಗುತ್ತಿದ್ದು, ಕಸ ರಸ್ತೆಗೆ ಬರುತ್ತಿದೆ. ಕೆಲ ಪ್ರದೇಶಗಳು ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಪಾಲಿಕೆ ಅಧಿಕಾರಿಗಳೂ ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ವೇತನ ನೀಡುತ್ತಿಲ್ಲ: ಇನ್ನೊಂದೆಡೆ ಮೂರು ತಿಂಗಳಿಂದ ಪೌರಕಾರ್ಮಿಕರಿಗೆ ವೇತನ ನೀಡುತ್ತಿಲ್ಲ. ಹೀಗಾಗಿ ಅವರು ಕಸ ವಿಲೇವಾರಿ ಮಾಡುತ್ತಿಲ್ಲ. ಇದು ಕಸದ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ವಿಧಾನಸಭಾ ಚುನಾವಣೆ ಮುಗಿದು, ಸರ್ಕಾರ ರಚನೆಯಾದರೂ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಚುನಾವಣೆ ಗುಂಗಿನಿಂದ ಇನ್ನೂ ಹೊರಬಂದಿಲ್ಲ ಎಂದು ಮಸೀದಿ ರಸ್ತೆ ಬಡಾವಣೆ ನಿವಾಸಿ ಶ್ರೀನಿವಾಸ್ ದೂರುತ್ತಾರೆ.
ಎಲ್ಲೆಂದರಲ್ಲಿ ಕಸ ಸುರಿಯಬೇಡಿ ಎಂದರೆ ಜನ ಮೊಂಡುತನ ತೋರುತ್ತಾರೆ. ಹಗಲಲ್ಲಿ ಹೇಗೋ ನಿಯಂತ್ರಿಸಬಹುದು ಆದರೆ, ರಾತ್ರಿ ಹೊತ್ತು ಕಸ ಸುರಿಯುವವರೇ ಹೆಚ್ಚು. ವಿದ್ಯಾವಂತರೇ ಹೀಗೆ ಮಾಡುತ್ತಿದ್ದು, ಯಾರಿಗೆ ಹೇಳುವುದು ಎಂದು ತಿಳಿತಿಲ್ಲ ಎನ್ನುತ್ತಾರೆ ಸ್ಥಳಿಯ ನಿವಾಸಿ ಮಂಜುಳಾ.
ಹಿಂದೆ ಇದೇ ರೀತಿ ಕಸದ ರಾಶಿ ಬಿದ್ದಾಗ ಅದಕ್ಕೆ ಬೆಂಕಿ ಹಚ್ಚಿದ್ದರಿಂದ ದಟ್ಟ ಹೊಗೆ ಅವರಿಸಿತ್ತು. ಆಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದರು. ಈ ಬಾರಿಯೂ ಹಾಗಾಗಬಾರದೆಂದರೆ ಪಾಲಿಕೆ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.