Advertisement
ಕಳೆದ 3-4 ವರ್ಷಗಳಿಂದ ನಗರದಲ್ಲಿ ಸಕ್ರಿಯವಾಗಿದ್ದ ಕೇರಳದ 9 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 50 ಲಕ್ಷ ರೂ. ಮೌಲ್ಯದ 108 ಕೆ.ಜಿ. ಗಾಂಜಾಯಿದ್ದ 7 ಬ್ಯಾಗ್, ಎಲೆಕ್ಟ್ರಾನಿಕ್ ತಕ್ಕಡಿ, ಎರಡು ಕಾರು, 9 ಮೊಬೈಲ್, ಹತ್ತಾರು ಎಟಿಎಂ ಕಾರ್ಡ್ ಮತ್ತು ಮನೆಯ ಒಳಗಡೆ ಪಾಟ್‌ಗಳಲ್ಲಿ ಬೆಳೆಸಿದ್ದ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ.
Related Articles
Advertisement
ಬಳಿಕ ತನ್ನ ಕೊಠಡಿಯಲ್ಲಿ 5-10 ಗ್ರಾಂ ತೂಕದ ಸಣ್ಣ-ಸಣ್ಣ ಪೊಟ್ಟಣದಲ್ಲಿ ತುಂಬಿಸಿ ಈಜಿಪುರ, ಮುರುಗೇಶ್‌ಪಾಳ್ಯ, ಬಾಣಸವಾಡಿ, ಹೆಣ್ಣೂರು, ಕೆ.ಆರ್.ಪುರ, ರಾಮಮೂರ್ತಿನಗರ ಸೇರಿದಂತೆ ನಗರದ ಪ್ರತಿಷ್ಠಿತ ಕಾಲೇಜುಗಳು, ಗಾಂಜಾ ವ್ಯಸನಿಗಳಿಗೆ 500-1000 ರೂ.ವರೆಗೆ ಮಾರುತ್ತಿದ್ದ.
ಈ ಸಂಬಂಧ ಕೆಲ ತಿಂಗಳಿನಿಂದ ಆರೋಪಿಯ ಚಲನವಲನಗಳ ಬಗ್ಗೆ ನಿಗಾ ವಹಿಸಿದ್ದ ಸಿಸಿಬಿ ಪೊಲೀಸರು ಶನಿವಾರ ನಸುಕಿನ 3 ಗಂಟೆ ಸುಮಾರಿಗೆ ಮಾರುತಿ ಶಿಫ್ಟ್ ಹಾಗೂ ಇನೋವಾ ಕಾರಿನಲ್ಲಿ ಆರೋಪಿಗಳು ಮನೆ ಬಳಿ ಬಂದಾಗ ಮಹಿಳಾ ಮತ್ತು ಮಾದಕ ದ್ರವ್ಯ ವಿಭಾಗದ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ಬಂಧಿಸಿದೆ ಎಂದು ಅವರು ವಿವರಿಸಿದರು.
15 ದಿನಕ್ಕೊಮೆ ಕ್ವಿಂಟಾಲ್ ಗಾಂಜಾ: ಗಾಂಜಾ ಮಾರಾಟವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ನೈನೇಶ್ ಪ್ರತಿ 15 ದಿನಕ್ಕೊಮ್ಮೆ ಗಾಜುವಾಕದಿಂದ ತನ್ನ ಸಹಚರರೊಂದಿಗೆ ನಗರಕ್ಕೆ ಕ್ವಿಂಟಾಲ್‌ನಷ್ಟು ಗಾಂಜಾ ತರುತ್ತಿದ್ದ. ಗಾಂಜಾ ಸೊಪ್ಪನ್ನು ಚೌಕಾಕಾರದಲ್ಲಿ ಕತ್ತರಿಸಿ ಬಿಳಿ ಬಣ್ಣದ ಬ್ಯಾಗ್‌ನಲ್ಲಿ ಪ್ಯಾಕ್ ಮಾಡುತ್ತಿದ್ದರು.
ಬಳಿಕ ವಾಹನದಲ್ಲಿ ಗಾಂಜಾ ವಾಸನೆ ಬಾರದಂತೆ ಸುಗಂಧದ್ರವ್ಯಗಳನ್ನು ವಾಹನ ಹಾಗೂ ಬ್ಯಾಗ್‌ಗಳಿಗೆ ಸಿಂಪಡಿಸುತ್ತಿದ್ದರು. ಅಷ್ಟೇ ಅಲ್ಲದೇ, ಹೊಸೂರು ಚೆಕ್ ಪೋಸ್ಟ್ ಬಳಿ ಬರುತ್ತಿದ್ದಂತೆ ಟಿವಿಎಸ್ ಕ್ರಾಸ್ ರಸ್ತೆ ಮೂಲಕ ಆನೇಕಲ್, ಬೇಗೂರು ಮಾರ್ಗವಾಗಿ ಇಂದಿರಾನಗರದ ಮನೆ ತಲುಪುತ್ತಿದ್ದ. ಕಾರು ಜಪ್ತಿ ವೇಳೆ ನಾಲ್ಕೈದು ಸುಗಂಧ ದ್ರವ್ಯ ಬಾಟಲಿಗಳು ಪತ್ತೆಯಾಗಿವೆ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
1 ಕೆ.ಜಿ.ಗೆ 5 ಲಕ್ಷ ರೂ.: ಕಳೆದ ಆರೇಳು ವರ್ಷಗಳಿಂದ ದಂಧೆಯಲ್ಲಿ ನೈನೇಶ್ ಸಕ್ರಿಯವಾಗಿದ್ದಾನೆ. ಗಾಂಜಾ ಪೂರೈಸುತ್ತಿದ್ದ ಒಡಿಶಾ ಮೂಲದ ವ್ಯಕ್ತಿಗೆ ಆನ್‌ಲೈನ್‌ಲ್ಲಿ ಪ್ರತಿ ಕೆ.ಜಿಗೆ 5 ಲಕ್ಷ ರೂ. ನೀಡುತ್ತಿದ್ದ. ಒಡಿಶಾದ ಅಪರಿಚಿತ ವ್ಯಕ್ತಿ ತನ್ನ ಖಾತೆಗೆ ಹಣ ಜಮೆ ಆಗುತ್ತಿದ್ದಂತೆ ತನ್ನ ಸಹಚರರ ಮೂಲಕ ಗಾಂಜಾ ಕಳುಹಿಸುತ್ತಿದ್ದ. ಹೀಗಾಗಿ ಮೂಲ ಆರೋಪಿ ಪತ್ತೆಗೆ ತಂಡ ರಚಿಸಲಾಗಿದೆ. ಆತನ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.
ಮನೆಯಲ್ಲಿ ಗಾಂಜಾ ಗಿಡ ಪತ್ತೆ: ಎರಡು ತಿಂಗಳ ಹಿಂದೆ ಒಡಿಶಾದಿಂದ ಗಾಂಜಾ ತಂದಿದ್ದ ಆರೋಪಿ, ಗಾಂಜಾ ಬೀಜ ತಂದಿದ್ದು, ಅದನ್ನು ಮನೆಯ ಹೂಕುಂಡಗಳಲ್ಲಿ ಬೆಳೆಸುತ್ತಿದ್ದ. ಸಾಮಾನ್ಯವಾಗಿ ಗಾಂಜಾ ಗಿಡಗಳಲ್ಲಿ ಹೂ ಬಂದರೆ ಮಾತ್ರ ವಾಸನೆ ಹೊರ ಹೊಮ್ಮುತ್ತದೆ. ಹೀಗಾಗಿ ಇದನ್ನು ಒಂದು ಹಂತದವರೆಗೆ ಬೆಳೆಸಿ ಇಲ್ಲಿಂದಲೇ ನೇರವಾಗಿ ಪೂರೈಸಲು ಸಿದ್ದತೆ ನಡೆಸಿದ್ದ ಎಂದು ಅಧಿಕಾರಿ ವಿವರಿಸಿದರು.
ಮನೆ ಖಾಲಿಗೆ ಸೂಚನೆ: ನೈನೇಶ್‌ನ ಚಲನವಲನಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮನೆ ಮಾಲೀಕರು ಈ ಹಿಂದೆ ಮನೆ ಖಾಲಿ ಮಾಡುವಂತೆ ನೈನೇಶ್‌ಗೆ ಸೂಚಿಸಿದ್ದರು. ಆದರೆ, ಆರೋಪಿ ಬೆಂಗಳೂರಿನಲ್ಲಿ ನನಗೆ ಯಾರೂ ಪರಿಚಯವಿಲ್ಲ. ಏಕಾಏಕಿ ಮನೆ ಖಾಲಿ ಮಾಡಲು ಸಾಧ್ಯವಿಲ್ಲ. 3-4 ತಿಂಗಳ ಬಳಿಕ ಖಾಲಿ ಮಾಡುವುದಾಗಿ ಮನವಿ ಮಾಡಿಕೊಂಡಿದ್ದ.
ಈ ಮಧ್ಯೆ ವರ್ಷದ ಹಿಂದೆ ಇಂದಿರಾನಗರದಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಈತನ ಸಹಚರನನ್ನು ಬಂಧಿಸಲಾಗಿತ್ತು. ಆಗ ಈತ ತಲೆಮರೆಸಿಕೊಂಡಿದ್ದ. ಅಂದಿನಿಂದ ಈತನ ಬೆನ್ನು ಬಿದ್ದಿದ್ದ ತಂಡ ನೈನೇಶ್ ಮೊಬೈಲ್ ನಂಬರ್, ಮನೆ ವಿಳಾಸ ಪತ್ತೆ ಹಚ್ಚಿ ಕೊನೆಗೂ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಫುಟ್‌ಬಾಲ್ ಆಟಗಾರ: ಆರೋಪಿಗಳ ಪೈಕಿ ಶಾಫಿ ಕುಂಜು ಮರಕ್ಕರ್ ಸುಮಾರು 6.2 ಅಡಿ ಎತ್ತರವಿದ್ದು, ಫುಟ್‌ಬಾಲ್ ಆಟಗಾರ. ಕೇರಳದಲ್ಲಿ ರಾಜ್ಯ ಮಟ್ಟದ ಫುಟ್‌ಬಾಲ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾನೆ. ಈ ಮಧ್ಯೆ ನೈನೇಶ್‌ನ ಪರಿಚಯವಾಗಿ ಹಣಕ್ಕಾಗಿ ದಂಧೆಯಲ್ಲಿ ತೊಡಗಿದ್ದಾನೆ. ಈ ಹಿಂದೆ ಕ್ರೀಡಾಪಟುಗಳಿಗೂ ಗಾಂಜಾ ಮಾರಾಟ ಮಾಡಿರುವ ಸಾಧ್ಯತೆ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
1 ಲಕ್ಷ ರೂ. ನಗದು ಬಹುಮಾನ: ಮಾದಕ ವಸ್ತು ಮಾರಾಟ ಜಾಲ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ತಂಡಕ್ಕೆ ಆಯುಕ್ತ ಟಿ.ಸುನಿಲ್ ಕುಮಾರ್ ಒಂದು ಲಕ್ಷ ರೂ. ಬಹುಮಾನ ಘೋಷಿಸಿದರು. ಕಳೆದ 8 ತಿಂಗಳಿಂದ 154 ಪ್ರಕರಣ ಪತ್ತೆ ಹಚ್ಚಿ 500ಕ್ಕಿಂತ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಟಿ.ಸುನೀಲ್ ಕುಮಾರ್ ಹೇಳಿದರು.
ನಕ್ಸಲ್ ಸಂಪರ್ಕ?: ಆರೋಪಿ ನೈನೇಶ್‌ಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯ ನಕ್ಸಲ್ ಪೀಡಿತ ಪ್ರದೇಶದಲ್ಲಿರುವುದರಿಂದ ಈತನಿಗೂ ನಕ್ಸಲ್ ಸಂಪರ್ಕವಿರುವ ಸಾಧ್ಯತೆಯಿದೆ. ಗಾಂಜಾ ಪೂರೈಸುತ್ತಿದ್ದ ವ್ಯಕ್ತಿ ನಕ್ಸಲೀಯನಾಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ನೆರವು ಕೋರಲಾಗುವುದು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.