ಭೇರ್ಯ: ತಾಲೂಕಿನ ಒಕ್ಕಲಿಗ ಅಧಿಕಾರಿಗಳನ್ನು ಉದ್ದೇಶ ಪೂರ್ವಕವಾಗಿ ಚುನಾವಣೆ ನೆಪದಲ್ಲಿ ವರ್ಗಾವಣೆ ಮಾಡುವಂತೆ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾಧಿಕಾರಿಗಳಿಗೆ ದೂರು ನೀಡಿರುವುದು ಸರಿಯಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಹೊಸ ಅಗ್ರಹಾರ ಹೋಬಳಿ ಒಕ್ಕಲಿಗ ಯುವ ಮುಖಂಡ ಅನೀಫ್ಗೌಡ ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸಾ.ರಾ.ಮಹೇಶ್ ಸಂಬಂಧಿಕರು ಎಂದು ತಾಲೂಕಿನ ಒಕ್ಕಲಿಗ ಅಧಿಕಾರಿಗಳಿಗೆ ಚುನಾವಣಾ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಯಾವ ಒಕ್ಕಲಿಗ ಅಧಿಕಾರಿಗಳೂ ಶಾಸಕ ಸಾ.ರಾ.ಮಹೇಶ್ ಸಂಬಂಧಿಕರಲ್ಲ. ಹಾಗಾದರೆ ನೀರಾವರಿ ಇಲಾಖೆ ಸವಡೆ ಶಿವಣ್ಣನಾಯಕ ಶಾಸಕರ ಸಂಬಂಧಿಕರೆ ಎಂದು ಪ್ರಶ್ನಿಶಿಸಿದರು.
ಕಳೆದ ಹತ್ತು ವರ್ಷಗಳಿಂದ ಒಕ್ಕಲಿಗ ಅಧಿಕಾರಿಗಳು ಈ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದೀರಿ. ಆದರೆ ನಿಮ್ಮ ಜಾತಿಗೆ ಸೇರಿದ ಅಧಿಕಾರಿಗಳು 15-20 ವರ್ಷಗಳಿಂದ ತಾಲೂಕು ಕಚೇರಿ, ತಾಪಂ, ತಾಲೂಕು ಆಸ್ಪತ್ರೆ ಮತ್ತಿತರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೇನು ಉತ್ತರ ಕೋಡುತ್ತೀರಿ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.
ತಾಲೂಕಿನಲ್ಲಿ ಈ ಬಾರಿ ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಕಾಂಗ್ರೆಸ್ಸಿಗರು ಸ್ವಜಾತಿ ಅಧಿಕಾರಿಗಳನ್ನು ಚುನಾವಣೆಗೆ ಮೊದಲೇ ವರ್ಗಾವಣೆ ಮಾಡಿಸಿಕೊಂಡಿರುವುದು ತಾಲೂಕಿನ ಜನತೆಗೆ ಗೊತ್ತಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಮಟ್ಟ ಹಾಕಲೇಬೇಕು ಎಂದು ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದೀರಿ. ಅಲ್ಲದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಪೊಲೀಸ್ ವಾಹನದಲ್ಲಿ ಚುನಾವಣೆಗೆ ಹಣ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.
23ಕ್ಕೆ ನಾಮಪತ್ರ ಸಲ್ಲಿಕೆ: ಏ.23ರಂದು ಬೆಳಗ್ಗೆ 11 ಗಂಟೆಗೆ ಶಾಸಕ ಸಾ.ರಾ.ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಜೆಡಿಎಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಜಿ ಸಂಸದ ಎಚ್.ವಿಶ್ವನಾಥ್, ಶಾಸಕ ಜಿ.ಟಿ.ದೇವೇಗೌಡ ಹಾಗೂ ಜಿಲ್ಲೆ ಮತ್ತು
ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷರು, ಯುವ ಮುಖಂಡರು, ಜಿಪಂ ಮತ್ತು ತಾಪಂ ಸದಸ್ಯರು, ಕಾರ್ಯಕರ್ತರು, ಸಾ.ರಾ.ಮಹೇಶ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ತೋಪಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಒಕ್ಕಲಿಗ ಮುಖಂಡ ಮುದುಗುಪ್ಪೆ ಮಂಜೇಗೌಡ, ನಾಯಕ ಸಮಾಜದ ಅಣ್ಣಾಜಿ ಶಿವಕುಮಾರ್, ನಿಂಗನಾಯಕ, ದಲಿತ ಮುಖಂಡ ಪಾಪಯ್ಯ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಬಿ.ಸಿ.ಜಯರಾಂ, ಸವಿತಾ ಸಮಾಜ ಮುಖಂಡ ಚಂದ್ರಶೇಖರ್, ಜುನೇದ್‌ಬೇಗ್ ಇತರರಿದ್ದರು.