ಆಲಮಟ್ಟಿ: ಪಟ್ಟಣವು ವಿವಿಧ ಉದ್ಯಾನಗಳು, ಬೃಹತ್ ಜಲಾಶಯ ಹೊಂದಿ ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವತ್ತ ದಾಪುಗಾಲಿಟ್ಟಿದೆ. ಆಲಮಟ್ಟಿ ಎಂದೊಡನೆ ಕೇವಲ ಜಲಾಶಯ ಎಂದುಕೊಂಡವರು ಒಮ್ಮೆ ಆಲಮಟ್ಟಿಗೆ ಭೇಟಿ ನೀಡಿದರೆ ಸಾಕು ಮತ್ತೂಮ್ಮೆ ತಮ್ಮ ಕುಟುಂಬ ಸಮೇತರಾಗಿ ಹಾಗೂ ಗೆಳೆಯರೊಂದಿಗೆ ಭೇಟಿ ನೀಡುವಂತೆ ಆಗುತ್ತದೆ. ಹಸಿರಿನಿಂದ ಕಂಗೊಳಿಸುತ್ತಿರುವ ಉದ್ಯಾನಗಳು, ವಿವಿಧ ಮಾದರಿ ಕಟ್ಟಡಗಳು, ಸಂಗೀತ ನೃತ್ಯ ಕಾರಂಜಿ, ಕೃತಕ ಜಲಪಾತಗಳು, ಜಲಾಶಯದಿಂದ ಭೋರ್ಗರೆಯುತ್ತ ಬೀಳುವ ಹಾಲಿನ ನೊರೆಯಂತೆ ಕಾಣುವ ಜಲಧಾರೆ, ಅಧ್ಯಾತ್ಮಿಕ ಸಾರುವ ಮೂರ್ತಿಗಳು, ಯುವ ಪೀಳಿಗೆಯನ್ನು ತನ್ನಡೆಗೆ ಸೆಳೆಯುವ ಕಲಾಕೃತಿಗಳು ಹೀಗೆ ಒಂದರ ನಂತರ ಒಂದು ಗಮನ ಸೆಳೆಯುವ ಅಂಶಗಳು ಎಲ್ಲ ವಯೋಮಾನದವರನ್ನೂ ತನ್ನೆಡೆ ಸಾವಿರಾರು ಸಂಖ್ಯೆಯಲ್ಲಿ ಸೆಳೆಯುತ್ತಿದೆ.
ಲವ-ಕುಶ ಉದ್ಯಾನ: ರಾಮಾಯಣದಲ್ಲಿ ಬರುವ ಲವ-ಕುಶರ ಜನನ, ಸಕಲ ವಿದ್ಯೆ, ಲವ ಕುಶ ಸಹೋದರರು ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿ ಹನುಮಂತ, ವಾನರ ಸೇನೆ, ಶತೃಘ್ನರೊಂದಿಗೆ ಯುದ್ಧವಲ್ಲದೇ ತಮ್ಮ ತಂದೆ ರಾಮನೊಂದಿಗೂ ಘೋರ ಯುದ್ದ ನಡೆದಿರುವ ಸನ್ನಿವೇಶದ ಕಲಾಕೃತಿಗಳು ಹಾಗೂ ವಾಲುವ ಹಸಿರು ಗೋಡೆ ಗಮನ ಸೆಳೆಯುತ್ತಿದೆ.
ಗೋಪಾಲಕೃಷ್ಣ ಉದ್ಯಾನ: ಶ್ರೀಕೃಷ್ಣನ ಜನನ ಹಾಗೂ ಆತನ ಬಾಲಲೀಲೆ, ಮಥುರೆ ಪಟ್ಟಣ, ಗೋವುಗಳ ಪಾಲನೆ ಮತ್ತು ಜಲ ಕನ್ಯೆಯರೊಂದಿಗೆ ಚೆಲ್ಲಾಟ ಹೀಗೆ ಗೋಪಾಲಕೃಷ್ಣನ ಲೀಲೆಗಳನ್ನು ಬಿಂಬಿಸುವ ಕಲಾಕೃತಿಗಳು ಜನಮನ ಸೂರೆಗೊಳ್ಳುತ್ತಿವೆ.
ರಾಕ್ ಉದ್ಯಾನ: ಈ ಉದ್ಯಾನದಲ್ಲಿ ಹೆಸರೇ ಸೂಚಿಸುವಂತೆ ವಿವಿಧ ವನ್ಯ ಮೃಗಗಳು, ಜಲಚರಗಳು, ಸರಿಸೃಪಗಳು, ಉಭಯ ವಾಸಿಗಳು, ಗ್ರಾಮೀಣ ಜಾತ್ರೆ ಸೊಗಡು, ಬುಡಕಟ್ಟು ಜನಾಂಗದವರ ಜೀವನ ಶೈಲಿ, ಹೀಗೆ ಹಲವಾರು ವಿಶೇಷಗಳೊಂದಿಗೆ ಮಧ್ಯ ಭಾಗದಲ್ಲಿ ಸೂರ್ಯ ಪಾರ್ಕ್ ನಿರ್ಮಿಸಿ ಇದರಲ್ಲಿ ರಾಷ್ಟ್ರೀಯ ನಕ್ಷೆ, ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂವು, ಹಣ್ಣುಗಳ ಕೃತಿ ರಚಿಸಲಾಗಿದೆ. ದೇಶದಲ್ಲಿ ಸರ್ವ ಜನಾಂಗ ಹಾಗೂ ಸರ್ವ ವಯೋಮಾನದವರು, ಲಿಂಗಭೇದವಿಲ್ಲದೇ ಒಂದಾಗಿರುವುದರಿಂದ ಸುಂದರ ಭಾರತ ನಿರ್ಮಾಣವಾಗಿದೆ ಎನ್ನುವುದರ ಸಂಕೇತವಾಗಿ ನಕ್ಷೆ ಸುತ್ತಲೂ ನಿಂತಿರುವ ಮಾನವ ಕೃತಿಗಳು ಭಾವೈಕ್ಯ ಸಂಕೇತವಾಗಿವೆ. ರಾಷ್ಟ್ರೀಯ ನಕ್ಷೆಯಲ್ಲಿ ತ್ರಿವರ್ಣ ಧ್ವಜ ನಿತ್ಯ ಪ್ರವಾಸಿಗರನ್ನು
ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಪುಟಾಣಿ ರೈಲು: ರಾಕ್ ಉದ್ಯಾನದಲ್ಲಿ 46.82 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಾಲಿತ ಪುಟಾಣಿ ರೈಲಿಗೆ ಸುಮಾರು 1.5 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸಲಾಗಿದೆ. ರೈಲು ಎಂಜಿನ್‌ನೊಂದಿಗೆ ನಾಲ್ಕು ಬೋಗಿ ಒಳಗೊಂಡಿದೆ. ಒಂದು ಬೋಗಿಯಲ್ಲಿ ನಾಲ್ಕು ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪ್ರವಾಸಿಗರನ್ನು ಉದ್ಯಾನದಲ್ಲಿ ಕುಟುಂಬ ಪರಿವಾರದೊಡನೆ ಸುತ್ತಾಡಿಸಿಕೊಂಡು ಬರಲು ಪುಟಾಣಿ ರೈಲು ಸಜ್ಜಾಗಿ ನಿಂತಿದೆ.
ರಾಕ್ ಉದ್ಯಾನದಲ್ಲಿ ಪ್ರವೇಶಿಸಿದೊಡನೆ ಎದುರಿನಲ್ಲಿ ಕೃತಕ ಕೆರೆ ನಿರ್ಮಿಸಲಾಗಿದ್ದು ಇದರಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ದೋಣಿ ವಿಹಾರ ಕೇಂದ್ರದ ಬಳಿ ನಿರ್ಮಿಸಲಾಗಿರುವ ಚಿಲ್ಡ್ರನ್ ಪಾರ್ಕ್‌ನಲ್ಲಿರುವ ಮಕ್ಕಳ ಆಟಿಕೆ ವಸ್ತುಗಳು ಗಮನ ಸೆಳೆಯುತ್ತಿದೆ. ಇದರಿಂದ ಆಟಕ್ಕೆ ಹೋದ ಮಕ್ಕಳು ಪಾಲಕರು ಗದರುವವರೆಗೂ ಪಾರ್ಕಿನಿಂದ ಹೊರ ಬರುವುದೇ ಇಲ್ಲ. ಅಷ್ಟೊಂದು ನವೀನ ಸಲಕರಣೆಗಳನ್ನು ಕೃಷ್ಣಾ ಭಾಗ್ಯ ಜಲ ನಿಗಮ ಅಳವಡಿಸಿದೆ.
ಆಲಮಟ್ಟಿಯಲ್ಲಿರುವ ಎಲ್ಲ ಉದ್ಯಾನಗಳಲ್ಲಿರುವ ಬಹುತೇಕ ಸಸ್ಯಗಳು ಔಷಧಿಯ ಗುಣಗಳನ್ನು ಹೊಂದಿದ್ದು ಆಯುರ್ವೇದ ಪಂಡಿತರನ್ನು ತನ್ನಡೆಗೆ ಸೆಳೆಯುತ್ತಿದೆ. ಮೊಘಲ್ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಶಿವಲಿಂಗ ಪೂಜಾನಿರತ ಆನೆ, ಹಸಿರು ಕರಡಿ, ಮೊಲ, ಆನೆ, ಹೀಗೆ ಹಲವಾರು ಪ್ರಾಣಿಗಳು ಸಸ್ಯದಲ್ಲಿಯೇ ಗಮನ ಸೆಳೆಯುತ್ತಿವೆ.
ಸಂಗೀತ ನೃತ್ಯ ಕಾರಂಜಿ: ಸಂಜೆ ವೇಳೆಯಲ್ಲಿ ಆರಂಭವಾಗುವ ಸಂಗೀತ ನೃತ್ಯ ಕಾರಂಜಿ ಎಲ್ಲ ವಯೋಮಾನದವರನ್ನೂ ವಿವಿಧ ಸಂಗೀತ ಹಾಗೂ ಗೀತೆಗಳಿಂದ ಆಕರ್ಷಿಸುತ್ತಿದೆ. ಪ್ರವಾಸಿಗರಿಗೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಲಭ್ಯಗಳೂ ಆಲಮಟ್ಟಿಯಲ್ಲಿದ್ದು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಶಂಕರ ಜಲ್ಲಿ