Advertisement
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ನಗರದ ಸ್ವರ್ಣಸಂದ್ರ ಬಡಾವಣೆಗೆ ಹೊಂದಿಕೊಂಡಿರುವ ವೀರಯೋಧನ ಉದ್ಯಾನವನ ಕಳೆದ ಇಪ್ಪತ್ತು ವರ್ಷಗಳಿಂದ ಅಭಿವೃದ್ಧಿ ಭಾಗ್ಯ ಕಂಡಿಲ್ಲ. ಯೋಧರಿಗಾಗಿ ಯಾವುದೇ ಸ್ಮಾರಕವೂ ನಿರ್ಮಾಣವಾಗಿಲ್ಲ. ಯೋಧರ ಸಮಾಧಿಯನ್ನು ಗ್ರಾನೈಟ್ ಶಿಲೆಗಳಿಂದ ಅಲಂಕರಿಸಿರುವುದನ್ನು ಬಿಟ್ಟರೆ ಉಳಿದಿದ್ದೆಲ್ಲವೂ ಗೌಣವಾಗಿದೆ.
Related Articles
Advertisement
ನಾಮಫಲಕವೂ ಅಳವಡಿಸಿಲ್ಲ: ಈ ಉದ್ಯಾನವನಕ್ಕೆ ಬಿ.ಕೆ.ಸುಧೀರ್ ಉದ್ಯಾನವೆಂದು ಹೆಸರಿಡಲಾಗಿದ್ದರೂ ಅದನ್ನು ಗುರುತಿಸುವುದಕ್ಕೆ ಉದ್ಯಾನದ ಯಾವುದೇ ಭಾಗದಲ್ಲೂ ಒಂದೇ ಒಂದು ನಾಮಫಲಕವನ್ನೂ ಅಳವಡಿಸಿಲ್ಲ. ಸಮಾಧಿ ಸ್ಥಳಕ್ಕೆ ನೆರಳಿನ ವ್ಯವಸ್ಥೆಯನ್ನು ಮಾಡುವ ಆಸಕ್ತಿಯೂ ಅಧಿಕಾರಿ ವರ್ಗಕ್ಕಿಲ್ಲ. ಬಿಸಿಲು-ಮಳೆ-ಗಾಳಿಗೆ ಎನ್ನದೆ ವೀರಯೋಧರ ಸಮಾಧಿಗಳು ಮೈಯೊಡ್ಡಿ ನಿಂತಿವೆ. ಸಮಾಧಿಗಳ ಮೇಲೆ ಕಸ-ಕಡ್ಡಿ ಬಿದ್ದು ಧೂಳು ಮೆತ್ತಿಕೊಂಡು ಕಳಾಹೀನವಾಗಿ ನಾಮಕಾವಸ್ಥೆಯಾಗಷ್ಟೇ ಉಳಿದುಕೊಂಡಿವೆ.
ಅಭಿವೃದ್ಧಿ ನಿರ್ಲಕ್ಷ್ಯ: ಉದ್ಯಾನವನದಲ್ಲಿ ಸಮೃದ್ಧವಾಗಿ ಹಸಿರು ಗಿಡಗಳನ್ನು ಬೆಳೆಸುವುದಕ್ಕೆ ಅವಕಾಶಗಳಿವೆ. ಹುತಾತ್ಮ ಸ್ಮಾರಕದ ಮಾದರಿಯಲ್ಲೇ ಇಲ್ಲಿಯೂ ಸ್ಮಾರಕ ನಿರ್ಮಾಣ ಮಾಡಿ ಅವರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಯಾರಿಂದಲೂ ನಡೆಯುತ್ತಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಉದ್ಯಾನವನವಿದ್ದು ಈ ಮಾರ್ಗವಾಗಿ ಹಾದು ಹೋಗುವಾಗ ಹೊರ ಜಿಲ್ಲೆಯವರಿಗೆ ಜಿಲ್ಲೆಯ ವೀರಯೋಧರನ್ನು ನೆನಪಿಸುವ, ಸ್ಮರಿಸುವಂತೆ ಮಾಡುವ ಅವಕಾಶವಿದ್ದರೂ ಯಾರಿಗೂ ಆ ಬಗ್ಗೆ ಆಸಕ್ತಿಯೇ ಇಲ್ಲ.
ಉದ್ಯಾನವನದಲ್ಲಿ ನೆಟ್ಟಿದ್ದ ಗಿಡಗಳು ನೀರಿಲ್ಲದೆ ನಿಧಾನವಾಗಿ ಮೇಲೇಳುತ್ತಿವೆ. ನೆಲಕ್ಕೆ ಹಸಿರು ಹುಲ್ಲಿನ ಹೊದಿಕೆ ಇಲ್ಲ. ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸಿ ಉದ್ಯಾನವನ್ನು ಸುಂದರಗೊಳಿಸಿಲ್ಲ. ರಾತ್ರಿ ವೇಳೆ ವಿದ್ಯುತ್ ದೀಪಗಳಿಲ್ಲದೆ ಕಾರ್ಗತ್ತಲು ಆವರಿಸಿರುತ್ತದೆ. ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಯಾಗಿದೆ.
ಕಾಂಪೌಂಡ್ ನಿರ್ಮಿಸಿಲ್ಲ: ಈ ಉದ್ಯಾನದ ಸುತ್ತ ಕಾಂಪೌಂಡ್ ಹಾಗೂ ಗೇಟ್ ಅಳವಡಿಸಿ ಒಳಗೆ ಕೂರುವುದಕ್ಕೆ ಕಲ್ಲಿನ ಬೆಂಚುಗಳನ್ನು ಹಾಕಲಾಗಿದೆ. ಮಕ್ಕಳ ಆಟಿಕೆ ಸಾಮಾನುಗಳನ್ನು ಅಲ್ಲಿ ಜೋಡಿಸಲಾಗಿದೆ. ಆದರೆ, ವೀರಯೋಧರ ಸಮಾಧಿಗಳನ್ನು ಆಕರ್ಷಣೀಯಗೊಳಿಸುವ ಅವುಗಳನ್ನು ಹುತಾತ್ಮ ಸ್ಮಾರಕವಾಗಿಸುವ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲ.
ಈಗ ಹುತಾತ್ಮ ಗುಡಿಗೆರೆ ಕಾಲೋನಿಯ ಹೆಚ್.ಗುರು ಸರದಿ. ಮದ್ದೂರು-ಮಳವಳ್ಳಿ ರಸ್ತೆಯ ಮೆಳ್ಳಹಳ್ಳಿ ಪಕ್ಕದ ಸರ್ಕಾರಿ ಜಾಗದಲ್ಲಿ ಹೆಚ್.ಗುರು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಸಮಾಧಿ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲು ಉದ್ದೇಶಿಸಲಾಗಿದೆ. ಸ್ಮಾರಕದ ರೂಪು-ರೇಷೆ ಯಾವ ರೀತಿ ಇರಲಿದೆ, ಯಾವ ರೀತಿ ನಿರ್ಮಾಣವಾಗಲಿದೆ ಎಂಬುದರ ಚಿತ್ರಣವಂತೂ ಇಲ್ಲ. ಆದರೆ, ವೀರಯೋಧ ಬಿ.ಕೆ.ಸುಧೀರ್ ಉದ್ಯಾನದ ಮಾದರಿಯಲ್ಲಿ ನೆಪಮಾತ್ರಕ್ಕೆ ಸಮಾಧಿ ಸ್ಥಳ ಉಳಿಯುವಂತಾಗದಿರಲಿ ಎನ್ನುವುದು ಎಲ್ಲರ ಆಶಯವಾಗಿದೆ.
* ಮಂಡ್ಯ ಮಂಜುನಾಥ್