Advertisement

ಧರ್ಮಸ್ಥಳ: ಜೈನ ಮುನಿ ಸಮಾಧಿ ಮರಣ

01:00 AM Feb 20, 2019 | Harsha Rao |

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಬಳಿ ಮುನಿಗಳು ವಾಸ್ತವ್ಯ ಇದ್ದ ಕುಟೀರದಲ್ಲಿ ನಿಸ್ಪೃಹ ಸಾಗರ್‌ ಮುನಿ ಮಹಾರಾಜ್‌ (75) ಅವರು ಮಂಗಳವಾರ ಬೆಳಗ್ಗೆ ಏಳು ಗಂಟೆಗೆ ಸಮಾಧಿ ಮರಣ ಹೊಂದಿದರು.

Advertisement

ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂಪನ್ನ ದಿನವಾದ ಫೆ. 18ರಂದು ಅವರು ಸಲ್ಲೇಖನ ವೃತ ಕೈಗೊಂಡಿದ್ದರು. ಮರುದಿನ ಅವರು ಸಮಾಧಿ ಮರಣ ಹೊಂದಿದ್ದಾರೆ.

ಅಭಿಷೇಕದಲ್ಲಿ ಭಾಗಿ
ಮಹಾಮಸ್ತಕಾಭಿಷೇಕದಲ್ಲಿ ಪಾವನ ಸಾನ್ನಿಧ್ಯ ನೀಡಲು ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರ ಸಂಘದಲ್ಲಿ ಪೂಜ್ಯ ನಿಸ್ಪೃಹ ಸಾಗರ ಮುನಿ ಮಹಾರಾಜರು ಫೆ. 3ರಂದು ಧರ್ಮಸ್ಥಳ ಪುರಪ್ರವೇಶ ಮಾಡಿದ್ದರು. ಫೆ. 16, 17 ಮತ್ತು 18ರಂದು ನಡೆದ ಬಾಹುಬಲಿ ಮಸ್ತಕಾಭಿಷೇಕವನ್ನೂ ವೀಕ್ಷಿಸಿದ್ದರು. ಧರ್ಮಸ್ಥಳದಲ್ಲಿ ಬಸದಿ
ಬಳಿ ಇರುವ ಕುಟೀರದಲ್ಲಿ ಮುನಿ ಸಂಘದೊಂದಿಗೆ ಅವರು ಜಪ, ತಪ, ಧ್ಯಾನ, ಸ್ವಾಧ್ಯಾಯದಲ್ಲಿ ನಿರತರಾಗಿ ದ್ದರು. ಸೋಮವಾರ ಸಂಜೆ ಸಲ್ಲೇಖನ ವ್ರತಧಾರಣೆ ಮಾಡಿ, ಮಂಗಳವಾರ ಬೆಳಗ್ಗೆ  ಏಳು ಗಂಟೆಗೆ ಸಮಾಧಿ ಮರಣ ಹೊಂದಿದರು.
ಸಮಾಧಿ ಮರಣದ ಹಿನ್ನೆಲೆಯಲ್ಲಿ ಮುನಿ ಸಂಘದವರೆಲ್ಲರೂ ಹಾಗೂ ಮಾತಾಜಿಯವರು ಮಂಗಳ
ವಾರ ಉಪವಾಸ ವ್ರತ ಆಚರಿಸಿದರು. ಜಪ, ತಪ, ಹಾಗೂ ಧ್ಯಾನಗಳಲ್ಲಿ ನಿರತರಾದರು.
ಕ್ಷೇತ್ರದ ವತಿಯಿಂದ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, 
ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಡಾ| ಬಿ. ಯಶೋವರ್ಮ ಅವರು ಅಂತಿಮ ಗೌರವ ಸಲ್ಲಿಸಿದರು.

ಹೀಗೆ ನಡೆಯಿತು ಅಂತ್ಯವಿಧಿ…
ಸಕಲ ವೈಭವದ ಮೆರವಣಿಗೆಯೊಂದಿಗೆ ಪಂಚನಮಸ್ಕಾರ ಮಂತ್ರ ಪಠಣ ಮಾಡುತ್ತಾ, ಕುಟೀರದಿಂದ ಅಲಂಕೃತ ಆಸನದಲ್ಲಿ ಕೊಂಡು ಹೋಗಿ ಬಸದಿ ಬಳಿ ಇರುವ ಜಾಗದಲ್ಲಿ ತ್ರಿಕೋನಾಕಾರದಲ್ಲಿ ಚಿತೆಯನ್ನು ರೂಪಿಸಿ, ಮೃತ ದೇಹವನ್ನು ಪದ್ಮಾಸನದಲ್ಲಿ ಕುಳ್ಳಿರಿಸಿ, ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

ಮುನಿಗಳು ಮೃತದೇಹಕ್ಕೆ ನೀರು, ಹಾಲು, ತುಪ್ಪ ಮತ್ತು ಸಕ್ಕರೆಯ ಸೇಚನ ದೊಂದಿಗೆ ಅಭಿಷೇಕ ಮಾಡಿದರು. ಎಲ್ಲ ಮುನಿಗಳು ಮತ್ತು ಮಾತಾಜಿಯವರು ಪಂಚ ನಮಸ್ಕಾರ ಮಂತ್ರ ಪಠಣದೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ನಿಸ್ಪೃಹ ಸಾಗರ ಮುನಿ ಮಹಾರಾಜರ ಪೂರ್ವಾಶ್ರಮದ ಮಕ್ಕಳಾದ ಸಂಜಯ ಕುಮಾರ್‌ ಮತ್ತು ಪುನೀತ್‌ಕುಮಾರ್‌ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

Advertisement

ಚಿತೆಗೆ ಗಂಧ ಮತ್ತು ಚಂದನದ ಕೊರಡುಗಳನ್ನು ಬಳಸಿ ಮೇಲೆ ತುಪ್ಪ ಸುರಿಯಲಾಯಿತು. ಚಿತೆಯ ಸನಿಹದಲ್ಲಿ ಮುನಿ ಸಂಘದವರು ಮತ್ತು ಮಾತಾಜಿಯವರು ಸಾಮೂಹಿಕ ಪ್ರತಿಕ್ರಮಣ ಮಾಡಿದರು. ಪ್ರಾಯಶ್ಚಿತ್ತ ಮಾಡಿಕೊಳ್ಳುವುದಕ್ಕೆ ಪ್ರತಿಕ್ರಮಣ ಎನ್ನಲಾಗುತ್ತಿದ್ದು, ಮುನಿಗಳು ಪ್ರತಿ ದಿನ ಮೂರು ಬಾರಿ ಪ್ರತಿಕ್ರಮಣ ಮಾಡುತ್ತಾರೆ.

ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ ಮುನಿ ಮಹಾರಾಜರು  ಹಾಗೂ ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜ್‌ ಅಂತ್ಯ ಸಂಸ್ಕಾರದ ನೇತೃತ ವಹಿಸಿದ್ದರು.

ಏನಿದು ಸಲ್ಲೇಖನ?
ಬದುಕಿನ ಕೊನೆ ಸಮೀಪಿಸುತ್ತಿದೆ ಎಂದು ಅರಿವಾದಾಗ ಜೈನ ಮುನಿಗಳು ಉಪವಾಸ ಕೈಗೊಂಡು ದೇಹತ್ಯಾಗ ಮಾಡುವುದೇ ಸಲ್ಲೇಖನ ವ್ರತ. ಮರಣವನ್ನು ದುಃಖಕರ ಸಂಗತಿ ಎಂದು ಭಾವಿಸದೆ ಸಾವನ್ನೇ ಮಹಾನವಮಿ ಎಂದು ಭಾವಿಸಿ, ಮಹೋತ್ಸವವಾಗಿ ಆಚರಿಸುವುದು ಜೈನರ ಸಂಪ್ರದಾಯ. ಅಂದರೆ ಸಾವು ದೇಹಕ್ಕೆ ಮಾತ್ರ; ಆತ್ಮನಿಗೆ ಸಾವಿಲ್ಲ. ದೇಹ ನಶ್ವರ; ಆತ್ಮ ಶಾಶ್ವತ ಎಂಬ ನಂಬಿಕೆ ಅವರದು.

ಮುನಿಗಳ ಪರಿಚಯ
ನಿಸ್ಪೃಹ ಸಾಗರ ಮುನಿ ಮಹಾರಾಜ್‌ ಮೂಲತಃ ರಾಜಸ್ಥಾನದ ಕಿಶನ್‌ಗಢದವರು. ಪೂರ್ವಾಶ್ರಮದ ಹೆಸರು ಪ್ರೇಮಚಂದ್‌ ಪಹಾಡಿಯಾ. 

ಎಸೆಸೆಲ್ಸಿ ಶಿಕ್ಷಣ ಪಡೆದ ಅವರಿಗೆ ಬಾಲ್ಯದಿಂದಲೇ ತಪಸ್ಸು, ಧ್ಯಾನ, ಧರ್ಮ, ಅಹಿಂಸೆ, ಸ್ವಾಧ್ಯಾಯದಲ್ಲಿ ವಿಶೇಷ ಆಸಕ್ತಿ ಇತ್ತು. 2009ರಲ್ಲಿ ಜೈನರ ಪವಿತ್ರ ತೀರ್ಥಕ್ಷೇತ್ರ ಚಂಪಾಪುರಿಯಲ್ಲಿ ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರಿಂದ ಮುನಿ ದೀಕ್ಷೆ ಪಡೆದಿದ್ದು, ಬಳಿಕ ಮುನಿ ಸಂಘದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next