Advertisement

ಪಂಚಪೀಠಗಳು ಒಂದಾಗುವ ಕಾಲ ಸನ್ನಿಹಿತ

04:24 PM Jul 12, 2022 | Team Udayavani |

ದಾವಣಗೆರೆ: ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿದಂತೆ ಧರ್ಮಸಂಸತ್‌ ಎಂಬ ಸಂವಿಧಾನದ ಆಶಯದಂತೆ ಪಂಚಪೀಠಗಳು ಒಂದಾಗಲಿವೆ ಎಂದು ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಭಗವತ್ಪಾದರು ಹೇಳಿದರು.

Advertisement

ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ನಿವಾಸದಲ್ಲಿ ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಹಮ್ಮಿಕೊಂಡಿದ್ದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಹಳ ದಿನಗಳಿಂದಲೂ ಪಂಚಪೀಠಗಳು ಒಂದಾಗಬೇಕು ಎಂಬುದು ಭಕ್ತರ ಆಶಯವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪನವರು ಸಹ ಅದೇ ಆಶಯ ವ್ಯಕ್ತಪಡಿಸಿದ್ದಾರೆ.

ಪಂಚಪೀಠಗಳು ಒಂದಾಗಲು ನಮ್ಮ ಅಭ್ಯಂತರವೇನೂ ಇಲ್ಲ. ಶಾಮನೂರು ಶಿವಶಂಕರಪ್ಪನವರೇ ಮುಂದಾಗಿ ಧರ್ಮಸಂಸತ್‌ ನಂತೆ ಕಾರ್ಯಕ್ರಮ ನಡೆಸುವುದಾದರೆ ನಾವು ಈಗಲೇ ಸಿದ್ಧ ಎಂದರು. ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ನಂತರ ಸಮಾಜ ಉನ್ನತ ಮಟ್ಟಕ್ಕೆ ತಲುಪಿದೆ.

ದಾವಣಗೆರೆಯಲ್ಲೂ ಸಹ ಕೇದಾರ ಮಾದರಿಯಲ್ಲಿ ಭವ್ಯ ಮಂದಿರವನ್ನು ನಿರ್ಮಿಸುವ ಮೂಲಕ ದಕ್ಷಿಣ ಕೇದಾರವನ್ನಾಗಿ ಮಾಡಲಾಗುವುದು. ಶಾಮನೂರು ಶಿವಶಂಕರಪ್ಪ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ನೀಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲೂ ಅವರ ಸಹಕಾರ ಹೀಗೆಯೇ ಇರಲಿ ಎಂದರು.

ಮುಂದಿನ ಆಷಾಢ ಮಾಸದಲ್ಲಿ ಮಲ್ಲಿಕಾರ್ಜುನ್‌ ಅವರ ನಿವಾಸದಲ್ಲೇ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯನ್ನು ಹಮ್ಮಿಕೊಳ್ಳುವ ಸಂಕಲ್ಪ ಮಾಡಲಾಗಿದೆ. ಅದಕ್ಕೂ ಮುನ್ನ ಮಲ್ಲಿಕಾರ್ಜುನ್‌ ಅವರ ವಿಜಯೋತ್ಸವ ನಡೆಯಲಿ. ಶಾಮನೂರು ಕುಟುಂಬವೂ ಹಿಮಾಲಯದೆತ್ತರಕ್ಕೆ ಬೆಳಗಲಿ ಎಂದು ಆಶೀರ್ವದಿಸಿದರು. ಮಾಜಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಮಾತನಾಡಿ, ಪಂಚಪೀಠದ ಎಲ್ಲಾ ಮಠಗಳು ದಾವಣಗೆರೆಯಲ್ಲಿ ಅಸ್ತಿತ್ವವನ್ನು ಹೊಂದಿವೆ. ಇದೀಗ ಕೇದಾರ ಪೀಠವೂ ಸಹ ಭವ್ಯ ಮಂದಿರವನ್ನು ನಿರ್ಮಿಸುತ್ತಿದೆ ಎಂದರು. ಕಣ್ವಕುಪ್ಪಿ ಗವಿಮಠದ ಡಾ| ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ| ಪ್ರಭಾ ಮಲ್ಲಿಕಾರ್ಜುನ್‌, ಪ್ರೀತಿ ಬಕ್ಕೇಶ್‌, ರೇಖಾ ಗಣೇಶ್‌, ಜ್ಯೋತಿ ಮುರುಗೇಶ್‌, ಕುಟುಂಬದವರು, ಸಂಬಂಧಿಕರು, ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next