ಸಿಂಧನೂರು: ತಾಲೂಕಿನ ಸೋಮಲಾಪುರ ಗ್ರಾಮಕ್ಕೆ ಹೊಂದಿ ಕೊಂಡಂತೆ ನಿರ್ಮಿಸುತ್ತಿರುವ ಬೃಹತ್ ಕೆರೆಯಿಂದ ಅಪಾಯವಿದ್ದು, ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ನೇತೃತ್ವದಲ್ಲಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ನಿಯೋಗದ ಬಳಿ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು. ಆರು ಎಕರೆಯಷ್ಟು ವಿಸ್ತೀರ್ಣದ ಕೆರೆ ನಿರ್ಮಿಸುತ್ತಿರುವ ಖಾಸಗಿ ವ್ಯಕ್ತಿಯೊಬ್ಬರೂ 40 ಅಡಿಗೂ ಹೆಚ್ಚಿನ ಆಳ ತೋಡಿಸಿದ್ದಾರೆ. ಗ್ರಾಮದ ಪಕ್ಕದಲ್ಲಿಯೇ ಕೆರೆ ಇದ್ದು, ಯಾವುದೇ ಸುತ್ತುಬೇಲಿ ಹಾಕಿಲ್ಲ. ಇತ್ತೀಚೆಗೆ ಬಾಲಕನೊಬ್ಬ ಕೆರೆಯಲ್ಲಿ ಸಿಲುಕಿ ಮೃತಪಟ್ಟಿದ್ದು, ಅಪಾಯದ ಭೀತಿ ಹೆಚ್ಚಾಗಿದೆ.
ಹೆಚ್ಚಿನ ಅನಾಹುತ, ಅವಘಡ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. 60 ಅಡಿ ಆಳದಷ್ಟು ಕೊರೆಸಲು ಮುಂದಾಗಿದ್ದು, ಇಂತಹ ಬೃಹತ್ ಕೆರೆಯಲ್ಲಿ ಹೋಗಿ ಯಾರಾದರೂ ಬಿದ್ದರೆ, ಬದುಕುಳಿಯುವುದಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನಿಯಮ ಗಾಳಿಗೆ ತೂರಿ ಕೆರೆ ನಿರ್ಮಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಅಧಿಕಾರಿಗಳಿಗೆ ಲಿಖೀತ ದೂರು ಸಲ್ಲಿಸುವುದಾಗಿ ಗ್ರಾಮಸ್ಥರು ತಿಳಿಸಿದರು.
ಊರು ಪಕ್ಕದಲ್ಲೇ ಇಂತಹ ದೊಡ್ಡ ಕೆರೆ ನಿರ್ಮಿಸಿದರೆ, ಯಾರಾದರೂ ಬಿದ್ದು ಸಾಯುವ ಅಪಾಯ ಇರುತ್ತದೆ. ಗ್ರಾಮಸ್ಥರ ದೂರು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಒತ್ತಾಯಿಸಿದರು.
ಈ ವೇಳೆ ರಾಗಲಪರ್ವಿ ಜಿಪಂ ಕ್ಷೇತ್ರದ ಮಾಜಿ ಸದಸ್ಯ ಎನ್. ಶಿವನಗೌಡ ಗೋರೆಬಾಳ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಹನುಮೇಶ್ ಸಾಲಗುಂದಾ, ಬಿಜೆಪಿ ಯುವ ಘಟಕದ ಅಧ್ಯಕ್ಷ ಸಿದ್ದು ಹೂಗಾರ, ತಾಪಂ ಮಾಜಿ ಸದಸ್ಯರಾದ ಹಂಸರಾಜ ಭೋವಿ, ಗಂಗಾಧರ ಹೂಗಾರ, ಸಿದ್ದು ಮಾಡಸಿರವಾರ ಸೇರಿದಂತೆ ಇತರರಿದ್ದರು.