Advertisement

ರೈಲು ನಿಲ್ದಾಣ, ರೈಲುಗಳಲ್ಲಿ ಕಳವು ದುಪ್ಪಟ್ಟು

01:01 PM Sep 17, 2022 | Team Udayavani |

ಬೆಂಗಳೂರು: ರಾಜ್ಯದ ರೈಲ್ವೆ ನಿಲ್ದಾಣ ಹಾಗೂ ಸಂಚರಿಸುವ ರೈಲುಗಳಲ್ಲಿ ಸರಗಳವು, ಪಿಕ್‌ ಪಾಕೆಟ್‌ ಸೇರಿ ಕಳವು ಪ್ರಕರಣಗಳು ಹೆಚ್ಚಾಗು ತ್ತಿದ್ದು, ಅಪರಾಧ ಕೃತ್ಯ ನಿಯಂತ್ರಿಸಲು ರೈಲ್ವೆ ಪೊಲೀಸ್‌ ವಿಭಾಗಕ್ಕೆ ಸಿಬ್ಬಂದಿ ಕೊರತೆ ಸವಾಲು ಎದುರಾಗಿದೆ.

Advertisement

ರಾಜ್ಯದ ಬಹುತೇಕ ರೈಲುಗಳಲ್ಲಿ ಜೇಬು ಗಳ್ಳತನ, ಚಿನ್ನಾಭರಣ, ಲ್ಯಾಪ್‌ಟಾಪ್‌, ಮೊಬೈಲ್‌ ಕಳವು ಕೇಸ್‌ಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2021ರಲ್ಲಿ ರೈಲ್ವೆ ಪೊಲೀಸ್‌ ವಿಭಾಗದಲ್ಲಿ 638 ಕಳ್ಳತನ, 30 ದರೋ ಡೆ ಪ್ರಕರಣ ದಾಖಲಾದರೆ, 2022ರಲ್ಲಿ ಆಗಸ್ಟ್‌ವರೆಗೆ 614 ಕಳ್ಳತನ, 28 ದರೋ ಡೆ ಕೇಸ್‌ ದಾಖಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಕಳ್ಳತನ ಪ್ರಕರಣ ದುಪ್ಪಟ್ಟಾಗಿದೆ.

ರೈಲ್ವೆ ಪೊಲೀಸ್‌ ಇಲಾಖೆಗೆ 900 ಹುದ್ದೆಗಳು ಮಾತ್ರ ಮಂಜೂರಾಗಿದ್ದು, ಈ ಪೈಕಿ 860 ಮಂದಿ ಪೊಲೀಸ್‌ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 40 ಹುದ್ದೆ ಖಾಲಿ ಉಳಿದಿವೆ. ಜತೆಗೆ ಹೆಚ್ಚುತ್ತಿರುವ ಪ್ರಕರಣಗಳಿಗೆ ತಕ್ಕಂತೆ ಹೊಸದಾಗಿ 600 ಪೊಲೀಸ್‌ ಸಿಬ್ಬಂದಿ ನೇಮಿಸುಂತೆ ರೈಲ್ವೆ ಪೊಲೀಸ್‌ ಇಲಾಖೆಯು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರೈಲ್ವೆ ಪೊಲೀಸ್‌ ಸಿಬ್ಬಂದಿ ಕೊರತೆಯಿಂದಾಗಿ ಕಳವು ಗ್ಯಾಂಗ್‌ಗಳು ಅಡೆತಡೆಯಿಲ್ಲದೆ ತಮ್ಮ ಕೃತ್ಯ ಮುಂದುವರಿಸಿವೆ.

ತಮಿಳುನಾಡು, ಆಂಧ್ರ, ರಾಜಸ್ಥಾನ, ಬಿಹಾರ ಮೂಲದ ಹತ್ತಾರು ಪ್ರತ್ಯೇಕ ತಂಡಗಳು ಸಕ್ರಿಯವಾಗಿದ್ದು, ರೈಲ್ವೆ ಪ್ರಯಾಣಿಕರ ಮೌಲ್ಯಯುತ ವಸ್ತುಗಳನ್ನು ದೋಚುವುದೇ ಈ ಗ್ಯಾಂಗ್‌ನ ಕಾಯಕ. ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿ ರಾಜ್ಯಾದ್ಯಂತ ರೈಲ್ವೆ ನಿಲ್ದಾಣಗಳು ಹಾಗೂ ಸಂಚರಿಸುವ ರೈಲುಗಳಲ್ಲಿ ಬೆಲೆ ಬಾಳುವ ವಸ್ತುಗಳೊಂದಿಗೆ ತೆರಳುವ ಪ್ರಯಾಣಿಸುವವರೇ ಈ ಗ್ಯಾಂಗ್‌ನ ಟಾರ್ಗೆಟ್‌.

ತಾವು ಗುರಿಯಾಗಿಸಿದ ಪ್ರಯಾಣಿಕರನ್ನೇ ಹಿಂಬಾಲಿಸಿಕೊಂಡು ಹೋಗುವ ಗ್ಯಾಂಗ್‌, ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಲ್ಯಾಪ್‌ಟಾಪ್‌, ಮೊಬೈಲ್‌, ದುಡ್ಡು ಲಪಟಾಯಿಸುವ ಪ್ರಕರಣಗಳು ನಿತ್ಯ ದಾಖಲಾಗುತ್ತಿವೆ. ಈ ತಂಡದಲ್ಲಿ ತೆಳ್ಳಗಿರುವ ವ್ಯಕ್ತಿಗಳು ಕೃತ್ಯ ಎಸಗಿ ರೈಲಿನ ಬದಿಯಲ್ಲಿರುವ ಇಂಜಿನ್‌ನಲ್ಲಿ ಮಲಗಿಕೊಂಡು ಕಣ್ಮರೆಯಾಗುತ್ತಾರೆ. ಇನ್ನು ಕೆಲವರು ರೈಲುಗಳು ನಿಲ್ದಾಣದಿಂದ ಕೊಂಚ ದೂರ ನಿಧಾನ ವಾಗಿ ಚಲಿಸುತ್ತಿರುವಾಗ ಕಿಟಕಿ ಬದಿ ಕುಳಿತು ಕೊಳ್ಳುವ ಮಹಿಳೆಯರ ಮಾಂಗಲ್ಯ ಸರ ಕಸಿಯುತ್ತಾರೆ. ಸಿಸಿ ಕ್ಯಾಮೆರಾ ಅಳವಡಿಸಿರುವ ಸ್ಥಳಗಳಲ್ಲಿ ಈ ಗ್ಯಾಂಗ್‌ ಕೃತ್ಯ ಎಸಗುವುದಿಲ್ಲ. ತಮ್ಮ ಸುಳಿವು ಸಿಗದಂತೆ ಮಾಸ್ಕ್ ಧರಿಸಿಕೊಂಡೇ ಓಡಾಡುತ್ತಾರೆ. ರಾಜ್ಯದಲ್ಲಿ ರೈಲು ನಿಲ್ದಾಣ ಹಾಗೂ ರೈಲುಗಳಲ್ಲಿ ಕಳ್ಳತನ, ಸರಗಳ್ಳತನ ಕೃತ್ಯ ಎಸಗುವ ಅಂತಾರಾಜ್ಯದ ಹತ್ತಾರು ಗ್ಯಾಂಗ್‌ಗಳು ಹುಟ್ಟಿಕೊಂಡಿದ್ದು, ಅಂತಹ ತಂಡವನ್ನು ಮಟ್ಟ ಹಾಕಲು ರೈಲ್ವೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ ಎಂದು ರೈಲ್ವೆ ಎಸ್‌ಪಿ ಡಿ.ಆರ್‌.ಸಿರಿಗೌರಿ ತಿಳಿಸಿದ್ದಾರೆ.

Advertisement

ಇಂತಹ ಕಳ್ಳರ ತಂಡಗಳು ರಾಜ್ಯದ ವಿವಿಧ ರೈಲ್ವೆ ನಿಲ್ದಾಣ ಹಾಗೂ ರೈಲುಗಳಲ್ಲಿ ಸಕ್ರಿಯವಾಗಿ ರುವುದು ಪತ್ತೆಯಾಗಿದೆ. ಈ ಗ್ಯಾಂಗ್‌ ಅನ್ನು ಮಟ್ಟಹಾಕಲೆಂದೇ ರೈಲ್ವೆ ಪೊಲೀಸ್‌ ವಿಭಾಗದಲ್ಲಿರುವ ಸಿಬ್ಬಂದಿಯನ್ನೇ ಬಳಸಿಕೊಂಡು ವಿಶೇಷ ತಂಡ ರಚಿಸಲಾಗಿದೆ. ಈ ಗ್ಯಾಂಗ್‌ನ ಕೆಲ ಸದಸ್ಯರು ಕಳೆದ 2 ದಿನಗಳ ಹಿಂದೆ ಪೊಲೀಸ್‌ ತಂಡದ ಬಲೆಗೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಮುಂಜಾನೆ 3-4 ಗಂಟೆಗೆ ಪ್ರಯಾಣಿಕರು ರೈಲಿನಲ್ಲಿ ನಿದ್ದೆಗೆ ಜಾರಿದಾಗಲೇ ಇಂತಹ ಕಳ್ಳರ ತಂಡ ಕೃತ್ಯ ಎಸಗುತ್ತದೆ. ರೈಲ್ವೆ ಪ್ರಯಾಣಿಕರು ಇಂತಹ ತಂಡಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಅಪರಾಧ ಕೃತ್ಯ ನಿಯಂತ್ರಣ ಸವಾಲಾಗಿದೆ. – ಡಿ.ಆರ್‌.ಸಿರಿಗೌರಿ, ಎಸ್‌.ಪಿ., ಬೆಂಗಳೂರು ರೈಲ್ವೆ ವಿಭಾಗ

 

– ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next