Advertisement

ಮೌಲ್ಯದ ಕಡೆ ಕೊಂಡೊಯ್ಯುವ ರಂಗಭೂಮಿ : ಭಂಡಾರಿ

08:21 PM Mar 28, 2021 | Team Udayavani |

ಸಾಗರ: ರಂಗಭೂಮಿ ಮನುಷ್ಯನೊಳಗಿನ ಪ್ರೇಕ್ಷಕರನ್ನು ಬದಲಾಯಿಸುತ್ತಾ ಮೌಲ್ಯದ ಕಡೆ ಕೊಂಡೊಯ್ಯುತ್ತದೆ. ಇತರ ಎಲ್ಲ ಮಾಧ್ಯಮಗಳಿಗಿಂತ ರಂಗಭೂಮಿ ಮಾಧ್ಯಮ ಪ್ರೇಕ್ಷಕ ಮತ್ತು ನಟನ ನಡುವೆ ನಿಕಟ ಸಂಪರ್ಕ ಹೊಂದಿದ್ದು, ಕಾಲಕಾಲಕ್ಕೆ ಬದಲಾಗುತ್ತಿರುವ ಮೌಲ್ಯವನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ ಎಂದು ರಂಗ ವಿಮರ್ಶಕ ವಿಠ್ಠಲ್‌ ಭಂಡಾರಿ ತಿಳಿಸಿದರು.

Advertisement

ಇಲ್ಲಿನ ಎಸ್‌.ಎನ್‌. ನಗರದ ಭೂಮಿ ರಂಗಮನೆಯಲ್ಲಿ ಶನಿವಾರ ಸ್ಪಂದನ ಸಂಸ್ಥೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಂಗಭೂಮಿ ಪ್ರೇಕ್ಷಕರ ಜೊತೆ ನೇರ ಅನುಸಂಧಾನ ಮಾಡುವುದರಿಂದ ಇದು ನೋಡುಗರಿಗೆ ಹೆಚ್ಚು ಆಪ್ತ ಎನಿಸುತ್ತದೆ ಎಂದರು.

ಹಲವು ಬದಲಾವಣೆ, ಚಳುವಳಿಗಳು ಮೊದಲ್ಗೊಳ್ಳುವಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸಿದೆ. ಆಯಾ ಕಾಲ, ನಟ, ಪ್ರೇಕ್ಷಕರ ಮನಸ್ಥಿತಿಗೆ ಅನುಗುಣವಾಗಿ ರಂಗಭೂಮಿ ಬದಲಾಗುತ್ತಾ ಬಂದರೂ ಸತ್ಯದರ್ಶನ ಸಂದರ್ಭದಲ್ಲಿ ಯಾವುದೇ ರಾಜಿ ರಂಗಭೂಮಿ ಮಾಡಿಕೊಂಡಿಲ್ಲ. ಕೊರೊನಾದಂತಹ ಸಂದರ್ಭದಲ್ಲಿ ಸಹ ರಂಗಭೂಮಿ, ರಂಗನಟರು ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಇಂತಹ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ರಂಗ ಸನ್ಮಾನ ಸ್ವೀಕರಿಸಿ ಮಾತನಾಡಿದ ಪರಶುರಾಮ್‌ ಸೂರನಗದ್ದೆ, ಗ್ರಾಮೀಣ ಪ್ರದೇಶದ ಭಾಷೆ, ಪರಿಸರ ಹಾಗೂ ಜನಜೀವನವನ್ನು ರಂಗಭೂಮಿಗೆ ಅಳವಡಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಿಕೊಂಡು ಬಂದಿದ್ದೇನೆ. ನಾವು ಬದುಕಿನ ಜೊತೆಗೆ ರಂಗಭೂಮಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ರಂಗಭೂಮಿಗೆ ವಿಶೇಷವಾದ ಶಕ್ತಿಯಿದ್ದು ಅದು ವ್ಯಕ್ತಿತ್ವ ವಿಕಸನದ ಜೊತೆಗೆ ಮೌಲ್ಯವನ್ನು ಬಿತ್ತುತ್ತದೆ ಎಂದರು. ವಿಶ್ವರಂಗಭೂಮಿ ದಿನದ ಅಂಗವಾಗಿ ಸೂರನಗದ್ದೆ ಭೀರೇಶ್ವರ ನಾಟ್ಯ ಸಂಘದ ಜೆ. ಪರಶುರಾಮ್‌ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ರೈತಸಂಘದ ಮಂಜುನಾಥ ಗೌಡ, ಎನ್‌.ಡಿ. ವಸಂತಕುಮಾರ್‌, ಶಿವಾನಂದ ಕುಗ್ವೆ, ಸತೀಶ್‌ ಶೆಣೈ ಇನ್ನಿತರರು ಇದ್ದರು. ಎಂ.ವಿ. ಪ್ರತಿಭಾ ರಾಘವೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್‌ ಶೇಟ್‌ ಸನ್ಮಾನಿತರ ಪರಿಚಯ ಮಾಡಿದರು. ಭೂಮಿ ರಂಗಭೂಮಿ ಸಂದೇಶ ಓದಿದರು. ಎಂ.ರಾಘವೇಂದ್ರ ನಿರೂಪಿಸಿದರು. ನಂತರ ನಾಗೇಂದ್ರ ಕುಮಟಾ ಮತ್ತು ಸಂಗಡಿಗರಿಂದ ರಂಗಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಸ್ಪಂದನ ಸಂಸ್ಥೆ ವತಿಯಿಂದ ಪಿ. ಲಂಕೇಶ್‌ ಮೂಲಕತೆ ಆಧರಿಸಿದ, ಎಂ.ವಿ. ಪ್ರತಿಭಾ ನಿರ್ದೇಶಿಸಿ ರಂಗರೂಪಕ್ಕೆ ತಂದ “ಮುಟ್ಟಿಸಿಕೊಂಡವರು’ ನಾಟಕ ಪ್ರದರ್ಶನ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next