ಕೊರೊನಾ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿದೆ. ದೊಡ್ಡ ದೊಡ್ಡ ಉದ್ಯಮಗಳೇ ನೆಲಕಚ್ಚುವಂತಹ ಸ್ಥಿತಿ ತಲುಪಿವೆ. ಇದರಿಂದ ಮನರಂಜನೆ ಕ್ಷೇತ್ರವಾಗಿರುವ ಸಿನಿಮಾರಂಗವೂ ಹೊರತಲ್ಲ. ಹೌದು, ಸಿನಿಮಾ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇಲ್ಲಿ ದುಡಿಯೋ ಮನಸ್ಸುಗಳು ಕೂಡ ಕಂಗಾಲಾಗಿವೆ. ಈಗ ಕಿರುತೆರೆ ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಹಾಗೆಯೇ, ಸಿನಿಮಾಗಳ ಡಬ್ಬಿಂಗ್, ಎಡಿಟಿಂಗ್, ಗ್ರಾಫಿಕ್ಸ್, ಹಿನ್ನೆಲೆ ಸಂಗೀತ ಇತ್ಯಾದಿ ಕೆಲಸಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದೆ. ಚಿತ್ರೀಕರಣಕ್ಕೆ ಹಾಗೂ ಚಿತ್ರಮಂದಿರಗಳಿಗೆ ಮಾತ್ರ ಇನ್ನೂ ಅನುಮತಿ ಸಿಕ್ಕಿಲ್ಲ.
|
ಸಿಗುವುದು ಯಾವಾಗ ಅನ್ನೋದೇ ಗೊತ್ತಿಲ್ಲ. ಇವೆಲ್ಲದರ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಚೇತರಿಕೆಯಂತೂ ತುಂಬಾನೇ ಕಷ್ಟವಿದೆ. ಚಿತ್ರಮಂದಿರ ಮಾಲೀಕರು, ಪ್ರದರ್ಶಕರ ಪ್ರಕಾರ ಚಿತ್ರಮಂದಿರಗಳ ಚೇತರಿಕೆಗೆ ಕನಿಷ್ಟ ಒಂದು ವರ್ಷ ಸಮಯ ಬೇಕು.ಹಾಗೊಂದು ವೇಳೆ ಕೊರೊನಾ ವೈರಸ್ ಅಬ್ಬರ ಇನ್ನೂ ಜೋರಾದರೆ, ಚಿತ್ರಮಂದಿರಗಳ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತೆ. ಅವುಗಳ ಚೇತರಿಕೆಗೆ ಎರಡು ವರ್ಷ ಹಿಡಿದರೂ ಅಚ್ಚರಿ ಇಲ್ಲ ಎಂಬುದು ಅವರುಗಳ ಮಾತು.
ದಿನವೊಂದಕ್ಕೆ 10 ಕೋಟಿ ನಷ್ಟ: ಕೊರೊನಾ ತಂದ ಸಂಕಟ ಅಷ್ಟಿಷ್ಟಲ್ಲ. ರಾಜ್ಯದಲ್ಲಿ 615 ಸಿಂಗಲ್ ಥಿಯೇಟರ್‌ಗಳಿವೆ. ಸುಮಾರು 240 ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್ ಇದೆ. ಇವುಗಳಿಂದ ದಿನ ಒಂದಕ್ಕೆ ಏನಿಲ್ಲವೆಂದರೂ 10 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಈಗ ಲಾಕ್‌ಡೌನ್‌ನಿಂದಾಗಿ ದಿನವೊಂದಕ್ಕೆ ಚಿತ್ರಮಂದಿರಗಳಿಂದ ಅಂದಾಜು 10 ಕೋಟಿ ರೂಪಾಯಿ ನಷ್ಟ ಎನ್ನಲಾಗುತ್ತಿದೆ. ಈ ಕುರಿತು ಮಾಹಿತಿ ಕೊಡುವ ಚಿತ್ರಮಂದಿರ ಮಾಲೀಕ ಕೆ.ವಿ.ಚಂದ್ರಶೇಖರ್, ದಿನಕ್ಕೆ 10 ಕೋಟಿ ರೂಪಾಯಿನಂತೆ ಲೆಕ್ಕ ಹಾಕಿದರೆ, ಇಲ್ಲಿಯವರೆಗೆ ಮುಚ್ಚಿರುವ ಚಿತ್ರಮಂದಿರಗಳಿಂದ ಎಷ್ಟು ನಷ್ಟ ಆಗಿದೆ ಎಂಬುದಕ್ಕೆ ಲೆಕ್ಕ ಸಿಗುತ್ತದೆ. ಚಿತ್ರರಂಗದಿಂದ ಏನಿಲ್ಲವೆಂದರೂ ಸರ್ಕಾರಕ್ಕೆ ವರ್ಷಕ್ಕೆ 450 ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಹೋಗುತ್ತಿತ್ತು. ಆದರೆ, ಚಿತ್ರಮಂದಿರಗಳು ನಷ್ಟ ಅನುಭವಿಸಿದಂತೆ, ಸರ್ಕಾರಕ್ಕೂ ನಷ್ಟವಾಗಿದೆ. ಚಿತ್ರರಂಗದಿಂದ ಶೇ.20 ರಷ್ಟು ಸರ್ಕಾರಕ್ಕೂ ನಷ್ಟ ಆಗಿದೆ. ಚಿತ್ರಮಂದಿರಗಳು ಸದ್ಯದ ಪರಿಸ್ಥಿತಿಯಲ್ಲಿ ಚೇತರಿಸಿಕೊಳ್ಳುವುದು ತುಂಬಾನೇ ಕಷ್ಟವಿದೆ.
ಶೇ.100 ರಷ್ಟು ಚಿತ್ರಮಂದಿರಗಳು ಸಮಸ್ಯೆಗೆ ತುತ್ತಾಗಿವೆ. ಚಿತ್ರಮಂದಿರಗಳ ಮಾಲೀಕರು, ಪ್ರದರ್ಶಕರಿಗೆ ಈಗ ಎಲ್ಲವೂ ಮೈಮೇಲೆ ಬಂದಿವೆ. ಸಿಬ್ಬಂದಿಗೆ ವೇತನ ಇರಬಹುದು, ಅವರ ಪಿಎಫ್ ಇರಬಹುದು ಇತ್ಯಾದಿ ಕೆಲಸಗಾರರ ಖರ್ಚು ವೆಚ್ಚ ಎಲ್ಲವನ್ನೂ ಭರಿಸಬೇಕಾದ ಸ್ಥಿತಿ ಇದೆ. ಇದಷ್ಟೇ, ಅಲ್ಲ, ಚಿತ್ರಮಂದಿರಗಳು ಸ್ಥಗಿತಗೊಂಡಿದ್ದರೂ, ಮಿನಿಮಮ್ ಪವರ್ ಚಾರ್ಜಸ್ ಕಟ್ಟಲೇಬೇಕು. ವಾಟರ್ ಸಪ್ಲೆ ಚಾರ್ಜಸ್ ಕೊಡಬೇಕು. ಇದರೊಂದಿಗೆ ಕೆಲಸ ಮಾಡುವ ಸಿಬ್ಬಂದಿ ಸಮಸ್ಯೆಯನ್ನೂ ಆಲಿಸಬೇಕು. ಇಲ್ಲಿಗೆ ಬಿದ್ದಿರುವ ಪೆಟ್ಟನ್ನು ನಾವೇ ತುಂಬಿಕೊಳ್ಳಬೇಕು ಹೊರತು, ಯಾರೂ ತುಂಬಿಕೊಡಲ್ಲ. ಹೀಗಾಗಿ ಚಿತ್ರಮಂದಿರಗಳು ಚೇತರಿಸಿಕೊಳ್ಳೋಕೆ ಒಂದು ವರ್ಷ ಬೇಕೇ ಬೇಕು. ಹಾಗೊಂದು ವೇಳೆ, ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದ್ದಲ್ಲಿ, ಎರಡು ವರ್ಷ ಹಿಡಿದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ಕೆ.ವಿ.ಚಂದ್ರಶೇಖರ್.
ಸಾಮಾಜಿಕ ಅಂತರವಿದ್ದರೂ ಕಷ್ಟ: ಕೇಂದ್ರ ಸರ್ಕಾರ ಚಿತ್ರಮಂದಿರಗಳು, ಹೋಟೆಲ್, ಮಾಲ್‌ಗಳಿಗೆ ಇನ್ನೂ ಅನುಮತಿ ನೀಡಿಲ್ಲ. ಹಾಗೊಂದು ವೇಳೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದರೂ, ಅದು ಸಾಧ್ಯವಾಗದ ಮಾತು. ಚಿತ್ರಮಂದಿರಗಳಲ್ಲಿ ಹೇಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಿದೆ? ಇದು ಕಷ್ಟದ ಮಾತು. ಯಾಕೆಂದರೆ, ಒಂದು ಆಸನದಿಂದ ಎರಡು ಆಸನದವರೆಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಚಿತ್ರಪ್ರದರ್ಶನಕ್ಕೆ ಅನುಮತಿ ಸಿಕ್ಕರೂ ಅದು ಕಷ್ಟ. ಯಾಕೆಂದರೆ, ಮೊದಲೇ ಚಿತ್ರಮಂದಿರಗಳಲ್ಲಿ ಜನರು ರುತ್ತಿರಲಿಲ್ಲ. ಈಗ ಕೊರೊನಾ ಕಾಣಿಸಿಕೊಂಡ ಬಳಿಕ ಅದರಲ್ಲೂ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದು ಅನುಮಾನ. ಸಾಮಾಜಿಕ ಅಂತರ ಕಾಪಾಡಿಕೊಂಡು ಸಿನಿಮಾ ನೋಡಿ ಹೊರ ಹೋಗುತ್ತಾರಾ ಎಂಬ ಪ್ರಶ್ನೆ ಕೂಡ ಎದ್ದಿದೆ. ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸಿನಿಮಾ ನೋಡಿದರೂ, ಚಿತ್ರಮಂದಿರಕ್ಕೆ ಎಷ್ಟು ನಷ್ಟ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಇದಂತೂ ಅಸಾಧ್ಯ ಎಂದು ಸಿನಿಪಂಡಿತರೊಬ್ಬರು ಹೇಳುತ್ತಾರೆ.
ಥಿಯೇಟರ್ ಮುಚ್ಚುವ ಯೋಚನೆ: ಸರ್ಕಾರಿಂದ ಇದುವರೆಗೂ ಪ್ರದರ್ಶಕರಿಗೆ ಯಾವುದೇ ಸಹಾಯವಿಲ್ಲ. ಅವರ ನೋವಿಗೆ ಯಾರ ಸ್ಪಂದನೆಯೂ ಇಲ್ಲ. ಯಾಕೆಂದರೆ, ಪ್ರದರ್ಶಕರು ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಗೆ ವೇತನ ಸೇರಿದಂತೆ ಇತರೆ ಖರ್ಚು ಭರಿಸುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಅದು ಕಷ್ಟ ಸಾಧ್ಯ. ರಾಜ್ಯದಲ್ಲಿರುವ ಸಿಂಗಲ್ ಥಿಯೇಟರ್‌ಗಳಿಂದ ಸುಮಾರು 40 ಕೋಟಿ ರೂಪಾಯಿನಷ್ಟು ಸಂಬಳ, ಇತ್ಯಾದಿ ಖರ್ಚು ಹೋಗುತ್ತೆ. ಸಿನಿಮಾ ಥಿಯೇಟರ್‌ಗಳಿಂದಲೇ ಸರ್ಕಾರಕ್ಕೆ ತೆರಿಗೆಯೂ ಸಂದಾಯವಾಗುತ್ತೆ. ಈಗ ಪರಿಸ್ಥಿತಿ ಸರಿಯಿಲ್ಲವಾದ್ದರಿಂದ ಸರ್ಕಾರ ಚಿತ್ರಮಂದಿರ ಪ್ರದರ್ಶಕರ ನೋವಿಗೆ ಸ್ಪಂದಿಸಬೇಕಾಗಿದೆ. ಸಮಸ್ಯೆ ಆಲಿಸದೇ ಹೋದರೆ, ಅನಿವಾರ್ಯವಾಗಿ ಒಂದಷ್ಟು ಚಿತ್ರಮಂದಿರಗಳು ಮುಚ್ಚುವ ಸ್ಥಿತಿ ತಲುಪುತ್ತವೆ ಎಂಬ ಬಗ್ಗೆಯೂ ಪ್ರದರ್ಶಕರು ಹೇಳುತ್ತಿದ್ದಾರೆ. ಅದೇನೆ ಇರಲಿ, ಈಗ ಚಿತ್ರರಂಗ ಸಾಕಷ್ಟು ಸಮಸ್ಯೆಯಲ್ಲಿ ಸಿಲುಕಿದೆ.
ರಾಜ್ಯ ಸರ್ಕಾರ ಕಿರುತೆರೆಗೆ ಒಂದಷ್ಟು ಉಸಿರಾಡಲು ಅನುಮತಿ ಕೊಟ್ಟಂತೆ, ಸಿನಿಮಾರಂಗದ ಕೆಲ ಚಟುವಟಕೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಅದೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂಬ ಆದೇಶದೊಂದಿಗೆ. ಚಿತ್ರ ನಿರ್ಮಾಪಕರು ಏನಿಲ್ಲವೆಂದರೂ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸುಮಾರು 750 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಕೆಲವು ಸಿನಿಮಾಗಳು ಚಿತ್ರೀಕರಣದಲ್ಲಿದ್ದರೆ, ಕೆಲವು ಸಿನಿಮಾಗಳು ಡಬ್ಬಿಂಗ್, ಎಡಿಟಿಂಗ್, ಹಿನ್ನೆಲೆ ಸಂಗೀತ, ಗ್ರಾಫಿಕ್ಸ್, ಸಿಜಿ ಕೆಲಸಗಳಲ್ಲಿವೆ. ಅವೆಲ್ಲವೂ ಲಾಕ್ ಡೌನ್‌ನಿಂದಾಗಿ ಕೆಲಸ ಸ್ಥಗಿತಗೊಂಡಿದ್ದವು. ಈಗ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಂತಾಗಿದೆಯಾರೂ, ಚಿತ್ರೀಕರಣಕ್ಕೆ ಅನುಮತಿ ಸಿಕ್ಕು, ಚಿತ್ರಮಂದಿರಗಳಿಗೆ ಸಿನಿಮಾ ಬಂದಾಗಲಷ್ಟೇ ಸಿನಿಮಾರಂಗಕ್ಕೆ ರಂಗು ಇಲ್ಲವಾದರೆ ಇನ್ನೂ ಒಂದಷ್ಟು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ.